ನಾಸಿರುದ್ದೀನ್ ಶಾ ಜನ್ಮದಿನ: ಅವರ ಬದುಕಿನ ಕುರಿತು ನಿಮಗೆ ತಿಳಿಯದ ಹಲವು ಸಂಗತಿಗಳು

| Updated By: shivaprasad.hs

Updated on: Jul 20, 2021 | 6:02 PM

Naseeruddin Shah: ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸತತವಾಗಿ ತೊಡಗಿಸಿಕೊಂಡಿರುವ ಅಪರೂಪದ ಪ್ರತಿಭೆ ನಾಸಿರುದ್ದೀನ್ ಶಾ. ಇತ್ತೀಚೆಗಷ್ಟೇ ಅನಾರೋಗ್ಯದಿಂದ ಗುಣಮುಖರಾಗಿ ಮನೆ ಸೇರಿದ್ದ ಅವರು ಇಂದು ತಮ್ಮ 71ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ನಾಸಿರುದ್ದೀನ್ ಶಾ ಜನ್ಮದಿನ: ಅವರ ಬದುಕಿನ ಕುರಿತು ನಿಮಗೆ ತಿಳಿಯದ ಹಲವು ಸಂಗತಿಗಳು
ನಾಸಿರುದ್ದೀನ್ ಶಾ (ಸಂಗ್ರಹ ಚಿತ್ರ)
Follow us on

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಪೂರ್ವ ನಟನೆಂದು ಗುರುತಿಸಿಕೊಂಡಿರುವ ನಾಸಿರುದ್ದೀನ್ ಶಾ ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆದವರು. ತಮ್ಮ ಸಿನಿ ವೃತ್ತಿ ಜೀವನದ ಜೊತೆಜೊತೆಗೆ ರಂಗಭೂಮಿಯ ಚಟುವಟಿಕೆಗಳಲ್ಲೂ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದು ಅವರ 71ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಕುರಿತು ನಿಮಗೆ ತಿಳಿಯದ ಹಲವು ಅಚ್ಚರಿಯ ಸಂಗತಿಗಳು ಇಲ್ಲಿವೆ.

ನಾಟಕದ ಪ್ರೀತಿಗಾಗಿ ತಂದೆಯಿಂದ ದೂರ:

ತಮ್ಮ ಆತ್ಮ ಕತೆಯಲ್ಲಿ ಹಲವಾರು ಆಶ್ಚರ್ಯಕರ ಸಂಗತಿಗಳನ್ನು ನಾಸಿರ್ ಬರೆದುಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿರುವುದು ತಮ್ಮ ತಂದೆಯಿಂದ ದೂರವಾಗಿದ್ದು. ಕಾರಣ, ಶಾಲೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸುತ್ತಿದ್ದ ನಾಸಿರ್ ನಂತರ ರಂಗಭೂಮಿಗೆ ಪ್ರವೇಶ ಮಾಡಿದರು. ಇದು ಅವರ ತಂದೆಗೆ ಒಪ್ಪಲಾರದ ಸಂಗತಿಯಾಗಿತ್ತು. ಇದೇ ಕಾರಣದಿಂದಾಗಿ ಈರ್ವರ ನಡುವೆ ಅಸಮಾಧಾನ ಮೂಡಿತು.

ರಂಗಭೂಮಿಯ ವಿದ್ಯಾರ್ಥಿ:

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿ ಪಡೆದ ನಾಸಿರ್, ನಂತರ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಈಗ ತಮ್ಮ ಪತ್ನಿ, ಮಗಳೊಂದಿಗೆ ತಮ್ಮದೇ ಆದ ರಂಗ ತಂಡ ಕಟ್ಟಿಕೊಂಡು ರಂಗಪ್ರಯೋಗಗಳನ್ನು ನಡೆಸುತ್ತಾರೆ. ಶಾ ಅವರು ನಟಿಸಿದ ಮೊದಲ ರಂಗ ಪ್ರಯೋಗ ಯಾವುದು ಗೊತ್ತೇ? ಶೇಕ್ಸ್​ಪಿಯರ್​ನ ‘ಮರ್ಚಂಟ್ ಆಫ್  ವೆನಿಸ್’.

ಹತ್ತೊಂಬತ್ತನೇ ವರ್ಷದಲ್ಲೇ ಮದುವೆ:

ನಾಸಿರುದ್ದೀನ್ ಶಾ ಅವರ ಮೊದಲ ಪತ್ನಿ ಮನಾರಾ ಸಿಕ್ರಿ (ಪರ್ವೀನ್ ಮುರಾದ್). ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಸಿರುದ್ದೀನ್ ಮತ್ತು ಮನಾರಾ ಅವರಿಗೆ ಹೀಬಾ ಎಂಬ ಮಗಳಿದ್ದಾರೆ. ನಂತರ, ಶಾ ಅವರು ರತ್ನಾ ಪಾಟಕ್ ಅವರನ್ನು ವಿವಾಹವಾದರು. ಇತ್ತೀಚೆಗೆ ನಿಧನರಾದ ಖ್ಯಾತ ನಟಿ ಸುರೇಖಾ ಸಿಕ್ರಿ ಮತ್ತು ಮನಾರಾ ಸಿಕ್ರಿ ಸಂಬಂಧಿಕರಾಗಿದ್ದರು ಎಂಬುದು ವಿಶೇಷ.

ಬಿಡುಗಡೆಗೂ ಮೊದಲೇ ಚೊಚ್ಚಲ ಚಿತ್ರದ ಪಾತ್ರಕ್ಕೆ ಕತ್ತರಿ:

ನಾಸಿರುದ್ದೀನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ರಾಜ್ ಕಪೂರ್ ಮತ್ತು ಹೇಮಾ ಮಾಲಿನಿ ಅಭಿನಯದ ‘ಸಪ್ನೊಂ ಕಾ ಸೌದಗರ್’ ಚಿತ್ರದಿಂದ. ಆದರೆ ಚಿತ್ರ ಬಿಡುಗಡೆಗೂ ಮುನ್ನವೇ ನಾಸಿರ್ ಅವರ ಪಾತ್ರವನ್ನು ಕತ್ತರಿಸಲಾಗಿತ್ತು. ನಂತರ ಶ್ಯಾಂ ಬೆನಗಲ್ ಅವರ ‘ನಿಶಾಂತ್’ ಚಿತ್ರದಲ್ಲಿ ನಾಸಿರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

64ರಲ್ಲಿ ಲೇಖಕ:

ನಾಸಿರುದ್ದೀನ್ ತಮ್ಮ 64ನೇ ವಯಸ್ಸಿನಲ್ಲಿ ಲೇಖನಿಯನ್ನು ಕೈಗೆತ್ತಿಕೊಂಡರು. ತಮ್ಮ ಆತ್ಮ ಕತೆಯನ್ನು(And Then One Day) ಬರೆದರು. ಸುಮ್ಮನೆ ಕಾಲಹರಣಕ್ಕೆಂದು ಬರೆಯಲು ಪ್ರಾರಂಭಿಸಿದ ನಾಸಿರುದ್ದೀನ್ ಅವರನ್ನು ಪ್ರಕಟಿಸಲು ಪ್ರೇರೇಪಿಸಿದವರು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹ.

ಹ್ಯಾರಿ ಪಾಟರ್​ನ ಡಂಬಲ್​ಡೋರ್ ಪಾತ್ರಕ್ಕೆ ಆಹ್ವಾನ:

ಭಾಷೆ, ವಯಸ್ಸನ್ನು ಮೀರಿ ಜನರನ್ನು ಸೆಳೆದಿರುವ ಹ್ಯಾರಿ ಪಾಟರ್ ಚಿತ್ರದ ಪ್ರಮುಖ ಪಾತ್ರ ‘ಆಲ್ಬಸ್ ಡಂಬಲ್​ಡೋರ್’ ಪಾತ್ರಕ್ಕೆ ಆಡಿಶನ್ ನೀಡಲು ನಾಸಿರುದ್ದೀನ್​ಗೆ ಆಹ್ವಾನ ಬಂದಿತ್ತು. ಆದರೆ ನಾಸಿರುದ್ದೀನ್​ಗೆ ಅದು ಬಹಳ ಆಸಕ್ತಿಯನ್ನೇನೂ ಮೂಡಿಸದ ಕಾರಣ ಅದನ್ನು ಕೈಬಿಟ್ಟರು.

ಮಹಾತ್ಮಾ ಗಾಂಧಿ ಪಾತ್ರಕ್ಕೆ ಆಡಿಶನ್:

ರಿಚರ್ಡ್ ಅಟ್ಟೆನ್​ಬರೋ ನಿರ್ದೇಶನದ ‘ಗಾಂಧಿ’ ಚಿತ್ರದ ಮಹಾತ್ಮ ಗಾಂಧಿ ಪಾತ್ರಕ್ಕೆ ಶಾ ಆಡಿಶನ್ ನೀಡಿದ್ದರು. ಕೊನೆಗೆ ಆ ಪಾತ್ರ ಬೆನ್ ಕಿಂಗ್ಸ್ಲೆ ಪಾಲಾಯಿತು.

ಅಮಿತಾಭ್​ರೊಂದದಿಗೆ ಇನ್ನೂ ತೆರೆ ಹಂಚಿಕೊಂಡಿಲ್ಲ:

ನಾಸಿರುದ್ದೀನ್ ಶಾ ಬಾಲಿವುಡ್​ನ ಪ್ರಮುಖ ಚಿತ್ರತಾರೆಯರೊಂದಿಗೆ ಈಗಾಗಲೇ ತೆರೆ ಹಂಚಿಕೊಂಡಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಅವರಿನ್ನೂ ಅಮಿತಾಭ್ ಬಚ್ಚನ್​ರೊಂದಿಗೆ ತೆರೆ ಹಂಚಿಕೊಂಡಿಲ್ಲ. ಇದಕ್ಕಾಗಿ ಅಭಿಮಾನಿಗಳು ಇನ್ನೂ ಕಾಯುತ್ತಲೇ ಇದ್ದಾರೆ.

ಪ್ರಶಸ್ತಿಗಳು:

ತಮ್ಮ ಬಣ್ಣದ ಬದುಕಿನ ಸಾಧನೆಗಳಿಗಾಗಿ ನಾಸಿರುದ್ದೀನ್ ಶಾ ಅವರಿಗೆ ರಾಷ್ಟ್ರದ ಉತ್ತಮ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ:

Indian Army Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡಿದ ಭಾರತೀಯ ಸೇನೆ; 1 ಲಕ್ಷ ರೂ.ವರೆಗೂ ವೇತನ ಪಡೆಯಬಹುದು

ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಆತಂಕ ದೂರ ಮಾಡಿ, ಮುಖದಲ್ಲಿ ಮಂದಹಾಸ ಮೂಡಿಸಲು ಬಂದ ಸೂಪರ್ ​ಹೀರೊಗಳು!

(Several rare facts which you didn’t know about Naseeruddin Shah who is celebrating his birthday today)