ನಟ ಸಲ್ಮಾನ್ ಖಾನ್ (Salman Khan) ಅವರು ಹಲವು ವಿವಾದಗಳ ಮೂಲಕ ಸುದ್ದಿ ಆಗಿದ್ದಾರೆ. ಅದರಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ಕೂಡ ಒಂದು. ಈ ಪ್ರಕರಣದಲ್ಲಿ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಸಲ್ಮಾನ್ ಖಾನ್ ಅವರಿಗೆ ಜೈಲು ಶಿಕ್ಷೆ ಕೂಡ ಆಯಿತು. ಆ ಬಳಿಕ ಮುಂಬೈ ಹೈಕೋರ್ಟ್ನಿಂದ ಅವರಿಗೆ ರಿಲೀಫ್ ಸಿಕ್ಕಿತು. ಸಲ್ಮಾನ್ ಖಾನ್ ಅವರು ಈ ಪ್ರಕರಣದಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಈ ವಿಚಾರವನ್ನು ಅವರ ತಂದೆ ಸಲಿಮ್ ಖಾನ್ (Salim Khan) ಹೇಳಿಕೊಂಡಿದ್ದರು.
2002ರಲ್ಲಿ ಸಲ್ಮಾನ್ ಖಾನ್ಗೆ ಸೇರಿದ ಕಾರು ಮುಂಬೈನ ಬಾಂದ್ರಾದಲ್ಲಿ ಪಾದಾಚಾರಿ ರಸ್ತೆ ಮೇಲೆ ನುಗ್ಗಿತ್ತು. ಅಲ್ಲಿ ಮಲಗಿದ್ದ ಅನೇಕರು ಮೃತಪಟ್ಟಿದ್ದರು. ಆ ಕಾರನ್ನು ಸಲ್ಮಾನ್ ಖಾನ್ ಕುಡಿದು ಓಡಿಸುತ್ತಿದ್ದರು ಎಂಬ ಆರೋಪ ಇತ್ತು. ಸೆಷನ್ ಕೋರ್ಟ್ 2015ರಲ್ಲಿ ಸಲ್ಮಾನ್ ಖಾನ್ಗೆ ಐದು ವರ್ಷ ಜೈಲು ಶಿಕ್ಷೆ ಘೋಷಿಸಿತು. ಕೆಲ ದಿನ ಸಲ್ಮಾನ್ ಖಾನ್ ಜೈಲಿನಲ್ಲಿ ಕಳೆದರು. ಆ ಬಳಿಕ ಡಿಸೆಂಬರ್ 2015ರಂದು ಬಾಂಬೆ ಹೈಕೋರ್ಟ್ ಸಲ್ಮಾನ್ ಖಾನ್ಗೆ ರಿಲೀಫ್ ನೀಡಿತು.
ಈ ವೇಳೆ ಸಲಿಮ್ ಖಾನ್ ಅವರು ಮಾತನಾಡಿದ್ದರು. ‘ಎಲ್ಲರಿಗೂ ಖುಷಿಯಾಗಿದೆ. ಸಲ್ಮಾನ್ ಖಾನ್ಗೆ ಕ್ಲೋಸ್ ಆಗಿರುವ ಪ್ರತಿಯೊಬ್ಬರಿಗೂ ಸಂತಸ ಆಗಿದೆ. ಕೆಲ ದಿನ ಸಲ್ಮಾನ್ ಜೈಲಿನಲ್ಲಿದ್ದ. ಅವನು ಈ ಕೇಸ್ಗಾಗಿ 20-25 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಇದರ ಜತೆ ಬೆಟ್ಟದಷ್ಟು ಒತ್ತಡ ಕೂಡ ಇತ್ತು’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ತೆಲುಗು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ ಸಲ್ಮಾನ್ ಖಾನ್? ಸ್ಟಾರ್ ನಿರ್ದೇಶಕನ ಆಫರ್ ರಿಜೆಕ್ಟ್
ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಹತ್ಯೆ ಮಾಡಿದ ಪ್ರಕರಣದಲ್ಲೂ ವಿಚಾರಣೆ ಎದುರಿಸುತ್ತಿದ್ದಾರೆ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್ಗಾಗಿ ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದ ವೇಳೆ ಸಲ್ಮಾನ್ ಖಾನ್ ಅವರು ಸಿನಿಮಾ ತಂಡದ ಕೆಲವರ ಜತೆ ಸಫಾರಿಗೆ ತೆರಳಿದ್ದರು. ಆ ಸಮಯದಲ್ಲಿ ಅವರು ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸೆಷನ್ಸ್ ನ್ಯಾಯಾಲಯ ಅವರಿಗೆ ಐದು ವರ್ಷ ಶಿಕ್ಷೆಯನ್ನೂ ವಿಧಿಸಿತ್ತು. ಆ ಬಳಿಕ ಸಲ್ಮಾನ್ ಖಾನ್ ಅವರು ಈ ಪ್ರಕರಣಲ್ಲಿ ಜಾಮೀನು ಪಡೆದು ಹೊರ ಬಂದಿದ್ದರು. ರಾಜಸ್ಥಾನ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ