‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಮಾ.11ರಂದು ತೆರೆಕಂಡ ಈ ಹಿಂದಿ ಸಿನಿಮಾ 100 ಕೋಟಿ ರೂಪಾಯಿ ಗಳಿಸುವತ್ತ ಮುನ್ನುಗ್ಗುತ್ತಿದೆ. ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆ ಮತ್ತು ವಲಸೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಡಿಬಂದಿದೆ. ಅನುಪಮ್ ಖೇರ್, ಪಲ್ಲವಿ ಜೋಶಿ, ವಿಥುನ್ ಚರ್ಕವರ್ತಿ, ಪುನೀತ್ ಇಸ್ಸಾರ್, ದರ್ಶನ್ ಕುಮಾರ್ ಮುಂತಾದವರು ನಟಿಸಿರುವ ಈ ಸಿನಿಮಾಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು. ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಆದರೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್ (Chhattisgarh CM Bhupesh Baghel) ಅವರು ಈ ಸಿನಿಮಾವನ್ನು ಟೀಕಿಸಿದ್ದಾರೆ. ರಾಯಪುರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ ಬಳಿಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಸಿಕ್ಕಿದೆ. ರಾಜಕೀಯ ಕ್ಷೇತ್ರದ ಅನೇಕ ಮುಖಂಡರು ಸಿನಿಮಾ ನೋಡುತ್ತಿದ್ದಾರೆ. ಚಿತ್ರ ನೋಡಿದ ಬಳಿಕ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಅವರು ಟೀಕೆ ಮಾಡಿದ್ದಾರೆ. ‘ಈ ಸಿನಿಮಾದಲ್ಲಿ ಕೇವಲ ಅರ್ಧ ಸತ್ಯವನ್ನು ತೋರಿಸಲಾಗಿದೆ. ಯಾವುದೇ ಪರಿಹಾರವನ್ನು ಇದು ಸೂಚಿಸಿಲ್ಲ. ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಆಗಿಲ್ಲ. ಕೇವಲ ಹಿಂಸೆಯನ್ನು ತೋರಿಸಲಾಗಿದೆ. ಅದಕ್ಕೆ ಯಾವುದೇ ಅರ್ಥ ಇಲ್ಲ’ ಎಂದು ಭೂಪೇಶ್ ಹೇಳಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ನಡೆದಾಗಿ ಭಾರತೀಯ ಜನತಾ ಪಕ್ಷದ ಬೆಂಬಲಿತ ವಿಪಿ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದರು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಮುಂತಾದವರ ಬೆಂಬಲ ಅವರಿಗೆ ಇತ್ತು ಎಂದು ಭೂಪೇಶ್ ಹೇಳಿದ್ದಾರೆ. ‘ಈ ಸಿನಿಮಾದಲ್ಲಿ ರಾಜಕೀಯದ ಸಂದೇಶ ನೀಡಲು ಪ್ರಯತ್ನಿಸಲಾಗಿದೆ. ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರವು ಕಾಶ್ಮೀರಿ ಪಂಡಿತರ ವಲಸೆಯನ್ನು ತಡೆಯಲಿಲ್ಲ ಎಂಬುದನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ಕಾಶ್ಮೀರಕ್ಕೆ ಮಿಲಿಟರಿಯನ್ನು ಕಳಿಸಿರಲಿಲ್ಲ. ರಾಜೀವ್ ಗಾಂಧಿ ಅವರು ಲೋಕಸಭೆಯಲ್ಲಿ ವಿಷಯ ಪ್ರಸ್ಥಾಪಿಸಿದ ಬಳಿಕ ಆರ್ಮಿಯನ್ನು ಕಳಿಸಲಾಯಿತು’ ಎಂದು ಭೂಪೇಶ್ ಹೇಳಿದ್ದಾರೆ.
ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಕಮಾಲ್:
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ, ಅಂದರೆ ಮಾ.11ರಂದು ಗಳಿಸಿದ್ದು ಬರೀ 3.55 ಕೋಟಿ ರೂಪಾಯಿ. ಅಂದು ‘ರಾಧೆ ಶ್ಯಾಮ್’ ಸಿನಿಮಾದ ಪೈಪೋಟಿ ನಡುವೆ ಈ ಚಿತ್ರ ಕಳೆದೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದರಿಂದ ಎರಡನೇ ದಿನವೇ ‘ದಿ ಕಾಶ್ಮೀರ್ ಫೈಲ್ಸ್’ ಗಳಿಕೆ ಹೆಚ್ಚಿತು. ಮಾ.12ರಂದು ಈ ಸಿನಿಮಾ 8.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿತು. 3ನೇ ದಿನ 15.10 ಕೋಟಿ ರೂಪಾಯಿ, 4ನೇ ದಿನ 15.05 ಕೋಟಿ ರೂಪಾಯಿ, 5ನೇ ದಿನ 18 ಕೋಟಿ ರೂಪಾಯಿ ಹಾಗೂ 6ನೇ ದಿನ ಬರೋಬ್ಬರಿ 19.05 ಕೋಟಿ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ಒಟ್ಟು 79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿದೇಶಿ ಗಲ್ಲಾಪೆಟ್ಟಿಗೆಯ ಆದಾಯ ಸೇರಿಸಿದರೆ ಈ ಮೊತ್ತ ಇನ್ನೂ ಹೆಚ್ಚಲಿದೆ.
ಇದನ್ನೂ ಓದಿ:
‘ಜೇಮ್ಸ್’ ಬಂದ್ರೂ ‘ದಿ ಕಾಶ್ಮೀರ್ ಫೈಲ್ಸ್’ ಹೌಸ್ಫುಲ್: ಹೆಚ್ಚುತ್ತಲೇ ಇದೆ ಈ ಸಿನಿಮಾ ಕಲೆಕ್ಷನ್
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು