ಅಜಯ್ ದೇವಗನ್ಗೆ ನಮಸ್ಕಾರ ಮಾಡಿಲ್ಲ ಅಂತ ಹಿರಿಯ ನಟನನ್ನೇ ಸಿನಿಮಾದಿಂದ ತೆಗೆದ ನಿರ್ಮಾಪಕ
‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಅಜಯ್ ದೇವಗನ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಯುನೈಡೆಟ್ ಕಿಂಗ್ಡಮ್ನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದರೆ ಶೂಟಿಂಗ್ ಸೆಟ್ನಲ್ಲಿ ಕಲಾವಿದರ ನಡುವೆ ಕಿರಿಕ್ ಆದಂತಿದೆ. ಅಜಯ್ ದೇವಗನ್ ಅವರಿಗೆ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ವಿಜಯ್ ರಾಝ್ ಅವರನ್ನು ತೆಗೆದು ಹಾಕಿದ ಬಗ್ಗೆ ಸುದ್ದಿ ಆಗಿದೆ.
ಬಾಲಿವುಡ್ನ ‘ಸನ್ ಆಫ್ ಸರ್ದಾರ್ 2’ ಸಿನಿಮಾ ಸಿಕ್ಕಾಪಟ್ಟೆ ವಿವಾದ ಮಾಡಿಕೊಳ್ಳುತ್ತಿದೆ. ಈಗಾಗಲೇ ಈ ಸಿನಿಮಾದಿಂದ ನಟ ಸಂಜಯ್ ದತ್ ಅವರನ್ನು ಹೊರಗಿಡಲಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಮತ್ತೋರ್ವ ಹಿರಿಯ ನಟ ವಿಜಯ್ ರಾಝ್ ಅವರನ್ನು ಚಿತ್ರತಂಡದಿಂದ ತೆಗೆದು ಹಾಕಲಾಗಿದೆ. ಪಾತ್ರವರ್ಗದಲ್ಲಿ ಬದಲಾವಣೆ ಆಗುವುದು ಸಹಜ. ಆದರೆ ಅದಕ್ಕೆ ಕಾರಣ ಏನು ಎಂಬುದು ಮುಖ್ಯ. ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಹೀರೋ ಅಜಯ್ ದೇವಗನ್ಗೆ ವಿಜಯ್ ರಾಝ್ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ಅವರಿಗೆ ಗೇಟ್ ಪಾಸ್ ನೀಡಿದ್ದು ಅಚ್ಚರಿಯ ಸಂಗತಿ.
ಬಹುನಿರೀಕ್ಷಿತ ‘ಸನ್ ಆಫ್ ಸರ್ದಾರ್ 2’ ಚಿತ್ರದಲ್ಲಿ ಅಜಯ್ ದೇವಗನ್ ಅವರು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಯುನೈಡೆಟ್ ಕಿಂಗ್ಡಮ್ನಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗುತ್ತಿದೆ. ಶೂಟಿಂಗ್ ಸೆಟ್ನಲ್ಲಿ ಆಗಿದ್ದೇನು ಎಂಬುದನ್ನು ವಿಜಯ್ ರಾಝ್ ಹೇಳಿದ್ದಾರೆ. ‘ನಾನು ವ್ಯಾನಿಟಿ ವ್ಯಾನ್ನಿಂದ ಹೊರಬಂದು ನೋಡಿದಾಗ ಅಜಯ್ ದೇವಗನ್ ಅವರು 25 ಮೀಟರ್ ದೂರದಲ್ಲಿ ನಿಂತಿದ್ದರು. ಅವರು ಬ್ಯುಸಿ ಇದ್ದರು ಎಂಬ ಕಾರಣಕ್ಕಾಗಿ ನಾನು ಅವರನ್ನು ಮಾತನಾಡಿಸಿಲ್ಲ. 25 ನಿಮಿಷಗಳ ಬಳಿಕ ನಿರ್ಮಾಪಕರು ಬಂದು ನಿಮ್ಮನ್ನು ಸಿನಿಮಾದಿಂದ ತೆಗೆದುಹಾಕಿದ್ದೇವೆ ಅಂತ ತಿಳಿಸಿದರು’ ಎಂದಿದ್ದಾರೆ ವಿಜಯ್ ರಾಝ್.
‘ನನ್ನಿಂದ ಆದ ಏಕೈಕ ತಪ್ಪು ಎಂದರೆ ಅಜಯ್ ದೇವಗನ್ ಅವರನ್ನು ಮಾತನಾಡಿಸಿ ನಮಸ್ಕಾರ ಮಾಡದೇ ಇರುವುದು. ಚಿತ್ರತಂಡದ ಬೇರೆ ಯಾರನ್ನೂ ನಾನು ಭೇಟಿ ಮಾಡಿಲ್ಲ. ಅಜಯ್ ದೇವಗನ್ಗೆ ನಮಸ್ಕಾರ ಮಾಡಿಲ್ಲದ ಕಾರಣ, ಶೂಟಿಂಗ್ ಸೆಟ್ಗೆ ಬಂದು 25 ನಿಮಿಷಗಳ ಬಳಿಕ ನನ್ನನ್ನು ತೆಗೆದುಹಾಕಿದರು. ಇವರೆಲ್ಲ ತುಂಬ ಪ್ರಭಾವಿ ವ್ಯಕ್ತಿಗಳು’ ಎಂದು ವಿಜಯ್ ರಾಝ್ ಹೇಳಿದ್ದಾರೆ.
ಇದನ್ನೂ ಓದಿ: ಸಂಜಯ್ ದತ್ ಅಪರಾಧ ಹಿನ್ನೆಲೆಯಿಂದ ಚಿತ್ರತಂಡಕ್ಕೆ ತೊಂದರೆ; ನಟನಿಗೆ ಗೇಟ್ ಪಾಸ್?
ಅನೇಕ ಸಿನಿಮಾಗಳಲ್ಲಿ ನಟಿಸಿ ವಿಜಯ್ ರಾಝ್ ಅವರು ಫೇಮಸ್ ಆಗಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಶೂಟಿಂಗ್ ವೇಳೆ ಅವರು ಸರಿಯಾಗಿ ನಡೆದುಕೊಂಡಿಲ್ಲ ಹಾಗೂ ವಿಪರೀತಿ ಬೇಡಿಕೆ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಅವರನ್ನು ತೆಗೆದುಹಾಕಲಾಗಿದೆ ಎಂದು ಮಾಧ್ಯಮಗಳಿಗೆ ‘ಸನ್ ಆಫ್ ಸರ್ದಾರ್ 2’ ಸಿನಿಮಾದ ನಿರ್ಮಾಪಕರು ತಿಳಿಸಿದ್ದಾರೆ. ಈ ಬಗ್ಗೆ ಅಜಯ್ ದೇವಗನ್ ಇನ್ನಷ್ಟೇ ಮೌನ ಮುರಿಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.