ಈ ವರ್ಷ ತೆರೆಕಂಡ ಸಿನಿಮಾಗಳ ಪೈಕಿ ಅತಿ ಹೆಚ್ಚು ಚರ್ಚೆ ನಡೆದಿದ್ದು ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಗ್ಗೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಸುದೀಪ್ತೋ ಸೇನ್ (Sudipto Sen) ಹಾಗೂ ಬಂಡವಾಳ ಹೂಡಿದ್ದ ವಿಪುಲ್ ಅಮೃತ್ಲಾಲ್ ಶಾ ಅವರು ಮತ್ತೊಂದು ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕೆ ‘ಬಸ್ತರ್’ (Bastar) ಎಂದು ಹೆಸರು ಇಡಲಾಗಿದೆ. ಟೈಟಲ್ ಪೋಸ್ಟರ್ ಅನಾವರಣ ಮಾಡಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಾರಿ ಕೂಡ ಅವರಿಬ್ಬರು ಒಂದು ರಿಯಲ್ ಲೈಫ್ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಣ ಆಗಿದ್ದು ‘ಸನ್ಶೈನ್ ಪಿಕ್ಚರ್ಸ್’ ಸಂಸ್ಥೆ ಮೂಲಕ. ಈಗ ‘ಬಸ್ತರ್’ ಚಿತ್ರ ಕೂಡ ಇದೇ ಬ್ಯಾನರ್ ಮೂಲಕ ಮೂಡಿಬರಲಿದೆ. ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ನಟಿಸಿದ ಕೆಲವು ಕಲಾವಿದರು ಕೂಡ ‘ಬಸ್ತರ್’ ಚಿತ್ರದಲ್ಲಿ ಇರುತ್ತಾರಾ ಎಂಬ ಕೌತುಕ ಮೂಡಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.
ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರ ಖರೀದಿಸಲು ಯಾವ ಒಟಿಟಿ ಸಂಸ್ಥೆಯೂ ಮುಂದೆ ಬಂದಿಲ್ಲ; ಇದರ ಹಿಂದಿದೆ ಷಡ್ಯಂತ್ರ?
ದಟ್ಟ ಅರಣ್ಯದಲ್ಲಿ ಕೆಂಪು ಬಾವುಟ ಇದೆ. ನೆಲಕ್ಕೆ ಉರುಳಿದ ಮರ ಹೈಲೈಟ್ ಆಗಿದೆ. ಗನ್ ಮತ್ತು ಹೊಗೆ ಕೂಡ ಈ ಪೋಸ್ಟರ್ನಲ್ಲಿ ಇದೆ. ‘ದೇಶದಲ್ಲಿ ಸಂಚಲನ ಮೂಡಿಸಲಿದೆ ಅಡಗಿದ ಸತ್ಯ’ ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಈಗಲೇ ಅನೌನ್ಸ್ ಮಾಡಲಾಗಿದೆ. 2024ರ ಏಪ್ರಿಲ್ 5ರಂದು ‘ಬಸ್ತರ್’ ತೆರೆಕಾಣಲಿದೆ ಎಂದು ಪೋಸ್ಟರ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
Unveiling our next, #Bastar. Prepare to witness another gripping true incident that will leave you speechless. Mark your calendars for April 5, 2024!#VipulAmrutlalShah @sudiptoSENtlm @Aashin_A_Shah#SunshinePictures pic.twitter.com/3qQVxKpCcG
— Sunshine Pictures (@sunshinepicture) June 26, 2023
ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಘಟನೆಗಳನ್ನು ಇಟ್ಟುಕೊಂಡು ‘ದಿ ಕೇರಳ ಸ್ಟೋರಿ’ ಸಿದ್ಧಗೊಂಡಿತ್ತು. ಕೆಲವರು ಇದನ್ನು ಪ್ರೊಪೊಗಾಂಡ ಸಿನಿಮಾ ಎಂದು ತೆಗಳಿದ್ದರು. ಕಮಲ್ ಹಾಸನ್, ಪ್ರಕಾಶ್ ರೈ ಮುಂತಾದ ಸೆಲೆಬ್ರಿಟಿಗಳು ಸಹ ಈ ಚಿತ್ರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಮೂಲಕ ಈ ಸಿನಿಮಾ ಸಖತ್ ವಿವಾದ ಸೃಷ್ಟಿ ಮಾಡಿತ್ತು. ಈಗ ಅದೇ ಚಿತ್ರತಂಡದವರು ‘ಬಸ್ತರ್’ ಸಿನಿಮಾದಲ್ಲಿ ಯಾವ ನೈಜ ಘಟನೆಯನ್ನು ಜನರ ಎದುರು ಇಡಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.