ದಿಲ್ಜೀತ್ ದೊಸ್ಸಾಂಜ್, ಭಾರತ ಮಾತ್ರವಲ್ಲ ವಿಶ್ವ ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು ಇದು. ಹಾಲಿವುಡ್ ಪಾಪ್ ತಾರೆಯರ ರೀತಿಯಲ್ಲಿ ದಿಲ್ಜೀತ್ ದೊಸ್ಸಾಂಜ್ ಅವರ ಲೈವ್ ಕಾನ್ಸರ್ಟ್ಗಳು ನಡೆಯುತ್ತಿವೆ. ಆಸ್ಟ್ರೇಲಿಯಾ, ಲಂಡನ್, ನ್ಯೂಯಾರ್ಕ್ ಇನ್ನಿತರೆ ಮಹಾನಗರಗಳಲ್ಲಿ ಸಹ ದಿಲ್ಜಿತ್ರ ಲೈವ್ ಕಾನ್ಸರ್ಟ್ ನೋಡಲು ಲಕ್ಷಾಂತರ ಮಂದಿ ಬರುತ್ತಿದ್ದಾರೆ. ಭಾರತದಲ್ಲಂತೂ ದಿಲ್ಜೀತ್ರ ಕಾನ್ಸರ್ಟ್ ಟಿಕೆಟ್ಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ. ಇದೀಗ ದಿಲ್ಜೀತ್ ದೊಸ್ಸಾಂಜ್ಗೆ ತೆಲಂಗಾಣ ಸರ್ಕಾರ ನೊಟೀಸ್ ನೀಡಿದೆ.
ದಿಲ್ಜಿತ್ ದೊಸ್ಸಾಂಜ್, ‘ದಿಲ್ಲುಮಿನಾಟಿ’ ಹೆಸರಿ ಲೈವ್ ಕಾನ್ಸರ್ಟ್ ಟೂರ್ ಮಾಡುತ್ತಿದ್ದಾರೆ. ಭಾರತದ ಹಲವು ನಗರಗಳಲ್ಲಿ ತಮ್ಮ ಶೋ ನಡೆಸಿಕೊಡಲಿದ್ದಾರೆ. ಇದೀಗ ತೆಲಂಗಾಣದ ಹೈದರಾಬಾದ್ನಲ್ಲಿ ದಿಲ್ಜಿತ್ ದೊಸ್ಸಾಂಗ್ ಶೋ ನಡೆಸಿಕೊಡಲಿದ್ದು, ಶೋಗೆ ಮುನ್ನ, ತೆಲಂಗಾಣ ಸರ್ಕಾರ ದಿಲ್ಜಿತ್ಗೆ ನೊಟೀಸ್ ನೀಡಿದ್ದು, ಕೆಲವು ಹಾಡುಗಳನ್ನು ಹಾಡದಂತೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ.
ನವೆಂಬರ್ 15 ಅಂದರೆ ಇಂದು ರಾತ್ರಿ ದಿಲ್ಜೀತ್ರ ಶೋ ಹೈದರಾಬಾದ್ನಲ್ಲಿ ನಡೆಯಲಿದ್ದು, ಶೋಗೆ ಮುನ್ನ ಸರ್ಕಾರ ನೊಟೀಸ್ ನೀಡಿದ್ದು, ಡ್ರಗ್ಸ್, ಮದ್ಯ, ಹಿಂಸೆಯ ಕುರಿತಾದ ಹಾಡುಗಳನ್ನು ವೇದಿಕೆಯಲ್ಲಿ ಹಾಡುವಂತಿಲ್ಲ ಎಂದು ದಿಲ್ಜಿತ್ ದೊಸ್ಸಾಂಗ್ಗೆ ತೆಲಂಗಾಣ ಸರ್ಕಾರ ಹೇಳಿದೆ. ಅಲ್ಲದೆ, ವೇದಿಕೆ ಮೇಲೆ ಮಕ್ಕಳನ್ನು ಕರೆತರುವಂತಿಲ್ಲ, ಇದು ಡಬ್ಲುಎಚ್ಓ ನಿಯಮಕ್ಕೆ ವಿರುದ್ಧ ಆಗಿರಲಿದೆ ಎಂದು ಸಹ ಸರ್ಕಾರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಪುಟ್ಟ ಬಾಲಕಿಗೆ ಫ್ರೀ ಟಿಕೆಟ್ ನೀಡಿದ ಗಾಯಕ ದಿಲ್ಜಿತ್ ದೊಸಾಂಜ್; ವಿಡಿಯೋ ವೈರಲ್
ಈ ಹಿಂದೆ ದಿಲ್ಜಿತ್ ದೊಸ್ಸಾಂಗ್, ದೆಹಲಿ, ಜೈಪುರ ಹಾಗೂ ಚಂಡೀಘಡಗಳಲ್ಲಿ ಶೋ ಮಾಡಿದ್ದು, ಆ ಶೋಗಳಲ್ಲಿ ಡ್ರಗ್ಸ್, ಮದ್ಯ, ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಿದ್ದರು. ಈ ಬಗ್ಗೆ ಟ್ವಿಟ್ಟರ್ ಬಳಕೆದಾರರೊಬ್ಬರು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಇದು ವೈರಲ್ ಆಗಿದ್ದು, ಟ್ವಿಟ್ಟರ್ನಲ್ಲಿ ವಿರೋಧಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಮುಂಚಿತವಾಗಿ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರ, ಮಾದಕ ವಸ್ತು, ಮದ್ಯ ಸೇವನೆ ಮತ್ತು ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಬಾರದೆಂದು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹಾಡು ಹಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ.
ಅಕ್ಟೋಬರ್ 26 ರಿಂದ ದಿಲ್ಜೀತ್ರ ಇಂಡಿಯಾ ಟೂರ್ ಪ್ರಾರಂಭ ಆಗಿದೆ. ಹೈದರಾಬಾದ್ನಲ್ಲಿ ಇಂದು ಶೋ ನಡೆಯುತ್ತಿದ್ದು, ಮುಂದಿನ ಶೋ ಬೆಂಗಳೂರಿನಲ್ಲಿ ನಡೆಯಲಿದೆ. ಹೈದರಾಬಾದ್ನ ಶೋ ಟಿಕೆಟ್ಗಳು ಮುಂಚಿತವಾಗಿಯೇ ಪೂರ್ಣವಾಗಿ ಮಾರಾಟಗೊಂಡಿದ್ದವು. ಇಂದು ಸಹ ಸಾವಿರಾರು ಮಂದಿ ಅಭಿಮಾನಿಗಳು ದಿಲ್ಜೀತ್ರ ಶೋಗೆ ಹಾಜರಾಗುವ ನಿರೀಕ್ಷೆ ಇದೆ. ದಿಲ್ಜಿತ್, ಸ್ಥಳೀಯ ಗಾಯಕರೊಬ್ಬರೊಟ್ಟಿಗೆ ಸೇರಿಕೊಂಡು ಈ ಶೋಗಳನ್ನು ನಡೆಸಿಕೊಡುತ್ತಾರೆ. ಇಂದು ಯಾರು ದಿಲ್ಜೀತ್ ಶೋಗೆ ಜೊತೆ ಆಗುತ್ತಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ