
ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ನಟನೆಯಿಂದ ನಾಲ್ಕು ವರ್ಷ ದೂರವೇ ಇದ್ದರು. ಈಗ ‘ಪಠಾಣ್’ ಸಿನಿಮಾ (Pathan Movie) ಮೂಲಕ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಮಧ್ಯೆ ಶಾರುಖ್ ಖಾನ್ ಫ್ಯಾನ್ಸ್ ಖುಷಿಪಡುವ ವಿಚಾರವೊಂದು ಹೊರಬಿದ್ದಿದೆ. ವಿಶ್ವದ ನಾಲ್ಕನೇ ಶ್ರೀಮಂತ ನಟನಾಗಿ ಶಾರುಖ್ ಹೊರಹೊಮ್ಮಿದ್ದಾರೆ. ಟಾಪ್ 10ರಲ್ಲಿ ಇರುವ ಭಾರತದ ಏಕೈಕ ಹೀರೋ ಶಾರುಖ್ ಎಂಬುದು ವಿಶೇಷ.
ಶಾರುಖ್ ಖಾನ್ ಅವರು ಈವರೆಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. 3 ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಯಶಸ್ಸು ಕಂಡ ನಟರಲ್ಲಿ ಶಾರುಖ್ ಕೂಡ ಒಬ್ಬರು. ಅವರು ಈಗ ವಿಶ್ವದ ನಾಲ್ಕನೇ ಶ್ರೀಮಂತ ಆಗಿರುವುದು ಅನೇಕರಿಗೆ ಖುಷಿ ತಂದಿದೆ.
ಟ್ವಿಟರ್ನಲ್ಲಿ ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ವಿಶ್ವದ ಶ್ರೀಮಂತ ನಟರ ಸಾಲಿನಲ್ಲಿ ಹಾಲಿವುಡ್ನ ಜೆರ್ರಿ ಸೈನ್ಫಿಲ್ಡ್, ಟೈಲರ್ ಪೆರ್ರಿ, ಡ್ವೇನ್ ಜಾನ್ಸನ್ ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಶಾರುಖ್ ಖಾನ್ ಇದ್ದಾರೆ. ಅವರ ಒಟ್ಟಾರೆ ಆಸ್ತಿ 6,282 ಕೋಟಿ ರೂಪಾಯಿ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ 10 ನಟರ ಪೈಕಿ 9 ಮಂದಿ ಹಾಲಿವುಡ್ನವರು. ಶಾರುಖ್ ಮಾತ್ರ ಬಾಲಿವುಡ್ನವರು.
ಇದನ್ನೂ ಓದಿ: ವನವಾಸ ಮುಗಿಸಿ ಬಂದ ‘ಪಠಾಣ್’; ಶಾರುಖ್ ಚಿತ್ರದ ಟ್ರೇಲರ್ನಲ್ಲಿ ಭರಪೂರ ಆ್ಯಕ್ಷನ್
ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸುವುದರ ಜತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಆ ಮೂಲಕ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರು ಐಪಿಎಲ್ ತಂಡ ಹೊಂದಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್ ಇವರ ಒಡೆತನದಲ್ಲಿದೆ. ಇದರಿಂದಲೂ ಸಾಕಷ್ಟು ಹಣ ಬರುತ್ತದೆ. ಅವರು ಹಲವು ಬ್ರ್ಯಾಂಡ್ಗಳಿಗೆ ಅಂಬಾಸಿಡರ್ ಆಗಿದ್ದಾರೆ.
‘ಪಠಾಣ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಜನವರಿ 25ರಂದು ಚಿತ್ರ ರಿಲೀಸ್ ಆಗುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಈ ಚಿತ್ರ ತೆರೆಗೆ ಬರುತ್ತಿರುವುದು ವಿಶೇಷ. ಈ ಸಿನಿಮಾದಲ್ಲಿ ರಾ ಏಜೆಂಟ್ ಆಗಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಸದ್ದು ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Thu, 12 January 23