‘ಡಂಕಿ’ ಕ್ರೇಜ್: ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಅಭಿಮಾನಿಗಳು

|

Updated on: Nov 30, 2023 | 9:28 PM

Dunki: ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎಂದು ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ. ಈ ಸಿನಿಮಾ ನೋಡಲು ವಿದೇಶದಿಂದ 100ಕ್ಕೂ ಹೆಚ್ಚು ಶಾರುಖ್ ಖಾನ್ ಅಭಿಮಾನಿಗಳು ಭಾರತಕ್ಕೆ ಬರಲಿದ್ದಾರೆ.

‘ಡಂಕಿ’ ಕ್ರೇಜ್: ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಅಭಿಮಾನಿಗಳು
Follow us on

ಶಾರುಖ್ ಖಾನ್ (Shah Rukh Khan) ಭಾರತದಲ್ಲಿ ಮಾತ್ರ ಸ್ಟಾರ್ ಅಲ್ಲ, ಅವರು ಗ್ಲೋಬಲ್ ಸ್ಟಾರ್. ಹಲವು ಹಾಲಿವುಡ್ ನಟ-ನಟಿಯರು ಸಹ ತಾವು ಶಾರುಖ್ ಖಾನ್ ಜೊತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹಲವು ದೇಶದಲ್ಲಿ ಶಾರುಖ್ ಖಾನ್​ರ ಅಭಿಮಾನಿಗಳಿದ್ದಾರೆ. ಶಾರುಖ್ ಖಾನ್​ರ ಸಿನಿಮಾವನ್ನು ಮೊದಲ ದಿನವೇ ವೀಕ್ಷಿಸುವ ವಿದೇಶಿ ಅಭಿಮಾನಿಗಳ ಸಂಖ್ಯೆ ಕಡಿಮೆಯಿಲ್ಲ. ಈ ವರ್ಷ ಈಗಾಗಲೇ ಎರಡು ಬ್ಲಾಕ್ ಬಸ್ಟರ್ ನೀಡಿರುವ ಶಾರುಖ್ ಖಾನ್ ಇದೇ ವರ್ಷ ಇನ್ನೊಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಲು ರೆಡಿಯಾಗಿದ್ದು, ಆ ಸಿನಿಮಾ ವೀಕ್ಷಿಸಲು ವಿದೇಶದಿಂದ ಅಭಿಮಾನಿಗಳು ಭಾರತಕ್ಕೆ ಬರುತ್ತಿದ್ದಾರೆ.

ಈ ವರ್ಷಾರಂಭದಲ್ಲಿ ತೆರೆಗೆ ಬಂದ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದೆ. ಅದರ ಬಳಿಕ ಬಿಡುಗಡೆ ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾ ಸಹ ಬಾಕ್ಸ್ ಆಫೀಸ್​ ಅನ್ನು ದೂಳೆಬ್ಬಿಸಿದೆ. ವರ್ಷಾಂತ್ಯಕ್ಕೆ ಶಾರುಖ್ ನಟನೆಯ ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದ್ದು, ಸೋಲೇ ಕಾಣದ ಗೆಲುವಿನ ಸರದಾರ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಈ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಈಗಾಗಲೇ ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ.

‘ಡಂಕಿ’ ಸಿನಿಮಾದ ಟೀಸರ್, ಹಾಡು ಈಗಾಗಲೇ ಬಿಡುಗಡೆ ಆಗಿದ್ದು ಪ್ರೇಕ್ಷಕರ ಗಮನ ಸೆಳೆದಿವೆ. ಸಿನಿಮಾ ಬಿಡುಗಡೆ ಇನ್ನು ಕೆಲವು ದಿನಗಳಷ್ಟೆ ಉಳಿದಿದ್ದು, ಸಿನಿಮಾ ಬಗೆಗಿನ ಕ್ರೇಜ್ ಬಲು ಜೋರಾಗಿದೆ. ಈ ಕ್ರೇಜ್ ಅದ್ಯಾವ ಮಟ್ಟಕ್ಕಿದೆಯೆಂದರೆ ‘ಡಂಕಿ’ ಸಿನಿಮಾ ನೋಡಲು ವಿದೇಶಗಳಿಂದ ಶಾರುಖ್ ಖಾನ್ ಅಭಿಮಾನಿಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ. ನೇಪಾಳ, ಕೆನಡಾ, ಯುಎಸ್ ಎ, ಇತಿಯೋಫಿಯಾ, ಯುಎಇ ಸೇರಿದಂತೆ ಬೇರೆ ಬೇರೆ ದೇಶಗಳಿಂದ 100ಕ್ಕೂ ಹೆಚ್ಚು ಅಭಿಮಾನಿಗಳು ಕೇವಲ ‘ಡಂಕಿ’ ಸಿನಿಮಾ ನೋಡಲೆಂದು ಭಾರತಕ್ಕೆ ಬರುತ್ತಿದ್ದಾರೆ.

ಇದನ್ನೂ ಓದಿ:‘ಏಕೆ ಟಾಮ್​ ಕ್ರೂಸ್ ರೀತಿ ಬೈಕ್ ಸ್ಟಂಟ್ಸ್ ಪ್ರಯತ್ನಿಸಬಾರದು?’; ಶಾರುಖ್ ಖಾನ್ ಕೊಟ್ರು ಉತ್ತರ

ಸಿನಿಮಾದ ಕತೆ ಸಹ ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಹೋಗುವುದ್ದೇ ಆಗಿದೆ. ಇದೇ ಕಾರಣಕ್ಕೆ ಬೇರೆ ದೇಶಗಳಿಂದ ಶಾರುಖ್ ಖಾನ್ ಅಭಿಮಾನಿಗಳು ‘ಡಂಕಿ’ ಸಿನಿಮಾ ನೋಡಲು ಭಾರತಕ್ಕೆ ಬರುತ್ತಿದ್ದಾರೆ. ಹೀಗೆ ಬರುವ ಅಭಿಮಾನಿಗಳಲ್ಲಿ ಕೆಲವರಿಗೆ ಶಾರುಖ್ ಖಾನ್ ಅವರನ್ನು ಭೇಟಿ ಮಾಡುವ ಅವಕಾಶವೂ ಸಿಗಲಿದೆ ಎಂದು ಚಿತ್ರತಂಡ ಹೇಳಿರುವುದಾಗಿ ಬಾಲಿವುಡ್ ವೆಬ್​ಸೈಟ್​ಗಳು ವರದಿ ಮಾಡಿವೆ.

‘3 ಇಡಿಯಟ್ಸ್’, ‘ಲಗೆ ರಹೋ ಮುನ್ನಾಭಾಯಿ’, ‘ಪಿಕೆ’, ‘ಸಂಜು’, ‘ಮುನ್ನಾಭಾಯಿ ಎಂಬಿಬಿಎಸ್’ ರೀತಿಯ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ರಾಜ್​ಕುಮಾರ್ ಹಿರಾನಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್​ ಜೊತೆ ಸೇರಿ ‘ಡಂಕಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ಗೆ ನಾಯಕಿಯಾಗಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಇನ್ನೂ ಕೆಲವು ನಟರು ನಟಿಸಿದ್ದಾರೆ. ಭಾರತದಿಂದ ಅಕ್ರಮವಾಗಿ ಕೆಲ ಯುವಕರು ವಿದೇಶಕ್ಕೆ ತೆರಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

‘ಡಂಕಿ’ ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್​ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 22ಕ್ಕೆ ‘ಡಂಕಿ’ ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ