ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ನೀಡಿದ್ದ ‘1947 ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಲಭ್ಯವಾಗಿದ್ದು ನೈಜ ಸ್ವಾತಂತ್ರ್ಯ’ ಎಂಬ ಹೇಳಿಕೆಯ ವಿರುದ್ಧ ಖ್ಯಾತ ನಟ ಮುಕೇಶ್ ಖನ್ನಾ ಕೂಡ ದನಿಗೂಡಿಸಿದ್ದಾರೆ. ಶಕ್ತಿಮ್ಯಾನ್ ಖ್ಯಾತಿಯ ನಟರಾಗಿರುವ ಮುಕೇಶ್, ಕಂಗನಾನ ಹೇಳಿಕೆಯನ್ನು ಅತ್ಯಂತ ಬಾಲಿಶ ಹೇಳಿಕೆ ಎಂದು ಟೀಕಿಸಿದ್ದಾರೆ. ಅಲ್ಲದೇ ಈ ಹೇಳಿಕೆ ಪದ್ಮ ಪ್ರಶಸ್ತಿಯ ಫಲವೇ? ಎಂದು ಪ್ರಶ್ನಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ದೊಡ್ಡ ಬರಹವೊಂದನ್ನು ಹಂಚಿಕೊಂಡಿರುವ ಮುಕೇಶ್, ಅದರಲ್ಲಿ ಕಂಗನಾ ಅವರ ಚಿತ್ರವನ್ನು ಹಂಚಿಕೊಂಡು, ಅವರ ಮಾತುಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘‘ಹಲವರು ನನಗೆ ಸ್ವಾತಂತ್ರ್ಯದ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈಗ ಬಹಿರಂಗವಾಗಿ ಅದನ್ನು ಬರೆಯುತ್ತಿದ್ದೇನೆ’’ ಎಂದು ಮುಕೇಶ್ ಹೇಳಿದ್ದಾರೆ.
ಬರಹದಲ್ಲಿ ಅವರು ಕಂಗನಾ, ‘‘ನನ್ನ ಪ್ರಕಾರ ಕಂಗನಾ ಮಾತು ಬಾಲಿಶ, ಹಾಸ್ಯಾಸ್ಪದ ಮಾತಾಗಿದೆ. ಇದು ಅಜ್ಞಾನದ ಸಂಕೇತವೋ ಅಥವಾ ಪದ್ಮ ಪ್ರಶಸ್ತಿಯ ಅಡ್ಡ ಪರಿಣಾಮವೋ ಗೊತ್ತಿಲ್ಲ. ಎಲ್ಲರಿಗೂ ತಿಳಿದಿರುವಂತೆ, 1947ರ ಆಗಸ್ಟ್ 15ರಂದು ನಮ್ಮ ದೇಶ ಸ್ವತಂತ್ರವಾಯಿತು. ಅದನ್ನು ಭಿನ್ನವಾಗಿ ವ್ಯಾಖ್ಯಾನಿಸುವುದು ಕೂಡ ಮೂರ್ಖತನ’’ ಎಂದಿದ್ದಾರೆ.
ಹಾಡಿನ ಸಾಲುಗಳನ್ನೂ ಉದಾಹರಿಸಿರುವ ಅವರು, ಭಾರತೀಯರಲ್ಲಿ ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಸ್ವಾತಂತ್ರ್ಯದ ಕಿಚ್ಚನ್ನು ತುಂಬಲು ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ಸೇರಿದಂತೆ ಅದರ ಸೈನಿಕರ ಹೋರಾಟದ ಫಲವೂ ಕಾರಣ. ಆದ್ದರಿಂದ ಸ್ವಾತಂತ್ರ್ಯದ ಕುರಿತ ವಿವಾದಾತ್ಮಕ ಹೇಳಿಕೆ ಕೊಡುವುದನ್ನು ನಿಲ್ಲಿಸಿ’’ ಎಂದು ಮುಕೇಶ್ ಬರೆದಿದ್ದಾರೆ.
ಮುಕೇಶ್ ಖನ್ನಾ ಹಂಚಿಕೊಂಡಿರುವ ಪೋಸ್ಟ್:
ಇತ್ತೀಚೆಗೆ ಕಂಗನಾ, ಕಾರ್ಯಕ್ರಮವೊಂದರಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಪ್ರಧಾನಿ ಮೋದಿ ಸರ್ಕಾರವನ್ನು ಉಲ್ಲೇಖಿಸಿ ನುಡಿದಿದ್ದರು. ಅಲ್ಲದೇ 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದಿದ್ದರು. ಇದು ತೀವ್ರ ವಿವಾದವನ್ನು ಹುಟ್ಟುಹಾಕಿದ್ದಲ್ಲದೇ, ಅವರ ವಿರುದ್ಧ ದೇಶದಾದ್ಯಂತ ಹಲವೆಡೆ ದೂರುಗಳು ದಾಖಲಾಗಿವೆ. ಕಂಗನಾ ತಮ್ಮ ಹೇಳಿಕೆಗಳನ್ನು ಇನ್ಸ್ಟಾಗ್ರಾಂ ಪೋಸ್ಟ್ಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ