
ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಿಧನ ಹೊಂದಿ ವರ್ಷಗಳೇ ಆದವು. ಆದರೆ ಆ ಪ್ರಕರಣದ ಚರ್ಚೆ ಇನ್ನೂ ಚಾಲ್ತಿಯಲ್ಲಿದೆ. ದೇಶವನ್ನೇ ಅಲ್ಲಾಡಿಸಿದ್ದ ಪ್ರಕರಣವದು. ಪ್ರಕರಣದ ನಂತರ ಬೆಳಕಿಗೆ ಬಂದ ಬಾಲಿವುಡ್ ಡ್ರಗ್ಸ್ ಪ್ರಕರಣವೂ ಸಹ ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ಆ ಪ್ರಕರಣದಲ್ಲಿ ಮಾಧ್ಯಮಗಳು, ನೆಟ್ಟಿಗರು ಸುಶಾಂತ್ ಸಿಂಗ್ ರಜಪೂತ್ರ ಗೆಳತಿ ರಿಯಾ ಚಕ್ರವರ್ತಿಯನ್ನು ದೋಷಿಯೆಂದು ತೀರ್ಮಾನಿಸಿಬಿಟ್ಟಿದ್ದರು. ರಿಯಾ ಹಾಗೂ ಅವರ ಸಹೋದರ ಇಬ್ಬರೂ ಸಹ ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಬೇಕಾಯ್ತು. ಆದರೆ ಆ ಪ್ರಕರಣದಿಂದ ರಿಯಾಗೆ ತಾತ್ವಿಕ ಗೆಲುವು ಆ ಬಳಿಕ ಲಭ್ಯವಾಯ್ತು. ಇದೀಗ ರಿಯಾ ಹೊಸ ಉದ್ಯಮ ಆರಂಭಿಸಿದ್ದು, ಅದಕ್ಕೆ ಸ್ಪೂರ್ತಿಯಾಗಿದ್ದ ಸುಶಾಂತ್ ಸಿಂಗ್ ಪ್ರಕರಣವೇ.
ಸುಶಾಂತ್ ಸಿಂಗ್ ನಿಧನದ ಬಳಿಕ ಮಾಧ್ಯಮಗಳಂತೂ ರಿಯಾ ಚಕ್ರವರ್ತಿಯ ಹಿಂದೆ ಬಿದ್ದಿದ್ದವು, ರಿಯಾರನ್ನು ರಾಕ್ಷಿಸಿಗೆ ಹೋಲಿಸಿ ಪ್ರೈಂ ಟೈಂ ಸುದ್ದಿಗಳು ಪ್ರತಿದಿನವೂ ಪ್ರಸಾರವಾಗುತ್ತಿದ್ದವು. ರಿಯಾಗೆ ಆಗ ಏನೂ ಮಾಡಲಾಗದ ಸ್ಥಿತಿ. ರಿಯಾ ಜೈಲಿಗೆ ಹೋಗುವ ಮೊದಲು ತನಿಖೆಗೆ ಹಾಜರಾದಾಗ ಧರಿಸಿದ್ದ ಟಿ-ಶರ್ಟ್ ಆಗ ಬಹಳ ಸದ್ದು ಮಾಡಿತು. ದಮನಕಾರಿ ಪ್ರಭುತ್ವವನ್ನು ಅಂತ್ಯಗೊಳಿಸೋಣ ಎಂಬರ್ಥದ ಸಾಲುಗಳು ಆ ಟಿ-ಶರ್ಟ್ ಮೇಲಿತ್ತು. ರಿಯಾ ಧರಿಸಿದ ಟಿ-ಶರ್ಟ್ ಮೇಲಿದ್ದ ಸಾಲುಗಳು ರಿಯಾರನ್ನು ಮೌನವಾಗಿ ಬೆಂಬಲಿಸುತ್ತಿದ್ದವರಿಗೆ ದನಿ ನೀಡಿತ್ತು. ರಿಯಾ, ಆ ಟಿ ಶರ್ಟ್ ಧರಿಸಿದ ಬಳಿಕವೇ ಅವರಿಗೆ ಬಹಿರಂಗ ಬೆಂಬಲ ವ್ಯಕ್ತವಾಗಿತ್ತು.
ಇದೀಗ ಅದನ್ನೇ ಸ್ಪೂರ್ತಿಯಾಗಿರಿಸಿಕೊಂಡು ಟಿ-ಶರ್ಟ್ ಉದ್ಯಮವೊಂದನ್ನು ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಪ್ರಾರಂಭ ಮಾಡಿದ್ದಾರೆ. ರಿಯಾರ ಹೊಸ ಕಂಪೆನಿಯ ಹೆಸರು ‘ಚಾಪ್ಟರ್ 2’ ಎಂದು. ‘ನಾವು ಏನಂದು ಕೊಂಡಿದ್ದೆವು ಅದನ್ನು ಹೇಳಲು ಸಾಧ್ಯವಾಗದೇ ಇದ್ದ ಸಮಯದಲ್ಲಿ ನಮ್ಮ ಟಿ-ಶರ್ಟ್ ನಮಗಾಗಿ ಮಾತನಾಡಿತ್ತು, ನಮ್ಮಂತೆ ಈಗ ಅನೇಕ ಜನರಿದ್ದಾರೆ, ಅವರಿಗಾಗಿ ನಮ್ಮ ಟಿ-ಶರ್ಟ್ ಮಾತನಾಡಲಿವೆ. ನಾವು ಸ್ಲೋಗನ್ಗಳನ್ನು ಹೊಂದಿರುವ ಟಿ-ಶರ್ಟ್ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ’ ಎಂದಿದ್ದಾರೆ ರಿಯಾ.
ಇದನ್ನೂ ಓದಿ:ಸುಶಾಂತ್ ಸಿಂಗ್ ಸಾವಿನ ಕೇಸ್ನಲ್ಲಿ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್; ದೇವಸ್ಥಾನಕ್ಕೆ ಬಂದ ನಟಿ
‘ನಾವು ಒಟ್ಟಿಗೆ ಏನಾದರೂ ಮಾಡಬೇಕು ಎಂದು ಬಹಳ ಸಮಯದಿಂದಲೂ ಅಂದುಕೊಳ್ಳುತ್ತಲೇ ಇದ್ದೆವು. ಆದರೆ ಏನು ಮಾಡಬೇಕು ಎಂಬುದು ನಮಗೆ ತಿಳಿದಿರಲಿಲ್ಲ. ಸೋಪುಗಳು, ಸೌಂದರ್ಯವರ್ಧಕಗಳು ಹೀಗೆ ಇನ್ನೂ ಹಲವು ಪ್ರಾಡಕ್ಟ್ಗಳ ಬಗ್ಗೆ ನಾವು ಯೋಚಿಸಿದೆವು, ಆದರೆ ಅದ್ಯಾವುದು ನಮಗೆ ಸರಿ ಬರಲಿಲ್ಲ. ಕೊನೆಯದಾಗಿ ನಮಗೆ ಯಾವುದು ದನಿ ನೀಡಿತೋ ಅದರ ಮೂಲಕ ನಾವು ಬೇರೆಯವರಿಗೆ ದನಿ ಆಗೋಣ ಎಂದು ನಿರ್ಧರಿಸಿ ಈ ಉದ್ಯಮ ಆರಂಭಿಸಿದೆವು’ ಎಂದಿದ್ದಾರೆ ರಿಯಾ.
ಸುಶಾಂತ್ ಸಿಂಗ್ ಪ್ರಕರಣದ ಬಳಿಕ ರಿಯಾ ಚಿತ್ರರಂಗದಿಂದಲೂ ಬಹುತೇಕ ದೂರಾಗಿದ್ದಾರೆ. ಟಿವಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಬೆಂಗಳೂರಿನ ಉದ್ಯಮಿ ನಿಖಿಲ್ ಕಾಮತ್ ಜೊತೆಗೂ ಕಾಣಿಸಿಕೊಂಡಿದ್ದರು. ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಸಿದ ಸಿಬಿಐ, ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ರಿಯಾರನ್ನು ಆರೋಪ ಮುಕ್ತಗೊಳಿಸಿದೆ. ಪ್ರಕರಣದ ನ್ಯಾಯಾಲಯ ವಿಚಾರಣೆ ಚಾಲ್ತಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ