ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಶಾರುಖ್ ಖಾನ್, ಅಭಿಮಾನಿಗಳಿಗೆ ನಿರಾಸೆ

Shah Rukh Khan movie: 2024 ಹಾಗೂ 2025 ರಲ್ಲಿ ಶಾರುಖ್ ಖಾನ್ ನಟನೆಯ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಿಲ್ಲ. 2026ರಲ್ಲಿ ಶಾರುಖ್ ನಟನೆಯ ಸಿನಿಮಾ ನೋಡಲು ಕಾತರರಾಗಿದ್ದ ಅಭಿಮಾನಿಗಳು ಅದಕ್ಕಾಗಿ ಇನ್ನೂ ಸಾಕಷ್ಟು ಸಮಯ ಕಾಯಬೇಕಿದೆ. ಶಾರುಖ್ ಖಾನ್ ಇದೀಗ ‘ಕಿಂಗ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಶಾರುಖ್ ಖಾನ್, ಅಭಿಮಾನಿಗಳಿಗೆ ನಿರಾಸೆ
Shah Rukh Khan

Updated on: Jan 24, 2026 | 9:19 PM

ಕಳೆದ ಎರಡು ವರ್ಷ (2025) ಶಾರುಖ್ ಖಾನ್ (Shah Rukh Khan) ನಟನೆಯ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಿಲ್ಲ. 2023 ಶಾರುಖ್ ಖಾನ್ ಪಾಲಿಗೆ ಚಿನ್ನದ ವರ್ಷವಾಗಿತ್ತು. ಒಂದೇ ವರ್ಷದಲ್ಲಿ ಶಾರುಖ್ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿ, ಮೂರೂ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆದವು. ಆದರೆ 2024 ಮತ್ತು 2025 ರಲ್ಲಿ ಶಾರುಖ್ ಖಾನ್ ನಟನೆಯ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಲಿಲ್ಲ. ಈ ವರ್ಷಾರಂಭದಲ್ಲಿಯೇ ಶಾರುಖ್ ಅವರ ಹೊಸ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು, ಆದರೆ ಅದು ಸುಳ್ಳಾಗಿದೆ.

ಶಾರುಖ್ ಖಾನ್ ಪ್ರಸ್ತುತ ‘ಕಿಂಗ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಕೆಲವಾರು ತಿಂಗಳುಗಳು ಕಳೆದಿದ್ದು, ಸಿನಿಮಾದ ಸಣ್ಣ ಟೀಸರ್ ಈಗಾಗಲೇ ಬಿಡುಗಡೆ ಸಹ ಆಗಿದೆ. ‘ಕಿಂಗ್’ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂಬ ನಿರೀಕ್ಷೆಯನ್ನು ಅಭಿಮಾನಿಗಳು ಇರಿಸಿಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ. ‘ಕಿಂಗ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಶಾರುಖ್ ಖಾನ್ ಘೋಷಿಸಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಇನ್ನೂ ಬಹಳ ಸಮಯ ಕಾಯಬೇಕಿದೆ.

‘ಕಿಂಗ್’ ಸಿನಿಮಾ ಇದೇ ವರ್ಷ ಕ್ರಿಸ್​​ಮಸ್ ಹಬ್ಬಕ್ಕೆ ಬಿಡುಗಡೆ ಆಗಲಿದೆ. ಅಂದರೆ ಡಿಸೆಂಬರ್ 24ಕ್ಕೆ ಸಿನಿಮಾ ತೆರೆಗೆ ಬರಲಿದೆ. ‘ಡಿಸೆಂಬರ್ 24ಕ್ಕೆ ಕಿಂಗ್ ಘರ್ಜಿಸಲಿದ್ದಾನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ ನಟ ಶಾರುಖ್ ಖಾನ್. ಹೆಸರೇ ಹೇಳುತ್ತಿರುವಂತೆ ‘ಕಿಂಗ್’ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಸಿನಿಮಾನಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ನಟಿಸುತ್ತಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸ್ವತಃ ಶಾರುಖ್ ಖಾನ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?

2024 ಮತ್ತು 2025 ರಲ್ಲಿ ಶಾರುಖ್ ಖಾನ್ ನಟನೆಯ ಯಾವೊಂದು ಸಿನಿಮಾ ಬಿಡುಗಡೆ ಆಗಿಲ್ಲವಾದರೂ ನಾಲ್ಕು ಡಾಕ್ಯುಮೆಂಟರಿ ಮತ್ತು ಒಂದು ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಅವರ ಮದುವೆಯ ಡಾಕ್ಯುಮೆಂಟರಿ, ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಅವರ ಕುರಿತಾದ ಡಾಕ್ಯುಮೆಂಟರಿ, ರೋಷನ್ ಕುಟುಂಬದ ಡಾಕ್ಯುಮೆಂಟರಿ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನ ಮಾಡಿರುವ ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:17 pm, Sat, 24 January 26