
ಅಬುಧಾಬಿಯಲ್ಲಿ ನಡೆದ ಐಫಾ 2027 ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಎಂದಿನ ಹಾಸ್ಯಪ್ರಜ್ಞೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಶೇಷ ಸುದ್ದಿಗೋಷ್ಠಿಯಲ್ಲಿ ಕರೀನಾ ಕಪೂರ್, ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ದಿಗ್ಗಜರು ಭಾಗವಹಿಸಿದ್ದರು. ಸಲ್ಮಾನ್ ಖಾನ್ ಅವರ ತಮಾಷೆಯ ಮಾತುಗಳು ಹಾಗೂ ವರುಣ್ ಧವನ್ ಜೊತೆಗಿನ ಡ್ಯಾನ್ಸ್ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಕಾರ್ಯಕ್ರಮದ ವೇಳೆ ನಿರೂಪಣೆಯ ಬಗ್ಗೆ ವರುಣ್ ಧವನ್‌ಗೆ ಸಲ್ಮಾನ್ ಖಾನ್ ತಮಾಷೆಯ ಸಲಹೆ ನೀಡಿದರು. ‘ಆರು ಗಂಟೆಗಳ ಕಾಲ ನಿರೂಪಣೆ ಮಾಡುವುದನ್ನು ಬಿಟ್ಟು ಕೇವಲ ಡ್ಯಾನ್ಸ್ ಮಾಡಿ ಹೊರಟುಹೋಗಿ’ ಎಂದು ಟಿಪ್ಸ್ ಕೊಟ್ಟರು. ವರುಣ್ ಧವನ್, ಕರಣ್ ಜೋಹರ್ ಹಾಗೂ ಅನನ್ಯ ಪಾಂಡೆ ಈ ಬಾರಿಯ ಐಫಾ ಅವಾರ್ಡ್ಸ್ ನಿರೂಪಣೆ ಮಾಡಲಿದ್ದಾರೆ.
ಇದೇ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಐಫಾ ಅನುಭವದ ಬಗ್ಗೆ ಮಾತನಾಡುತ್ತಾ ಸಖತ್ ಥ್ರಿಲ್ ಆಗಿರುವುದಾಗಿ ತಿಳಿಸಿದರು. ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ಈ ರೀತಿಯ ವೇದಿಕೆ ಏರೋದು ಹಣಕ್ಕಾಗಿ. ಆದರೆ, ಎಲ್ಲರೂ ಇದನ್ನು ಓಪನ್ ಆಗಿ ಹೇಳಿಕೊಳ್ಳೋದಿಲ್ಲ. ಆದರೆ, ಸಲ್ಲು ಈ ವಿಷಯವನ್ನು ನೇರವಾಗಿ ಹೇಳಿದ್ದಾರೆ.
‘ನಾನು ಎಗ್ಸೈಟ್ ಆಗಿದ್ದೇನೆ’ ಎಂದು ರಶ್ಮಿಕಾ ಹೇಳುತ್ತಿದ್ದಂತೆ ಪಕ್ಕದಲ್ಲೇ ನಿಂತಿದ್ದ ಸಲ್ಮಾನ್ ಖಾನ್, ರಶ್ಮಿಕಾ ಹಣಕ್ಕಾಗಿ ಬಂದಿದ್ದಾರೆ ಎಂಬಂತೆ ತಮಾಷೆಯ ಸನ್ನೆ ಮಾಡಿದರು. ಸಲ್ಮಾನ್ ಅವರ ಈ ತಮಾಷೆಯ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಈ ವಿಡಿಯೋವನ್ನು ನೋಡಿ ನಕ್ಕಿದ್ದಾರೆ.
ಇನ್ನು ಈ ಬಾರಿಯ ಐಫಾ ಡಿಜಿಟಲ್ ಅವಾರ್ಡ್ಸ್ ನಿರೂಪಣೆಯ ಜವಾಬ್ದಾರಿಯನ್ನು ನಟ ಪಂಕಜ್ ತ್ರಿಪಾಠಿ ವಹಿಸಿಕೊಂಡಿದ್ದಾರೆ. ಮಿರ್ಜಾಪುರ್ ಖ್ಯಾತಿಯ ಅಲಿ ಫಜಲ್ ಮತ್ತು ಅಭಿಷೇಕ್ ಬ್ಯಾನರ್ಜಿ ಜೊತೆಗೂಡಿ ಅವರು ಮೊದಲ ಬಾರಿಗೆ ಹೋಸ್ಟ್ ಮಾಡಲಿದ್ದಾರೆ.
ಇದನ್ನೂ ಓದಿ: ‘ಮದುವೆ ಆಗು ಪ್ಲೀಸ್’ ಅಂತ ವಿಜಯ್ ಬಳಿ 100 ಬಾರಿ ಕೇಳಿಕೊಂಡಿದ್ದ ರಶ್ಮಿಕಾ ಮಂದಣ್ಣ
ಅಬುಧಾಬಿಯ ಯಸ್ ಐಲ್ಯಾಂಡ್‌ನಲ್ಲಿರುವ ಇತಿಹಾದ್ ಅರೆನಾದಲ್ಲಿ ಜನವರಿ 22 ಮತ್ತು 23 ರಂದು ಈ ಮಹಾಸಂಗಮ ನಡೆಯಲಿದೆ. ಸಲ್ಮಾನ್, ಕರೀನಾ, ಶಾಹಿದ್ ಹಾಗೂ ರಶ್ಮಿಕಾ ಅವರ ಅದ್ಭುತ ನೃತ್ಯ ಪ್ರದರ್ಶನಗಳು ಈ ಬಾರಿಯ ವೇದಿಕೆಯ ಮುಖ್ಯ ಆಕರ್ಷಣೆಯಾಗಲಿವೆ. ಬಾಲಿವುಡ್‌ನ ಈ ಅತಿ ದೊಡ್ಡ ಚಿತ್ರೋತ್ಸವಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.