
ನಟ ಶಾರುಖ್ ಖಾನ್ (Shah Rukh Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಒಂದು ಭರ್ಜರಿ ಕಮ್ಬ್ಯಾಕ್ ಸಲುವಾಗಿ ಕಾಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಅಭಿಮಾನಿಗಳನ್ನು ವಿಶೇಷ ರೀತಿಯಲ್ಲಿ ಭೇಟಿ (Shah Rukh Khan Fans Meet) ಮಾಡಿದ್ದಾರೆ. ಅಷ್ಟೇ ಅಲ್ಲದೇ, 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್ ಹೋಟೆಲ್ನಲ್ಲಿ ಆತಿಥ್ಯ ನೀಡಿದ್ದಾರೆ. ಶಾರುಖ್ ಖಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು, ಮಾತುಕಥೆ ನಡೆಸಿ ಖುಷಿಪಟ್ಟಿರುವ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಚೆನ್ನೈನ (Chennai) ಕೆಲವೇ ಕೆಲವು ಅಭಿಮಾನಿಗಳಿಗೆ ಈ ಅವಕಾಶ ಸಿಕ್ಕಿದೆ.
2018ರಲ್ಲಿ ಬಂದ ‘ಜೀರೋ’ ಸಿನಿಮಾ ಹೀನಾಯವಾಗಿ ಸೋತ ಬಳಿಕ ಶಾರುಖ್ ಖಾನ್ ಅವರು ಒಂದು ಗ್ಯಾಪ್ ತೆಗೆದುಕೊಂಡರು. ಆದರೆ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ. ಇತ್ತೀಚೆಗೆ ಅವರು ಚೆನ್ನೈನಲ್ಲಿ ‘ಜವಾನ್’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು. ಆದರೆ ಶೂಟಿಂಗ್ ಮುಗಿದ ಬಳಿಕ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.
ಎಲ್ಲ ನಗರದಲ್ಲೂ ಶಾರುಖ್ ಖಾನ್ ಅವರಿಗೆ ಅಭಿಮಾನಿ ಸಂಘಗಳು ಇವೆ. ‘ಎಸ್ಆರ್ಕೆ ಚೆನ್ನೈ ಫ್ಯಾನ್ಸ್ ಕ್ಲಬ್’ ಸದಸ್ಯರು ತಮ್ಮ ನೆಚ್ಚಿನ ನಟನನ್ನು ಭೇಟಿ ಆಗಬೇಕು ಎಂದು ಬಯಸಿದ್ದರು. ಶಾರುಖ್ ಅವರ ಮ್ಯಾನೇಜರ್ ಬಳಿ ಹೋಗಿ ಅಭಿಮಾನಿ ಸಂಘದವರು ಮನವಿ ಮಾಡಿಕೊಂಡಿದ್ದರು. ಆ ವಿಚಾರ ತಿಳಿದ ಶಾರುಖ್ ಅವರು ಒಪ್ಪಿಕೊಂಡರು. ಶೂಟಿಂಗ್ ಮುಗಿದ ಬಳಿಕ ಎಲ್ಲರನ್ನೂ ಭೇಟಿ ಮಾಡುವುದಾಗಿ ತಿಳಿಸಿದರು.
ಶಾರುಖ್ ಅವರು ಕೇವಲ ಕೈ ಕುಲುಕಿ, ಒಂದು ಸೆಲ್ಫಿ ನೀಡಿ ವಾಪಸ್ ಹೋಗಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಬಂದಿರುವ 20 ಅಭಿಮಾನಿಗಳಿಗೆ ಸ್ಟಾರ್ ಹೋಟೆಲ್ನಲ್ಲಿ ರೂಂ ಬುಕ್ ಮಾಡಲಾಯಿತು. ಏನು ಬೇಕಾದರೂ ಆರ್ಡರ್ ಮಾಡಿಕೊಂಡು ತಿನ್ನಬಹುದು ಎಂದು ಆಫರ್ ನೀಡಲಾಯಿತು. ಬಳಿಕ ಶಾರುಖ್ ಖಾನ್ ಬಂದು ಎಲ್ಲರನ್ನೂ ಭೇಟಿ ಮಾಡಿದರು. ಅಭಿಮಾನಿಗಳ ಜೊತೆ ಕುಳಿತು ಮಾತನಾಡಿದರು. ಎಲ್ಲರ ಜತೆಗೂ ಫೋಟೋ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳು ತಂದಿದ್ದು ಗಿಫ್ಟ್ಗಳನ್ನು ಸ್ವೀಕರಿಸಿದರು. ಇಷ್ಟೆಲ್ಲ ಸಮಯ ನೀಡಿದ್ದಕ್ಕೆ ಫ್ಯಾನ್ಸ್ ಸಖತ್ ಖುಷಿ ಆಗಿದ್ದಾರೆ.
‘ಜವಾನ್’ ಮಾತ್ರವಲ್ಲದೇ ‘ಡಂಕಿ’, ‘ಪಠಾಣ್’ ಮುಂತಾದ ಸಿನಿಮಾಗಳಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಅವರ ಕಮ್ಬ್ಯಾಕ್ ಸಿನಿಮಾವನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:45 am, Wed, 12 October 22