ಈಗ ಎಲ್ಲೆಲ್ಲೂ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾದ್ದೇ ಹವಾ. ಹಲವು ದಾಖಲೆಗಳನ್ನು ಮಾಡುತ್ತ ಈ ಚಿತ್ರ ಮುನ್ನುಗ್ಗುತ್ತಿದೆ. ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಯಶಸ್ಸು ಕಂಡಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿ ಕಮಾಯಿ ಮಾಡಿದೆ ಈ ಸಿನಿಮಾ. ಅಚ್ಚರಿ ಎಂದರೆ, ಪ್ರಭಾಸ್ ಅವರಂತಹ ಸ್ಟಾರ್ ಸಿನಿಮಾಗಳು ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಎದುರು ಸೋತು ಸುಣ್ಣ ಆಗಿವೆ. ಅದೇ ರೀತಿ ಅಕ್ಷಯ್ ಕುಮಾರ್ (Akshay Kumar) ಅವರ ಹೊಸ ಸಿನಿಮಾಗೂ ಇದರ ಬಿಸಿ ಮುಟ್ಟಿದೆ. ಹೌದು, ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ (Bachchan Pandey Movie) ಸಿನಿಮಾ ಮಾ.18ರಂದು ರಿಲೀಸ್ ಆಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಮೆರೆಯಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆ ಆಗುತ್ತದೆ ಎಂದಾಗ ಅವರ ಚಿತ್ರಕ್ಕೆ ಅತಿ ಹೆಚ್ಚು ಸ್ಕ್ರೀನ್ಗಳನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಅದು ಸಾಧ್ಯವಾಗಿಲ್ಲ. ಸತತ 8ನೇ ದಿನವೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತನ್ನ ಆಟ ಮುಂದುವರಿಸಿರುವ ಕಾರಣದಿಂದ ಹೆಚ್ಚು ಸ್ಕ್ರೀನ್ ಪಡೆಯುವಲ್ಲಿ ‘ಬಚ್ಚನ್ ಪಾಂಡೆ’ ಸಿನಿಮಾ ಹಿಂದೆ ಬಿದ್ದಿದೆ.
ಮಾ.11ರಂದು ‘ದಿ ಕಾಶ್ಮೀರ್ ಫೈಲ್ಸ್’ ಬಿಡುಗಡೆ ಆಯಿತು. ಒಂದು ವಾರದ ಬಳಿಕ ಅಂದರೆ, ಮಾ.18ರಂದು ‘ಬಚ್ಚನ್ ಪಾಂಡೆ’ ತೆರೆಕಂಡಿದೆ. ಸ್ಟಾರ್ ನಟರ ಹೊಸ ಚಿತ್ರಕ್ಕೆ ಹೆಚ್ಚು ಸ್ಕ್ರೀನ್ಸ್ ಸಿಗುವುದು ವಾಡಿಕೆ. ಆದರೆ ‘ಬಚ್ಚನ್ ಪಾಂಡೆ’ ವರ್ಸಸ್ ‘ದಿ ಕಾಶ್ಮೀರ್ ಫೈಲ್ಸ್’ ವಿಚಾರದಲ್ಲಿ ಲೆಕ್ಕಾಚಾರ ಬೇರೆ ಆಗಿದೆ. ಮಾ.18ರಂದು ಬರೋಬ್ಬರಿ 4 ಸಾವಿರ ಪರದೆಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನ ಕಂಡಿದೆ. ಆ ಚಿತ್ರದ ಅಬ್ಬರದ ಎದುರು ‘ಬಚ್ಚನ್ ಪಾಂಡೆ’ ಸಿನಿಮಾಗೆ ಸಿಕ್ಕಿದ್ದು 3 ಸಾವಿರ ಸ್ಕ್ರೀನ್ಗಳು. ಅಂದರೆ, ಒಂದು ಸಾವಿರ ಸ್ಕ್ರೀನ್ಗಳ ಅಂತರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಜಯಭೇರಿ ಬಾರಿಸುತ್ತಿದೆ.
ಮೊದಲ ದಿನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಆಟ ಆರಂಭ ಆಗಿದ್ದು ಕೇವಲ 600 ಪರದೆಗಳ ಮೂಲಕ. ಆದರೆ ಮೂರೇ ದಿನಕ್ಕೆ ಆ ಸಂಖ್ಯೆಯನ್ನು 2 ಸಾವಿರಕ್ಕೆ ಏರಿಸಲಾಗಿತ್ತು. ಬಳಿಕ ಜನರಿಂದ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ 4 ಸಾವಿರ ಪರದೆಗಳಿಗೆ ಏರಿಸಲಾಯಿತು. ಈಗಲೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಮಾ.11ರಂದು ಈ ಚಿತ್ರ ಕೇವಲ 3.55 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದರಿಂದ ಎರಡನೇ ದಿನ ಕಲೆಕ್ಷನ್ ಹೆಚ್ಚಿತು. ಮಾ.12ರಂದು ಈ ಸಿನಿಮಾ 8.50 ಕೋಟಿ ರೂಪಾಯಿ ಗಳಿಕೆ ಮಾಡಿತು. 3ನೇ ದಿನ 15.10 ಕೋಟಿ ರೂಪಾಯಿ, 4ನೇ ದಿನ 15.05 ಕೋಟಿ ರೂಪಾಯಿ, 5ನೇ ದಿನ 18 ಕೋಟಿ ರೂಪಾಯಿ, 6ನೇ ದಿನ ಬರೋಬ್ಬರಿ 19.05 ಕೋಟಿ ರೂಪಾಯಿ ಗಳಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. 7ನೇ ದಿನ 18.05 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಇನ್ನೂ ಸಹ ಬಹುತೇಕ ಕಡೆಗಳಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ. ಅನೇಕ ಸ್ಕ್ರೀನ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್ ಅಗರ್ವಾಲ್ ನಿರ್ಮಾಣ ಮಾಡಿದ್ದಾರೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ವಿಥುನ್ ಚಕ್ರವರ್ತಿ, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
‘ಜೇಮ್ಸ್’ ಬಂದ್ರೂ ‘ದಿ ಕಾಶ್ಮೀರ್ ಫೈಲ್ಸ್’ ಹೌಸ್ಫುಲ್: ಹೆಚ್ಚುತ್ತಲೇ ಇದೆ ಈ ಸಿನಿಮಾ ಕಲೆಕ್ಷನ್