ಸೋನು ಸೂದ್​ಗೆ ಕೊಡಲಾಗಿತ್ತು ಸಿಎಂ, ಡಿಸಿಎಂ ಪದವಿಯ ಆಫರ್, ಕೈಬಿಟ್ಟಿದ್ದು ಏಕೆ?

|

Updated on: Dec 27, 2024 | 4:02 PM

Sonu Sood: ಬಹುಭಾಷಾ ನಟ ಸೋನು ಸೂದ್ ಕೋವಿಡ್ ಸಮಯದಲ್ಲಿ ಸಾವಿರಾರು ಮಂದಿಗೆ ಸಹಾಯ ಮಾಡಿದ್ದಾರೆ. ಕಾರ್ಮಿಕರ ಪಾಲಿಗೆ ದೇವರೇ ಆಗಿದ್ದರು. ಆ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಸೋನು ಸೂದ್ ಅವರನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಸೋನು ಸೂದ್ ಯಾವ ಪಕ್ಷವನ್ನೂ ಸೇರಲಿಲ್ಲ. ಆದರೆ ಆ ಸಮಯದಲ್ಲಿ ತಮಗೆ ಸಿಕ್ಕಿದ್ದ ಆಫರ್​ಗಳು ಹೇಗಿದ್ದವು ಎಂಬುದನ್ನು ಈಗ ಹೇಳಿದ್ದಾರೆ.

ಸೋನು ಸೂದ್​ಗೆ ಕೊಡಲಾಗಿತ್ತು ಸಿಎಂ, ಡಿಸಿಎಂ ಪದವಿಯ ಆಫರ್, ಕೈಬಿಟ್ಟಿದ್ದು ಏಕೆ?
Sonu Sood
Follow us on

ಬಹುಭಾಷಾ ನಟ ಸೋನು ಸೂದ್, ದಕ್ಷಿಣ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಬಹುತೇಕ ವಿಲನ್ ಪಾತ್ರಗಳಿಂದಲೇ ಹೆಚ್ಚು ಪರಿಚಿತರು. ತೆರೆಯ ಮೇಲೆ ಖಳನಟನ ಪಾತ್ರಗಳಲ್ಲಿ ನಟಿಸುತ್ತಾರಾದರೂ ವೈಯಕ್ತಿಕವಾಗಿ ಮಾನವೀಯತೆ, ಕರುಣೆ ತುಂಬಿದ ವ್ಯಕ್ತಿ ಸೋನು ಸೂದ್. ಕೋವಿಡ್ ಸಮಯದಲ್ಲಂತೂ ಕೇಂದ್ರ ಸಚಿವರೊಬ್ಬರು ಮಾಡುವುದಕ್ಕಿಂತಲೂ ಹೆಚ್ಚಿನ ಕೆಲಸವನ್ನು ಅವರು ಮಾಡಿದ್ದರು. ಮನೆ ಬಿಟ್ಟು ಬೇರೆ ರಾಜ್ಯಗಳಿಗೆ ಕೆಲಸಗಳಿಗೆ ತೆರಳಿದ್ದ ಕಾರ್ಮಿಕರ ಪಾಲಿಗಂತೂ ದೇವರೆ ಆಗಿದ್ದರು ಸೋನು ಸೂದ್. ಇದೇ ಕಾರಣಕ್ಕೆ ಅವರಿಗೆ ‘ಮಸೀಹಾ’ (ಆಪತ್ತಿನಲ್ಲಿ ಬಂದ ದೇವರು) ಎಂದು ಹೆಸರು ನೀಡಲಾಗಿತ್ತು.

ಆ ಸಂದರ್ಭದಲ್ಲಿ ಸೋನು ಸೂದ್ ಸೇವೆಯ ಬಗ್ಗೆ ಪ್ರತಿದಿನವೂ ವರದಿಗಳಾಗುತ್ತಿದ್ದವು. ಸೋನು ಸೂದ್​ರಿಂದ ಸಹಾಯ ಪಡೆದ ಹಲವರು ತಮ್ಮ ಮಕ್ಕಳಿಗೆ ಸೋನು ಸೂದ್​ರ ಹೆಸರು ಇರಿಸಿದರು. ಹಲವು ರಾಜಕೀಯ ನಾಯಕರುಗಳು ಸಹ ಸೋನು ಸೂದ್​ರ ಸೇವೆಯನ್ನು ಮೆಚ್ಚಿ ಟ್ವೀಟ್​ಗಳನ್ನು ಮಾಡಿದ್ದರು. ಕೆಲವು ರಾಜ್ಯಗಳ ರಾಜ್ಯಪಾಲರು ಸೋನು ಸೂದ್​ರನ್ನು ಕರೆಸಿ ಸನ್ಮಾನ ಮಾಡಿದರು. ಅಮಿತ್ ಶಾ, ಮೋದಿಯವರು ಸಹ ಸೋನು ಸೂದ್​ರನ್ನು ಭೇಟಿಯಾಗಿದ್ದರು. ಅದೇ ಸಮಯದಲ್ಲಿ ಸೋನು ಸೂದ್, ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು ಆದರೆ ಅದು ಸುಳ್ಳಾಯ್ತು.

ಇದೀಗ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋನು ಸೂದ್​, ಆ ಸಮಯದಲ್ಲಿ ತಮಗೆ ಬಂದ ರಾಜಕೀಯದ ಆಫರ್​ಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ತಮಗೆ ಸಿಎಂ ಮಾಡುವ ಅಲ್ಲದಿದ್ದರೆ ಡಿಸಿಎಂ ಮಾಡುವ ಭರವಸೆಗಳು ಬಂದಿದ್ದವು ಎಂದಿದ್ದಾರೆ. ನೀನು ಚುನಾವಣೆ ಸಹ ನಿಲ್ಲಬೇಡ ಕೇವಲ ನಮ್ಮ ಜೊತೆಗೆ ನಿಂತಿರು ಸಾಕು ಎಂದು ಸಹ ಕೆಲವು ಪ್ರಮುಖ ರಾಜಕೀಯ ನಾಯಕರು ಹೇಳಿದ್ದರು. ರಾಷ್ಟ್ರಮಟ್ಟದ ನಾಯಕರಿಂದ ಆ ಆಫರ್​ಗಳು ಬಂದಿದ್ದವು ಎಂದು ಸೋನು ಸೂದ್ ಹೇಳಿದ್ದಾರೆ. ರಾಜ್ಯಸಭಾ ಸದಸ್ಯನನ್ನಾಗಿ ಮಾಡುವ ಆಫರ್ ಸಹ ಒಂದು ಪಕ್ಷದಿಂದ ಬಂದಿತ್ತಂತೆ. ಆದರೆ ಯಾವ ಪಕ್ಷದಿಂದ, ಯಾವ ನಾಯಕ ಆಫರ್ ನೀಡಿದ್ದರು ಎಂಬುದನ್ನು ಸೋನು ಸೂದ್ ಹೇಳಿಲ್ಲ.

ಇದನ್ನೂ ಓದಿ:ವೃದ್ಧಾಶ್ರಮಕ್ಕೆ ಹೊಸ ಸಿನಿಮಾದ ಕಲೆಕ್ಷನ್​ ಹಣ ನೀಡಲಿರುವ ಸೋನು ಸೂದ್​

‘ರಾಜಕೀಯ ಎಂಬುದು ಹಲವರ ಪಾಲಿಗೆ ಅಧಿಕಾರ ಮತ್ತು ಹಣ. ಆದರೆ ನನಗೆ ಅವೆರಡೂ ಸಹ ಮುಖ್ಯವಲ್ಲ. ನಾನು ಈಗಾಗಲೇ ಜನರಿಗೆ ಸಹಾಯ ಮಾಡುತ್ತಿದ್ದೇನೆ. ನಾನು ಯಾರಿಗೂ ಉತ್ತರ ನೀಡುವ ಅವಶ್ಯಕತೆ ಇಲ್ಲ, ನನಗೆ ಗಡಿಗಳು ಸಹ ಇಲ್ಲ. ನಾನು ರಾಜಕೀಯದಲ್ಲಿ ಇದ್ದಿದ್ದರೆ ನಾನು ಯಾರಿಗಾದರೂ ಉತ್ತರ ಕೊಡಬೇಕಿತ್ತು, ನನ್ನನ್ನು ನಿಯಂತ್ರಿಸಲು ಕೆಲವರು ಇರುತ್ತಿದ್ದರು. ಅದು ನನಗೆ ಇಷ್ಟವಿಲ್ಲ’ ಹಾಗಾಗಿ ನಾನು ರಾಜಕೀಯಕ್ಕೆ ಹೋಗಲಿಲ್ಲ ಎಂದಿದ್ದಾರೆ ಸೋನು ಸೂದ್.

ಸೋನು ಸೂದ್ ಚುನಾವಣೆಗೆ ಸ್ಪರ್ಧಿಸಲಿಲ್ಲವಾದರೂ ಅವರ ಸಹೋದರಿಯನ್ನು ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆಗೆ ನಿಲ್ಲಿಸಿದರು. ಸಹೋದರಿಯ ಪರವಾಗಿ ಚುನಾವಣೆ ಪ್ರಚಾರವನ್ನೂ ಸಹ ಮಾಡಿದರು. ಆದರೆ ಅವರ ಸಹೋದರಿ ಚುನಾವಣೆ ಗೆಲ್ಲಲಿಲ್ಲ. ಎಎಪಿ ಪರವಾದ ಅಭ್ಯರ್ಥಿ ಚುನಾವಣೆ ಗೆದ್ದರು. ಪಂಜಾಬ್​ನಲ್ಲಿ ಕಾಂಗ್ರೆಸ್ ಪಕ್ಷ ಸೋತು, ಎಎಪಿ ಪಕ್ಷ ಅಧಿಕಾರಕ್ಕೆ ಬಂತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Fri, 27 December 24