ಸ್ಟಾರ್ ಮಕ್ಕಳಿಗೆ ಅವಕಾಶಗಳು ಸುಲಭವಾಗಿ ಸಿಗುತ್ತದೆ. ಹಾಗಾಗಿ ಅನೇಕ ಹೀರೋಗಳ ಮಕ್ಕಳು ನೇರವಾಗಿ ಚಿತ್ರರಂಗಕ್ಕೆ ಎಂಟ್ರಿ ಪಡೆಯುತ್ತಾರೆ. ಬಾಲಿವುಡ್ನಲ್ಲಿ ಅನೇಕ ಸ್ಟಾರ್ ಕಿಡ್ಗಳು ತೆರೆಮೇಲೆ ಮಿಂಚುತ್ತಿದ್ದಾರೆ. ಆದರೆ ಶಾರುಖ್ ಖಾನ್ (Shah Rukh Khan) ಮಗ ಆರ್ಯನ್ ಖಾನ್ ಈ ವಿಚಾರದಲ್ಲಿ ಕೊಂಚ ಭಿನ್ನ. ನಟನೆಗಿಂತಲೂ ಹೆಚ್ಚಾಗಿ ಬೇರೆ ವಿಚಾರಗಳಲ್ಲಿ ಅವರಿಗೆ ಆಸಕ್ತಿ ಇದೆ. ನಿರ್ದೇಶನದಲ್ಲಿ ಅವರು ವೃತ್ತಿಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು, ಬಿಸ್ನೆಸ್ ಬಗ್ಗೆಯೂ ಅವರು ಇಂಟರೆಸ್ಟ್ ತೋರಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್ಯನ್ ಖಾನ್ (Aryan Khan) ಅವರು ಬಟ್ಟೆ ವ್ಯಾಪಾರ ಆರಂಭಿದರು. ಅಂದರೆ, ತಮ್ಮದೇ ಹೊಸ ಬ್ರ್ಯಾಂಡ್ನ ಕಾಸ್ಟ್ಯೂಮ್ಗಳನ್ನು ಅವರು ಮಾರುಕಟ್ಟೆಗೆ ಪರಿಚಯಿಸಿದರು. ಆ ಕ್ಷೇತ್ರದಲ್ಲಿ ಅವರಿಗೆ ಭರ್ಜರಿ ಲಾಭ ಆಗುತ್ತಿದೆ. ಮಗನ ವ್ಯಾಪಾರ ಕಂಡು ಶಾರುಖ್ ಖಾನ್ಗೆ ಖುಷಿ ಆಗಿದೆ.
ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮುಂತಾದ ಸೆಲೆಬ್ರಿಟಿಗಳು ತಮ್ಮ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅದಕ್ಕೆ ಆರ್ಯನ್ ಖಾನ್ ಕೂಡ ಸೇರ್ಪಡೆ ಆಗಿದ್ದಾರೆ. ಕೇವಲ ಆನ್ಲೈನ್ನಲ್ಲಿ ಮಾತ್ರ ಅವರು ಮಾರಾಟ ಮಾಡುತ್ತಿದ್ದಾರೆ. ಮೊದಲ ದಿನವೇ ಅವರಿಗೆ ಸಖತ್ ಲಾಭ ಆಗಿದೆ.
ಇದನ್ನೂ ಓದಿ: Aryan Khan: ಚಿತ್ರರಂಗಕ್ಕೆ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಎಂಟ್ರಿ; ಬ್ರೇಕಿಂಗ್ ನ್ಯೂಸ್ ನೀಡಿದ ಸ್ಟಾರ್ ಕಿಡ್
ಆರ್ಯನ್ ಖಾನ್ ಅವರು ಮಾರಾಟ ಮಾಡುತ್ತಿರುವ ಬಟ್ಟೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗಿವೆ. ಒಂದು ಜಾಕೆಟ್ನ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ. ಟಿ-ಶರ್ಟ್ ಬೆಲೆ 24 ಸಾವಿರ ರೂಪಾಯಿ. ಹಾಗಿದ್ದರೂ ಕೂಡ ಜನರು ಇದನ್ನು ಮುಗಿಬಿದ್ದು ಖರೀದಿಸಿದ್ದಾರೆ. ಗ್ರಾಹಕರು ತೋರಿಸಿದ ಪ್ರೀತಿಗೆ ಆರ್ಯನ್ ಖಾನ್ ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಮಗನ ಬಿಸ್ನೆಸ್ಗೆ ಶಾರುಖ್ ಖಾನ್ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಬ್ರ್ಯಾಂಡ್ನ ಜಾಹೀರಾತಿನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಆರ್ಯನ್ ಖಾನ್ಗೆ ಸಹಕಾರಿ ಆಗಿದೆ. ಈ ಹಿಂದೆ ಡ್ರಗ್ಸ್ ಪಾರ್ಟಿ ಆರೋಪದ ಮೇಲೆ ಆರ್ಯನ್ ಖಾನ್ ಅರೆಸ್ಟ್ ಆಗಿದ್ದರು. ಆಗ ಮಗನ ಭವಿಷ್ಯದ ಬಗ್ಗೆ ಶಾರುಖ್ಗೆ ಚಿಂತೆ ಆಗಿತ್ತು. ಆದರೆ ಈಗ ಪುತ್ರನ ಬಗ್ಗೆ ಅವರು ಹೆಮ್ಮೆಪಡುತ್ತಿದ್ದಾರೆ.
ಇದನ್ನೂ ಓದಿ: Aryan Khan: 25ರ ಪ್ರಾಯದ ಆರ್ಯನ್ ಖಾನ್ ಜತೆ 30ರ ನೋರಾ ಫತೇಹಿ ಡೇಟಿಂಗ್? ಎಲ್ಲೆಲ್ಲೂ ಇವರದ್ದೇ ಗುಸುಗುಸು
ನಿರ್ದೇಶನದಲ್ಲಿ ಆರ್ಯನ್ ಖಾನ್ಗೆ ಆಸಕ್ತಿ ಇದೆ. ಈಗಾಗಲೇ ಅವರು ಸ್ಕ್ರಿಪ್ಟ್ ಕೆಲಸ ಶುರು ಮಾಡಿದ್ದಾರೆ. ಅವರ ಈ ಪ್ರಾಜೆಕ್ಟ್ಗೆ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:36 am, Tue, 2 May 23