ಬಾಲಿವುಡ್ನ ಭಾಯ್ಜಾನ್ ಸಲ್ಮಾನ್ ಖಾನ್ ಹಲವು ವರ್ಷಗಳಿಂದಲೂ ಒಂದೊಳ್ಳೆ ಹಿಟ್ ಸಿನಿಮಾ ಇಲ್ಲದೆ ತತ್ತರಿಸಿದ್ದಾರೆ. ಮಾಡಿದ ಎಲ್ಲ ಸಿನಿಮಾಗಳು ಒಂದರ ಹಿಂದೊಂದರಂತೆ ತೋಪು ಸೇರುತ್ತಿವೆ. ಭಾರಿ ನಿರೀಕ್ಷೆ ಇರಿಸಿದ್ದ ‘ಟೈಗರ್ 3’ ಸಿನಿಮಾ ಸಹ ಮಕಾಡೆ ಮಲಗಿತು. ಆದರೆ ಶಾರುಖ್ ಖಾನ್ ಮಾತ್ರ ಒಂದೇ ವರ್ಷದಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. ಸತತ ಸೋಲುಗಳಿಂದ ಕಂಗೆಟ್ಟ ಸಲ್ಮಾನ್ ಖಾನ್, ಇದೀಗ ತಮ್ಮ ಸಿನಿಮಾ ಆಯ್ಕೆ ಶೈಲಿ ಬದಲಿಸಿದಂತಿದ್ದಾರೆ. ಇಷ್ಟು ದಿನ ಬರೀ ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಲ್ಮಾನ್ ಖಾನ್ ಇದೀಗ ಭಿನ್ನ ಮಾದರಿ ಸಿನಿಮಾಗಳನ್ನು ಮಾಡುವ ನಿರ್ದೇಶಕರೊಟ್ಟಿಗೆ ಕೈ ಜೋಡಿಸಿದ್ದಾರೆ.
ಕ್ಲಾಸಿಕ್ ಎನಿಸಿಕೊಂಡಿರುವ ‘ಜಿಂದಗಿ ನಾ ಮಿಲೇಗಿ ದುಬಾರಾ’, ‘ಗಲ್ಲಿ ಬಾಯ್’ ಇನ್ನಿತರೆ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಜನಪ್ರಿಯ ನಿರ್ದೇಶಕಿ ಜೋಯಾ ಅಖ್ತರ್ ಜೊತೆಗೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದಾರೆ. ಜೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಸಲ್ಮಾನ್ ಖಾನ್ರ ಈ ಹಿಂದಿ ಸಿನಿಮಾಗಳ ರೀತಿ ಅಲ್ಲದೆ, ಬಹಳ ಭಿನ್ನವಾದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜೋಯಾ ಅಖ್ತರ್, ‘ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವುದು ಅತ್ಯದ್ಭುತ ಅನುಭೂತಿ ಆಗಲಿದೆ. ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ಆಸೆಯಿದೆ. ಆದರೆ ಸಲ್ಮಾನ್ ಖಾನ್, ಸೂಪರ್ ಸ್ಟಾರ್ ಅವರ ನಿರೀಕ್ಷೆಗಳ ಜೊತೆಗೆ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗಳೂ ಸಹ ಜೊತೆಗಿರುತ್ತವೆ. ಹಾಗಾಗಿ ಸಲ್ಮಾನ್ ಖಾನ್, ಅವರ ಅಭಿಮಾನಿಗಳು ಹಾಗೂ ನನಗೆ ಮೂವರಿಗೂ ಒಪ್ಪಿಗೆ ಆಗುವ ವಿಷಯದ ಹುಡುಕಾಟದಲ್ಲಿದ್ದೇನೆ. ವಿಷಯ ಸಿಕ್ಕಿದ ಕೂಡಲೇ ತಡ ಮಾಡುವುದಿಲ್ಲ’ ಎಂದಿದ್ದಾರೆ.
ಸಲ್ಮಾನ್ ಖಾನ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಪ್ರಸ್ತುತ ಚೋಪ್ರಾ ಫಿಲಮ್ಸ್ನ ಗೂಢಚಾರಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಅವರ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿರುವ ಹೊಸ ಆಕ್ಷನ್ ಸಿನಿಮಾ ಒಂದರಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತಮಿಳಿನ ಜನಪ್ರಿಯ ಆಕ್ಷನ್ ನಿರ್ದೇಶಕ ಎಆರ್ ಮುರುಗದಾಸನ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.