ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ; ಆ ಒಂದು ದೃಶ್ಯ ತೋರಿಸದಿರಲು ಕೋರ್ಟ್ ಸೂಚನೆ

| Updated By: ರಾಜೇಶ್ ದುಗ್ಗುಮನೆ

Updated on: Mar 11, 2022 | 12:10 PM

ಮಾರ್ಚ್​ 4ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್​ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು. ಅವರು ಸಿನಿಮಾ ಬಗ್ಗೆ ಧ್ವನಿ ಎತ್ತಿದ್ದಾರೆ.

ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ; ಆ ಒಂದು ದೃಶ್ಯ ತೋರಿಸದಿರಲು ಕೋರ್ಟ್ ಸೂಚನೆ
ಕಶ್ಮೀರ್ ಫೈಲ್ಸ್​
Follow us on

ದಿ ಕಾಶ್ಮೀರ್ ಫೈಲ್ಸ್​’ (The Kashmir Files) ಸಿನಿಮಾ ಆರಂಭದಿಂದಲೂ ಸಾಕಷ್ಟು ವಿವಾದಗಳ ಮೂಲಕ ಸುದ್ದಿ ಆಗುತ್ತಿರುವ ಸಿನಿಮಾ. 1990ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಕೊಲೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ಈಗ ಕೋರ್ಟ್​ನಿಂದ ನಿರ್ಬಂಧ ಎದುರಾಗಿದೆ. ಭಾರತೀಯ ವಾಯುಪಡೆಯ ಅಧಿಕಾರಿ (IAF Officer) ರವಿ ಖನ್ನಾ (Ravi Khanna) ಅವರ ದೃಶ್ಯಗಳನ್ನು ತೋರಿಸದಂತೆ ‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರ ತಂಡಕ್ಕೆ ಜಮ್ಮು ಕೋರ್ಟ್​ ನಿರ್ದೇಶನ ನೀಡಿದೆ.

ಮಾರ್ಚ್​ 4ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್​ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು. ‘ಸಿನಿಮಾದಲ್ಲಿ ನನ್ನ ಪತಿಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಲಾಗಿದೆ. ರವಿ ಖನ್ನಾ ಅವರನ್ನು ತಪ್ಪಾದ ರೀತಿಯಲ್ಲಿ ತೋರಿಸಲಾಗಿದೆ’ ಎಂದು ದೂರಿದ್ದರು. ಸಿನಿಮಾ ಮುಗಿದ ಬಳಿಕ ವೇದಿಕೆ ಮೇಲೆ ಈ ವಿಚಾರ ಹೇಳಿಕೊಂಡಿದ್ದರು. ಆದರೆ, ಯಾರೊಬ್ಬರೂ ಆ ಬಗ್ಗೆ ಲಕ್ಷ್ಯ ವಹಿಸಲಿಲ್ಲ. ಈ ಕಾರಣಕ್ಕೆ ಅವರು ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದಾರೆ.  ರವಿ ಖನ್ನಾ ಸೇರಿ ಐಎಎಫ್​ನ ನಾಲ್ಕು ಸಿಬ್ಬಂದಿ 1990ರ ಜನವರಿ 25ರಂದು ಹುತಾತ್ಮರಾದರು. ಈ ಸಂಚಿನ ಹಿಂದೆ ಜಮ್ಮು ಕಾಶ್ಮೀರ್​ ಲಿಬರೇಷನ್​ ಫ್ರಂಟ್​ನ ಮುಖ್ಯಸ್ಥ ಯಾಸಿನ್ ಮಲಿಕ್  ಕೈವಾಡ ಇದೆ ಎನ್ನಲಾಗಿದೆ.

‘ದೂರಿನಲ್ಲಿ ಹೇಳಿರುವುದನ್ನು ಗಮನಿಸಿದ್ದೇವೆ. ರವಿ ಖನ್ನಾ ಅವರಿಗೆ ಸಂಬಂಧಿಸಿದ ದೃಶ್ಯಗಳನ್ನು ಪ್ರದರ್ಶನ ಮಾಡುವಂತಿಲ್ಲ’ ಎಂದು ಜಮ್ಮುವಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದೀಪಕ್ ಸೇಥಿ ಆದೇಶದಲ್ಲಿ ತಿಳಿಸಿದ್ದಾರೆ. ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದಲ್ಲಿ, ಅನುಪಮ್​ ಖೇರ್​ ಹಾಗೂ ಮೊದಲಾದವರು ನಟಿಸಿದ್ದಾರೆ.

ಕಪಿಲ್​ ಶರ್ಮಾ ಶೋ ವಿಚಾರದಲ್ಲಿ ಚರ್ಚೆ ಆಗಿದ್ದ ಸಿನಿಮಾ 

ಇತ್ತೀಚೆಗೆ ಕಪಿಲ್​ ಶರ್ಮಾ ಶೋ ಬಗ್ಗೆ ನಿರ್ದೇಶಕ ವಿವೇಕ್ ಗಂಭೀರ ಆರೋಪ ಮಾಡಿದ್ದರು. ‘ನಮ್ಮ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇಲ್ಲ ಎಂಬ ಕಾರಣಕ್ಕೆ ನಮ್ಮನ್ನು ಕಾರ್ಯಕ್ರಮಕ್ಕೆ ಕರೆಯಲು ಕಪಿಲ್​ ಶರ್ಮಾ ನಿರಾಕರಿಸಿದರು’ ಎಂದು ವಿವೇಕ್​ ಹೇಳಿದ್ದರು. ಇದಲ್ಲದೆ ಮತ್ತೊಂದು ಟ್ವೀಟ್​ ಮಾಡಿದ್ದ ಅವರು, ‘ಕಪಿಲ್​ ಶರ್ಮಾ ಶೋಗೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಾನು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಇದು ಅವರು ಮತ್ತು ಅವರ ನಿರ್ಮಾಣ ತಂಡದ ಆಯ್ಕೆ. ಅಮಿತಾಭ್​ ಬಚ್ಚನ್​ ಅವರು ಒಮ್ಮೆ ಗಾಂಧೀಜಿ ಅವರು ಹೇಳಿದ್ದ ವಾಕ್ಯವನ್ನು ಹೇಳಿದ್ದರು. ಅವರು ರಾಜರು, ನಾವು ಬಡವರು’ ಎಂದು ಬರೆದಿದ್ದರು ವಿವೇಕ್​. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಕಪಿಲ್ ಶರ್ಮಾ ಇದನ್ನು ಅಲ್ಲಗಳೆದಿದ್ದರು.

ಇದನ್ನೂ ಓದಿ: ‘ರಾಧೆ ಶ್ಯಾಮ್’ ವಿಮರ್ಶೆ​: ಭವಿಷ್ಯ ಹೇಳುವ ವ್ಯಕ್ತಿಯ ಕೈಯಲ್ಲಿ ಇಲ್ಲ ಮನರಂಜನೆಯ ರೇಖೆ

ಪ್ರಚಾರದ ಗಿಮಿಕ್​ಗಾಗಿ ‘ದಿ ಕಪಿಲ್ ಶರ್ಮಾ ಶೋ’ಗೆ ಮಸಿ ಬಳಿದ ನಿರ್ದೇಶಕ? ಕಪಿಲ್​ ಹೇಳಿದ್ದಿಷ್ಟು