ಬಹುಭಾಷಾ ನಟ ಸೋನು ಸೂದ್ (Sonu Sood) ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಮೊದಲ ಲಾಕ್ಡೌನ್ ಆರಂಭ ಆದಾಗಿನಿಂದಲೂ ಅವರು ಜನಪರ ಕಾರ್ಯ ಮಾಡುತ್ತಿದ್ದಾರೆ. ಅನೇಕ ಬಡವರಿಗೆ ಸಹಾಯ ಮಾಡುವ ಮೂಲಕ ಅವರು ರಿಯಲ್ ಹೀರೋ (Real Hero Sonu Sood) ಎನಿಸಿಕೊಂಡಿದ್ದಾರೆ. ಸೋನು ಸೂದ್ ಇಷ್ಟೆಲ್ಲ ಮಾಡುತ್ತಿರುವುದು ರಾಜಕೀಯ ಸೇರುವ ಉದ್ದೇಶದಿಂದ ಎಂದು ಈ ಹಿಂದೆ ಕೆಲವರು ಟೀಕಿಸಿದ್ದುಂಟು. ಆದರೆ ತಮಗೆ ರಾಜಕೀಯದ ಉದ್ದೇಶ ಇಲ್ಲ ಎಂದು ಸೋನು ಸೂದ್ ಪದೇಪದೇ ಹೇಳುತ್ತಲೇ ಇದ್ದಾರೆ. ಅವರ ಸಹೋದರಿ ಮಾಳವಿಕಾ ಸೂದ್ (Malavika Sood) ಕಾಂಗ್ರೆಸ್ ಪಕ್ಷ ಸೇರಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ಕುರಿತು ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ತಂಗಿಯ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.
ಪಂಜಾಬ್ನ ಕಾಂಗ್ರೆಸ್ ಪಕ್ಷದ ಜೊತೆಗೆ ಮಾಳವಿಕಾ ಸೂದ್ ಕೈ ಜೋಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಆದರೆ ಚುನಾವಣಾ ಪ್ರಚಾರದಲ್ಲಿ ಅವರಿಗೆ ಸೋನು ಸೂದ್ ಕಡೆಯಿಂದ ಯಾವುದೇ ಸಹಾಯ ಸಿಗುವುದಿಲ್ಲ. ಅದಕ್ಕೆ ಸೋನು ಸೂದ್ ಅವರ ದಿಟ್ಟ ನಿಲುವು ಕಾರಣ.
‘ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನನ್ನ ತಂಗಿ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಕೆಲವು ವರ್ಷಗಳಿಂದ ಆಕೆ ಪಂಜಾಬ್ನಲ್ಲಿ ವಾಸಿಸುತ್ತಿದ್ದಾಳೆ. ಜನರ ಸಮಸ್ಯೆಗಳೇನು ಎಂಬುದನ್ನು ತಿಳಿದಿದ್ದಾಳೆ. ಜನರ ಜೊತೆ ಸಂಪರ್ಕದಲ್ಲಿ ಇದ್ದುಕೊಂಡು ನೇರವಾಗಿ ಆಕೆ ಸಹಾಯ ಮಾಡುತ್ತಾಳೆ ಎಂದರೆ ಅದು ಖುಷಿಯ ವಿಚಾರ’ ಎಂದು ಸೋನು ಸೂದ್ ಹೇಳಿದ್ದಾರೆ.
‘ರಾಜಕೀಯದಲ್ಲಿ ಮುಂದುವರಿಯಬೇಕು ಎಂಬುದು ಆಕೆಯ ನಿರ್ಧಾರ. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಮಾಡುತ್ತಿರುವ ಕೆಲಸವನ್ನು ಮುಂದುವರಿಸುತ್ತೇನೆ. ಚುನಾವಣೆಯಲ್ಲಿ ತಂಗಿಯ ಪರವಾಗಿ ನಾನು ಪ್ರಚಾರ ಮಾಡುವುದಿಲ್ಲ. ಯಾಕೆಂದರೆ, ಆಕೆಯೇ ಪರಿಶ್ರಮಪಡಬೇಕು. ನಾನು ಮಾತ್ರ ಎಲ್ಲ ರಾಜಕೀಯ ಪಕ್ಷಗಳಿಂದ ದೂರ ಉಳಿದುಕೊಳ್ಳುತ್ತೇನೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನು ಸೂದ್ ಹೇಳಿದ್ದಾರೆ.
As my sister Malvika Sood embarks on her political journey, I wish her the best and can’t wait to see her flourish in this new chapter of her life. Good luck Malvika!
My own work as an actor & humanitarian continues, without any political affiliations or distractions. pic.twitter.com/NCI0d4nUgC
— sonu sood (@SonuSood) January 10, 2022
‘ಸೂದ್ ಚಾರಿಟಿ ಫೌಂಡೇಶನ್’ ಮೂಲಕ ಅವರು ತಮ್ಮ ಸಮಾಜಸೇವೆಯನ್ನು ಮುಂದುವರಿಸಿದ್ದಾರೆ. ಸಹಾಯಕ್ಕಾಗಿ ಅವರಿಗೆ ಪ್ರತಿದಿನ ನೂರಾರು ಕರೆಗಳು ಬರುತ್ತಿವೆ. ಇತ್ತ ಸಿನಿಮಾ ಚಟುವಟಿಕೆಗಳಲ್ಲೂ ಸೋನು ಸೂದ್ ಬ್ಯುಸಿ ಆಗಿದ್ದಾರೆ. ಎಲ್ಲ ಕೆಲಸಗಳನ್ನು ಅವರು ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ:
ಪಂಜಾಬ್: ಸೋನು ಸೂದ್ ಸಹೋದರಿ ಮಾಳವಿಕಾ ಕಾಂಗ್ರೆಸ್‌ಗೆ ಸೇರ್ಪಡೆ, ಇದು ಗೇಮ್‌ಚೇಂಜರ್ ಎಂದ ಸಿಧು
‘2 ಬಾರಿ ರಾಜ್ಯಸಭಾ ಸದಸ್ಯನಾಗುವ ಚಾನ್ಸ್ ತಿರಸ್ಕರಿಸಿದ್ದೆ’; ತೆರಿಗೆ ವಂಚನೆ ಆರೋಪದ ಬಳಿಕ ಸೋನು ಸೂದ್ ಹೇಳಿಕೆ