ರೇವ್ ಪಾರ್ಟಿ ಮಾಡಿ ಸಿಕ್ಕಿ ಬಿದ್ದಿರುವ ಆರ್ಯನ್ ಖಾನ್ ಜೈಲಿನಲ್ಲಿ ಸಾಕಷ್ಟು ದಿನ ಕಳೆದಿದ್ದಾರೆ. ಕೋರ್ಟ್ನಲ್ಲಿ ಸಾಲುಸಾಲು ವಿಚಾರಣೆ ನಡೆಸಲಾಯಿತಾದರೂ ಜಾಮೀನು ಸಿಕ್ಕಿರಲಿಲ್ಲ. ಮುಂಬೈನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಆದೇಶವನ್ನು ಕಾಯ್ದಿರಿಸಿತ್ತು. ಇಂದು (ಅಕ್ಟೋಬರ್ 20) ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿದೆ. ಈ ವೇಳೆ ಜಾಮೀನು ನೀಡೋಕೆ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಆರ್ಯನ್ ಜತೆಗೆ ಇತರ ಆರೋಪಿಗಳ ಜಾಮೀನು ಕೂಡ ತಿರಸ್ಕರಿಸಲಾಗಿದೆ. ಹೀಗಾಗಿ, ಈಗ ಆರ್ಯನ್ ಪರ ವಕೀಲರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ವಿಚಾರಣೆ ನಡೆದು, ತೀರ್ಪು ಬರುವವರೆಗೆ ಮತ್ತೊಂದಷ್ಟು ದಿನ ಆರ್ಯನ್ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.
Drugs on cruise ship case | Mumbai’s Special NDPS Court rejects bail applications of Aryan Khan, Arbaaz Merchant and Munmun Dhamecha pic.twitter.com/Zww2mANkUB
— ANI (@ANI) October 20, 2021
ಆರ್ಯನ್ ಪರ ವಕೀಲರು ಹೇಳಿದ್ದೇನು?
‘ಅಕ್ಟೋಬರ್ 3ರಿಂದ ಆರ್ಯನ್ ವಿಚಾರಣೆ ನಡೆಸಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಎನ್ಸಿಬಿ ವಿರೋಧ ಮಾಡಿತ್ತು. ಹೀಗಾಗಿಯೇ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿದೆ. ಎನ್ಸಿಬಿ ಕಸ್ಟಡಿ ಅಗತ್ಯವಿಲ್ಲ ಎಂದು ಆರ್ಯನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದಿದ್ದರು ಅಮಿತ್ ದೇಸಾಯಿ.
‘ಆರ್ಯನ್ ಖಾನ್‌ಗೆ ಯಾರು ಆಹ್ವಾನ ನೀಡಿದ್ದರೋ ಅವರನ್ನು ಬಂಧಿಸಿಲ್ಲ. ಪ್ರತೀಕ್ ಗಾಬಾ ಎಂಬಾತ ಆರ್ಯನ್ ಖಾನ್ ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದ. ಆತನನ್ನು ಬಂಧಿಸಬೇಕಿತ್ತು. ಎನ್‌ಡಿಪಿಎಸ್ ಕಾಯಿದೆಯ 27 ಎ ಸೆಕ್ಷನ್ ಕಳ್ಳಸಾಗಣಿಕೆಗೆ ಸಂಬಂಧಿಸಿದೆ. ಈ ಸೆಕ್ಷನ್ ಆರ್ಯನ್ ಖಾನ್‌ಗೆ ಅನ್ವಯಿಸುವುದಿಲ್ಲ. ಆರ್ಯನ್ ಯಾವುದೇ ಅಕ್ರಮ ಕಳ್ಳಸಾಗಣೆಯಲ್ಲಿ ಭಾಗಿಯಾಗಿಲ್ಲ. ಈ ಸೆಕ್ಷನ್ ವಿಧಿಸಿರುವುದು ಅಸಂಬದ್ಧ’ ಎಂದು ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿದ್ದರು.
‘ಇವರು ಡ್ರಗ್ಸ್ ಪೆಡ್ಲರ್ಗಳು ಅಲ್ಲ. ಡ್ರಗ್ಸ್ ಕಳ್ಳ ಸಾಗಾಟವನ್ನು ಮಾಡಿಲ್ಲ. ಇವರೆಲ್ಲಾ ಚಿಕ್ಕ ಮಕ್ಕಳು. ಅವರು ಪಾಠವನ್ನು ಕಲಿತಿದ್ದಾರೆ. ಜೈಲಿನಲ್ಲಿ ದೀರ್ಘ ಅವಧಿಯವರೆಗೂ ಇರುವುದು ಬೇಡ. ಆರ್ಯನ್ ಖಾನ್‌ಗೆ ಜಾಮೀನು ನೀಡಿ’ ಎಂದು ಅಮಿತ್ ದೇಸಾಯಿ ಕೋರ್ಟ್ಗೆ ಮನವಿ ಮಾಡಿದ್ದರು.
ಎನ್ಸಿಬಿ ಪರ ವಕೀಲರು ಹೇಳಿದ್ದೇನು?
ಎನ್ಸಿಬಿ ಪರ ವಕೀಲರಾದ ಅನಿಲ್ ಸಿಂಗ್ ವಾದಮಂಡಿಸಿದರು. ‘ಡ್ರಗ್ಸ್ ಕಳ್ಳ ಸಾಗಣೆ ಬಹಳ ಗಂಭೀರ, ಕಳಕಳಿಯ ವಿಷಯ. ರೇವ್ ಪಾರ್ಟಿಗಳಲ್ಲಿ ಯುವಜನತೆ ಡ್ರಗ್ಸ್ ಸೇವನೆ ಮಾಡುತ್ತಾರೆ. ಇದರಿಂದ ದೇಶಕ್ಕೆ ತೊಂದರೆ ಆಗುತ್ತದೆ. ಇದು ಒಂದಿಬ್ಬರ ಡ್ರಗ್ಸ್ ಸೇವನೆಗೆ ಸಂಬಂಧಪಟ್ಟಿದ್ದಲ್ಲ. ನಾವು ಇಡೀ ಜಾಲದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆರ್ಯನ್ ಖಾನ್ನನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ಯಾರು, ಯಾವಾಗ ಆಹ್ವಾನಿಸಿದರು ಎಂದು ಹೇಳುತ್ತಿಲ್ಲ. ಅವರಿಗೆ ಜಾಮೀನು ನೀಡಬಾರದು’ ಎಂದಿದ್ದರು ಅನಿಲ್ ಸಿಂಗ್.
ಇದನ್ನೂ ಓದಿ: Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್ ಮಗನ ವರ್ತನೆ
‘ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವೈಯಕ್ತಿಕ ದ್ವೇಷಕ್ಕೆ ಆರ್ಯನ್ ಅರೆಸ್ಟ್’: ಕಿಶೋರ್ ತಿವಾರಿ ಆರೋಪ
Published On - 2:47 pm, Wed, 20 October 21