
ಬಾಲಿವುಡ್ ನಟ ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ‘ಆಖ್ರಿ ಸವಾಲ್’ (Aakhri Sawal) ಸಿನಿಮಾ ಈಗ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಚಿತ್ರತಂಡ, ಇದೀಗ ಮತ್ತೊಂದು ವಿಶೇಷ ಸುದ್ದಿಯೊಂದಿಗೆ ಬಂದಿದೆ. ಈ ಚಿತ್ರವು ಭಾರತೀಯ ಸೈನ್ ಲ್ಯಾಂಗ್ವೇಜ್ (Indian Sign Language) ಅಥವಾ ಸಂಕೇತ ಭಾಷೆಯಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿತ್ರರಂಗದಲ್ಲಿ ಇದು ಹೊಸ ಪ್ರಯತ್ನ. ಸಾಮಾನ್ಯವಾಗಿ ಸಿನಿಮಾಗಳು ಎಲ್ಲರಿಗೂ ಲಭ್ಯವಿರುತ್ತವೆ. ಆದರೆ ಶ್ರವಣ ದೋಷವಿರುವವರಿಗೆ ಸಿನಿಮಾ ಅನುಭವ ಅಷ್ಟು ಸುಲಭವಲ್ಲ. ಈ ಕೊರತೆಯನ್ನು ನೀಗಿಸಲು ‘ಆಖ್ರಿ ಸವಾಲ್’ ತಂಡ ಮುಂದಾಗಿದೆ. ಭಾರತದಲ್ಲಿ ಸುಮಾರು 4ರಿಂದ 5 ಕೋಟಿ ಜನರು ದೃಷ್ಟಿ ಮತ್ತು ಶ್ರವಣ ದೋಷದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಚಿತ್ರವು ಅವರಿಗೂ ಲಭ್ಯವಾಗಲಿ ಎಂಬ ಉದ್ದೇಶದಿಂದ ದೊಡ್ಡ ಹೆಜ್ಜೆ ಇಟ್ಟಿದೆ.
ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಭಾರತೀಯ ಸಂಕೇತ ಭಾಷೆಯ ಆವೃತ್ತಿಯು ಚಿತ್ರಮಂದಿರಗಳಲ್ಲಿ ಲಭ್ಯವಿರಲಿದೆ. ‘ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ. ಅದು ಎಲ್ಲರಿಗೂ ತಲುಪುವ ಮಾಧ್ಯಮವಾಗಬೇಕು. ಈ ಚಿತ್ರದ ಮೂಲಕ ನಾವು ಕೋಟ್ಯಂತರ ವಿಶೇಷ ಚೇತನ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದೇವೆ’ ಎಂದು ಚಿತ್ರತಂಡ ತಿಳಿಸಿದೆ.
#AakhriSawal becoming the first film to release with born accessible #IndianSignLanguage on 8 May.*
Aakhri Sawal breaks new ground in cinematic accessibility, becoming the first #film to release with born accessible Indian Sign Language on 8 May. #tuesdayvibes #bollywood pic.twitter.com/3ma1BBEdfs
— Nikhil Nanda 🇮🇳 (@iamnikhilnanda) April 21, 2026
ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ ಮತ್ತು ಕಾರ್ಯವೈಖರಿಯನ್ನು ಆಧರಿಸಿದ ‘ಆಖ್ರಿ ಸವಾಲ್’ ಚಿತ್ರವು ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಖಿಲ್ ನಂದಾ ಮತ್ತು ಸಂಜಯ್ ದತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪುನೀತ್ ನಂದಾ, ಡಾ. ದೀಪಕ್ ಸಿಂಗ್, ಗೌರವ್ ದುಬೆ ಮತ್ತು ಉಜ್ವಲ್ ಆನಂದ್ ಅವರು ಸಹ-ನಿರ್ಮಾಪಕರು.
ಇದನ್ನೂ ಓದಿ: ಗಾಂಧಿ ಹತ್ಯೆ ಹಿಂದೆ ಆರ್ಎಸ್ಎಸ್ ಕೈವಾಡ ಇತ್ತಾ? ಇದು ‘ಆಖ್ರಿ ಸವಾಲ್’
ಉತ್ಕರ್ಷ್ ನೈತಾನಿ ಅವರು ಈ ಸಿನಿಮಾಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮೇ 8ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸಂಕೇತ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವ ಚಿತ್ರತಂಡದ ಪ್ರಯತ್ನಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ಈಗಾಗಲೇ ಚಿತ್ರದ ಟೀಸರ್ ಕೂಡ ಶ್ರವಣ ಭಾಷೆಯಲ್ಲಿ ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:44 pm, Tue, 21 April 26