
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಾಲಿವುಡ್ನಲ್ಲಿ ಸಖತ್ ಪೈಪೋಟಿ ಏರ್ಪಡುತ್ತಿದೆ. ‘ಸ್ತ್ರೀ 2’, ‘ಖೇಲ್ ಖೇಲ್ ಮೇ’ ಹಾಗೂ ‘ವೇದಾ’ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ಆಗಸ್ಟ್ 15ರಂದು ಯಾವ ಸಿನಿಮಾವನ್ನು ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಎಂಬ ಗೊಂದಲ ಸಿನಿಪ್ರಿಯರಲ್ಲಿ ಮೂಡಿದೆ. ಈ ಸಂದರ್ಭದಲ್ಲಿ ಪಾಸಿಟಿವ್ ಪ್ರಚಾರ ತುಂಬ ಮುಖ್ಯವಾಗುತ್ತದೆ. ಆದರೆ ‘ಸ್ತ್ರೀ 2’ ಸಿನಿಮಾ ಬಿಡುಗಡೆಗೂ ಮುನ್ನವೇ ಒಂದು ನೆಗೆಟಿವ್ ಕಾರಣದಿಂದ ಸುದ್ದಿ ಆಗುತ್ತಿದೆ. ಪೋಸ್ಟರ್ ಕಾಪಿ ಮಾಡಿದ ಆರೋಪ ಈ ಸಿನಿಮಾ ತಂಡದ ಮೇಲಿದೆ.
ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮುಂತಾದವರು ‘ಸ್ತ್ರೀ 2’ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ತಮನ್ನಾ ಭಾಟಿಯಾ, ವರುಣ್ ಧವನ್ ಅಭಿನಯಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಈ ಸಿನಿಮಾ ಕೌತುಕ ಕೆರಳಿಸಿದೆ. ಆದರೆ ಇಂಗ್ಲಿಷ್ನ ‘ಸ್ಟ್ರೇಂಜರ್ ಥಿಂಗ್ಸ್’ ಸೀರಿಸ್ನಿಂದ ಪೋಸ್ಟರ್ ಕಾಪಿ ಮಾಡಿದ ಕಾರಣದಿಂದ ‘ಸ್ತ್ರೀ 2’ ಸಿನಿಮಾ ಟ್ರೋಲ್ ಆಗುತ್ತಿದೆ.
ಕಲಾವಿದರ ಎಕ್ಸ್ಪ್ರೆಷನ್, ಹಿನ್ನೆಲೆಯಲ್ಲಿ ಇರುವ ಕಲರ್ ಕಾಂಬಿನೇಷನ್, ಟೈಟಲ್ಗೆ ಬಳಸಿದ ಬಣ್ಣ.. ಸೇರಿದಂತೆ ಹಲವು ವಿಚಾರಗಳಲ್ಲಿ ‘ಸ್ತ್ರೀ 2’ ಮತ್ತು ‘ಸ್ಟ್ರೇಂಜರ್ ಥಿಂಗ್ಸ್’ ಪೋಸ್ಟರ್ಗಳ ನಡುವೆ ಗಾಢವಾದ ಸಾಮ್ಯತೆ ಕಾಣುತ್ತಿದೆ. ಈ ರೀತಿ ಕಾಪಿ ಮಾಡಿದ್ದನ್ನು ನೆಟ್ಟಿಗರು ಖಂಡಿಸಿದ್ದಾರೆ. ಆದರೆ ಕೆಲವರು ‘ಸ್ತ್ರೀ 2’ ಸಿನಿಮಾ ತಂಡದ ಪರವಾಗಿಯೂ ಕಮೆಂಟ್ ಮಾಡಿದ್ದಾರೆ. ‘ಪೋಸ್ಟರ್ ಹೇಗಾದರೂ ಇರಲಿ, ಸಿನಿಮಾ ಹೇಗಿದೆ ಎಂಬುದು ಮುಖ್ಯವಾಗುತ್ತದೆ’ ಎಂದು ಅಪ್ಪಟ ಅಭಿಮಾನಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಹಾಡಿನಲ್ಲಿ ತಮನ್ನಾ ಭರ್ಜರಿ ಡ್ಯಾನ್ಸ್; ‘ಸ್ತ್ರೀ 2’ ಚಿತ್ರದಲ್ಲಿ ಐಟಂ ಸಾಂಗ್
2018ರಲ್ಲಿ ತೆರೆಕಂಡಿದ್ದ ‘ಸ್ತ್ರೀ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಅದರ ಸೀಕ್ವೆಲ್ ಆಗಿ ‘ಸ್ತ್ರೀ 2’ ಸಿನಿಮಾ ತಯಾರಾಗಿದೆ. ಅಮರ್ ಕೌಶಿಕ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶ್ರದ್ಧಾ ಕಪೂರ್ ಅವರು ಪ್ರೇಕ್ಷಕರನ್ನು ಹೆದರಿಸಲಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’, ಜಾನ್ ಅಬ್ರಾಹಂ ಅಭಿನಯದ ‘ವೇದಾ’ ಸಿನಿಮಾಗಳ ನಡುವೆ ‘ಸ್ತ್ರೀ 2’ ಬಿಡುಗಡೆ ಆಗುತ್ತಿರುವುದರಿಂದ ಈ ಗುರುವಾರ (ಆಗಸ್ಟ್ 15) ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.