
ನಟ ಶಾರುಖ್ ಖಾನ್ (Shah Rukh Khan) ಅವರು ಸತತ ಸೋಲು ಅನುಭವಿಸಿದ ಬಳಿಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ. ಹೊಸ ಸಿನಿಮಾಗಳ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ಈಗ ಅವರು ನಟಿಸುತ್ತಿರುವ ‘ಪಠಾಣ್’ (Pathaan), ‘ಡಂಕಿ’, ‘ಜವಾನ್’ ಮುಂತಾದ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಹೆಚ್ಚು ಮಾಡುವ ರೀತಿಯಲ್ಲಿ ಶಾರುಖ್ ಖಾನ್ ಅವರು ಒಂದು ಹೊಸ ಫೋಟೋ (Shah Rukh Khan Photo) ಹಂಚಿಕೊಂಡಿದ್ದಾರೆ. ಅದನ್ನು ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಈ ಫೋಟೋದಲ್ಲಿ ಶಾರುಖ್ ಖಾನ್ ಅವರು ಶರ್ಟ್ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಕಟ್ಟುಮಸ್ತಾದ ಬಾಡಿ ನೋಡಿ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಆಗಿದೆ. ಕಮೆಂಟ್ಗಳ ಮೂಲಕ ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಶಾರುಖ್ ಖಾನ್ ಅವರಿಗೆ ಈಗ 56 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ತಮ್ಮನ್ನು ತೆರೆಮೇಲೆ ನೋಡುವ ಅಭಿಮಾನಿಗಳನ್ನು ಖುಷಿಪಡಿಸಲು ಸಿಕ್ಸ್ ಪ್ಯಾಕ್ಸ್ ಮಾಡಿಕೊಂಡು ಶಾರುಖ್ ಖಾನ್ ಅವರು ಕ್ಯಾಮೆರಾ ಎದುರಿಸಿದ್ದಾರೆ. ಅಂದಹಾಗೆ, ಅವರು ಈ ರೀತಿ ದೇಹ ಹುರಿಗೊಳಿಸಿಕೊಂಡಿರುವುದು ‘ಪಠಾಣ್’ ಚಿತ್ರಕ್ಕಾಗಿ. ಆ ಸಿನಿಮಾಗಾಗಿ ತಾವೂ ಕೂಡ ಕಾಯುತ್ತಿರುವುದಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ. ಖ್ಯಾತ ನಟ ಜಾನ್ ಅಬ್ರಹಾಂ ಕೂಡ ಈ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. 2023ರ ಜನವರಿ 25ರಂದು ‘ಪಠಾಣ್’ ರಿಲೀಸ್ ಆಗಲಿದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಆ ಎಲ್ಲ ಚಿತ್ರಗಳು 2023ರಲ್ಲಿ ತೆರೆಗೆ ಬರಲಿವೆ. ಹಾಗಾಗಿ 2023ರ ಪೂರ್ತಿ ವರ್ಷ ಶಾರುಖ್ಗೆ ಮೀಸಲು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. 2018ರಲ್ಲಿ ‘ಜೀರೋ’ ಸಿನಿಮಾ ಸೋತ ಬಳಿಕ ಅವರು ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹಾಗಾಗಿ ಹೊಸ ಚಿತ್ರಕ್ಕಾಗಿ ಶಾರುಖ್ ಫ್ಯಾನ್ಸ್ ಕಾಯುತ್ತಿದ್ದಾರೆ.
‘ಓಂ ಶಾಂತಿ ಓಂ’, ‘ಹ್ಯಾಪಿ ನ್ಯೂ ಇಯರ್’, ‘ಚೆನ್ನೈ ಎಕ್ಸ್ಪ್ರೆಸ್’ ಬಳಿಕ ಶಾರುಖ್ ಮತ್ತು ದೀಪಿಕಾ ಪಡುಕೋಣೆ ಅವರು ಜೊತೆಯಾಗಿ ನಟಿಸುತ್ತಿರುವ ಚಿತ್ರ ‘ಪಠಾಣ್’. ನಾಲ್ಕನೇ ಬಾರಿ ಒಂದಾಗಿರುವ ಈ ಜೋಡಿ ಮೇಲೆ ಅಭಿಮಾನಿಗಳಿಗೆ ಭರವಸೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.