ಪುಟ್ಟ ಬಾಲಕಿಗೆ ಫ್ರೀ ಟಿಕೆಟ್ ನೀಡಿದ ಗಾಯಕ ದಿಲ್ಜಿತ್ ದೊಸಾಂಜ್; ವಿಡಿಯೋ ವೈರಲ್
ದೆಹಲಿಯಲ್ಲಿ ನಡೆದ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ 50,000 ಕ್ಕೂ ಹೆಚ್ಚು ಜನರು ಹಾಜರಿದ್ದರು. ಒಬ್ಬ ಬಾಲಕಿ ತನ್ನ ಮನೆಯ ಬಾಲ್ಕನಿಯಿಂದ ದಿಲ್ಜಿತ್ ಅವರನ್ನು ಜೋರಾಗಿ ಹಾಡಲು ಕೇಳಿಕೊಂಡ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ದಿಲ್ಜಿತ್ ಅವರು ಆ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಉಚಿತ ಟಿಕೆಟ್‌ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖ್ಯಾತ ಗಾಯಕ ಹಾಗೂ ನಟ ದಿಲ್ಜಿತ್ ದೊಸಾಂಜ್ ಅವರು ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದ್ದಾರೆ. 50 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಆದರೆ ಇನ್ನೂ ಹಲವರಿಗೆ ಇದರಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಕೆಲವು ಅಭಿಮಾನಿಗಳು ದೂರದಲ್ಲೇ ನಿಂತು ಅವರ ಹಾಡುಗಳನ್ನು ಕೇಳಿ ಆನಂದಿಸಿದ್ದಾರೆ. ಆ ಪೈಕಿ ಪುಟ್ಟ ಬಾಲಕಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಮನೆಯ ಬಾಲ್ಕನಿಯಲ್ಲಿ ನಿಂತ ಈ ಬಾಲಕಿಯು ದಿಲ್ಜಿತ್ ದೊಸಾಂಜ್ ಅವರಿಗೆ ಒಂದು ಮನವಿ ಮಾಡಿದ್ದಾಳೆ. ಆಕೆಯ ಅಭಿಮಾನಕ್ಕೆ ಮನಸೋತ ದಿಲ್ಜಿತ್ ಅವರು ಫ್ರೀ ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ದೂರದಲ್ಲಿ ದಿಲ್ಜಿತ್ ದೊಸಾಂಜ್ ಅವರ ಕಾನ್ಸರ್ಟ್ ನಡೆಯುತ್ತಿದೆ. ಮನೆಯ ಬಾಲ್ಕನಿಯಲ್ಲಿ ನಿಂತಿರುವ ಬಾಲಕಿಯು ‘ದಿಲ್ಜಿತ್ ಅಂಕಲ್.. ಸ್ವಲ್ಪ ಜೋರಾಗಿ ಹಾಡಿ.. ನನಗೆ ಸರಿಯಾಗಿ ಕೇಳಿಸುತ್ತಿಲ್ಲ’ ಎಂದು ಮುದ್ದಾಗಿ ಹೇಳಿದ್ದಾಳೆ. ವೈರಲ್ ಆಗಿರುವ ಈ ವಿಡಿಯೋ ದಿಲ್ಜಿತ್ ದೊಸಾಂಜ್ ಅವರ ಗಮನಕ್ಕೂ ಬಂದಿದೆ.
ಇದನ್ನೂ ಓದಿ: ಹೋಟೆಲ್ ಮಹಡಿಯಿಂದ ಬಿದ್ದು ಗಾಯಕ ಸಾವು, ಹಲವು ಅನುಮಾನ
ದಿಲ್ಜಿತ್ ದೊಸಾಂಜ್ ಅವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಪುಟ್ಟ ಬಾಲಕಿಯ ಮನವಿಗೆ ಅವರು ಮನಸೋತಿದ್ದಾರೆ. ‘ಬಾ ಮಗು.. ನಿನಗಾಗಿ ಮತ್ತು ನಿನ್ನ ಕುಟುಂಬದವರಿಗಾಗಿ ನನ್ನ ಬಳಿ ಟಿಕೆಟ್ಗಳಿವೆ’ ಎಂದು ದಿಲ್ಜಿತ್ ದೊಸಾಂಜ್ ಅವರು ಕ್ಯಾಪ್ಷನ್ ನೀಡಿದ್ದಾರೆ. ಅವರ ಈ ಗುಣಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ವೈರಲ್ ವಿಡಿಯೋ:
View this post on Instagram
‘ಈ ರೀಲ್ ಅನ್ನು ದಿಲ್ಜಿತ್ ದೊಸಾಂಜ್ ಅವರ ಸ್ಟೋರಿಯಲ್ಲಿ ನೋಡಿದಾಗ ನನಗೆ ರೋಮಾಂಚನ ಆಯಿತು’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಪಂಜಾಬಿ ಮತ್ತು ಹಿಂದಿ ಚಿತ್ರರಂಗದಲ್ಲಿ ದಿಲ್ಜಿತ್ ದೊಸಾಂಜ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಟನೆ ಮತ್ತು ಗಾಯನದ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ದೆಹಲಿ ಕಾನ್ಸರ್ಟ್ ಸೂಪರ್ ಹಿಟ್ ಆಗಿದೆ. ಈ ಕಾನ್ಸರ್ಟ್ನಲ್ಲಿ ದಿಲ್ಜಿತ್ ಅವರು ತ್ರಿವರ್ಣ ಧ್ವಜ ಹಿಡಿದಿದ್ದು ನೋಡಿ ಫ್ಯಾನ್ಸ್ ಇನ್ನಷ್ಟು ಥ್ರಿಲ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.