ಮಹಾದೇವ್ ಬೆಟ್ಟಿಂಗ್ ಆ್ಯಪ್ (Mahadev Betting App) ಪ್ರಕರಣದ ಆರೋಪಿ ರವಿ ಉಪ್ಪಲ್ ಅವರನ್ನು ಮುಂಬೈ ಪೊಲೀಸರು ದುಬೈನಲ್ಲಿ ಬಂಧಿಸಿದ್ದಾರೆ. ಇವರ ಬಂಧನದ ನಂತರ ಹಲವು ದೊಡ್ಡ ವ್ಯಕ್ತಿಗಳ ಹೆಸರು ಕೇಳಿಬರುವ ಸಾಧ್ಯತೆ ಇದೆ. 6,000 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮಾಸ್ಟರ್‌ಮೈಂಡ್‌ಗಳಾದ ರವಿ ಉಪ್ಪಲ್ ಮತ್ತು ಆತನ ಸಹಚರ ನೀರಜ್ ಚಂದ್ರಕರ್ ಬಂಧನದ ನಂತರ ಈ ಪ್ರಕರಣದಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೆಸರು ಕೂಡ ಕೇಳಿಬಂದಿದೆ. ಒಂದೆಡೆ ಜಾರಿ ನಿರ್ದೇಶನಾಲಯ 6000 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ. ಆ ಸಮಯದಲ್ಲಿ ಮುಂಬೈ ಪೊಲೀಸರು ಎಸ್‌ಐಟಿ ಸ್ಥಾಪಿಸಿದ್ದರು. ಇದರಲ್ಲಿ ಸೈಬರ್ ಶಾಖೆಯ ಅಧಿಕಾರಿಗಳು ಸೇರಿದ್ದಾರೆ. ಈ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ (Sahil Khan) ಅವರಿಗೆ ಸಮನ್ಸ್ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ .
ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಸೆಲೆಬ್ರಿಟಿಗಳ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಸಾಹಿಲ್ ಖಾನ್ ಕೂಡ ಸೇರಿದ್ದಾರೆ. ಈ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಲು ಸಾಹಿಲ್ ಖಾನ್ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಬಂಧನಪೂರ್ವ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದರಿಂದ ಅವರನ್ನು ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗದ ಸೈಬರ್ ಶಾಖೆಯ 3 ಅಧಿಕಾರಿಗಳನ್ನು ನೇಮಿಸಲಾಗಿದೆ. ಎಸ್‌ಐಟಿ ತನಿಖೆಯಲ್ಲಿ 139 ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದೆ. 57 ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಸಾಹಿಲ್ ಖಾನ್ ಅವರನ್ನು ಕೂಡ ತನಿಖೆಗೆ ಒಳಪಡಿಸಲಾಗುತ್ತಿದೆ.
ಇದನ್ನೂ ಓದಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯ ತಂದೆ ಸಾವು, ಆತ್ಮಹತ್ಯೆ ಶಂಕೆ
ಅಕ್ಟೋಬರ್‌ನಲ್ಲಿ ರಾಯ್‌ಪುರ ಸೆಷನ್ಸ್ ನ್ಯಾಯಾಲಯವು ಮಹದೇವ್ ಆ್ಯಪ್ ಪ್ರಕರಣದ ಆರೋಪಿಗಳಾದ ರವಿ ಉಪ್ಪಲ್ ಮತ್ತು ಸೌರಭ್ ಚಂದ್ರಕರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಆ ನಂತರ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಶುಭಂ ಸೋನಿ ಎಂಬ ಯುವಕನ ವಿಡಿಯೋ ವೈರಲ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.