
ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು, ಆನ್ಲೈನ್ ಜೂಜನ್ನು ಸಾರಾ ಸಗಟಾಗಿ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದಕ್ಕೂ ಮುಂಚೆ ಕೇವಲ ಸ್ಕಿಲ್ ಗೇಮ್ಗಳಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಆದರೆ ಆಗಲೂ ಸಹ ಹಲವಾರು ಬೆಟ್ಟಿಂಗ್ ಆಪ್ಗಳು ಕಳ್ಳದಾರಿಯಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇಂಥಹಾ ಬೆಟ್ಟಿಂಗ್ ಅಪ್ಲಿಕೇಶನ್ಗಳಿಗೆ ಖ್ಯಾತ ನಟ-ನಟಿಯರು ರಾಯಭಾರಿಗಳಾಗಿ ಪ್ರಚಾರ ನೀಡಿದ್ದರು. ಕೆಲವು ನಟ-ನಟಿಯರು ಹೂಡಿಕೆಯನ್ನೂ ಮಾಡಿದ್ದರು ಎನ್ನಲಾಗುತ್ತದೆ. ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಹಲವಾರು ಬಾಲಿವುಡ್ ನಟ-ನಟಿಯರುಗಳಿಗೆ ಈ ಹಿಂದೆ ಸಮನ್ಸ್, ನೊಟೀಸುಗಳನ್ನು ನೀಡಲಾಗಿದೆ. ಇದೀಗ ನಟಿ ಊರ್ವಶಿ ರೌಟೆಲಾಗೂ ಸಹ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಇಡಿ ಸಮನ್ಸ್ ಜಾರಿ ಮಾಡಿದೆ.
ಬಲು ಜನಪ್ರಿಯವಾಗಿರುವ 1xbet ಹೆಸರಿನ ಬೆಟ್ಟಿಂಗ್ ಅಪ್ಲಿಕೇಶನ್ಗೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನಟಿ ಊರ್ವಶಿ ರೌಟೆಲಾ ಮತ್ತು ಮಾಜಿ ಸಂಸದೆ ಹಾಗೂ ನಟಿ ಸಹ ಆಗಿರುವ ಮಿಮಿ ಚಕ್ರವರ್ತಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಹ ದಿನಾಂಕವನ್ನು ಸಹ ನೀಡಿದೆ.
ಇದನ್ನೂ ಓದಿ:ಊರ್ವಶಿಯಂತೆ ಕಂಗೊಳಿಸಿದ ನಟಿ ಊರ್ವಶಿ ರೌಟೆಲಾ
ಮಾಜಿ ಸಂಸದೆ ಮಿಮಿ ಚಕ್ರವರ್ತಿ ಸೆಪ್ಟೆಂಬರ್ 15 ರಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ಊರ್ವಶಿ ರೌಟೆಲಾ ಸೆಪ್ಟೆಂಬರ್ 16 ರಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ಈ ಇಬ್ಬರೂ ಸಹ 1xbet ಬೆಟ್ಟಿಂಗ್ ಅಪ್ಲಿಕೇಶನ್ ಪರವಾಗಿ ಪ್ರಚಾರ ಮಾಡಿದ್ದರು. ಅವರಿಂದ ಹಣ ಪಡೆದಿದ್ದರು ಎನ್ನಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೂ ಸಹ ಇಡಿ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು.
ಕೆಲ ವಾರಗಳ ಹಿಂದಷ್ಟೆ ಹಲವು ತೆಲುಗು ನಟ-ನಟಿಯರಿಗೂ ಸಹ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಟೀಸ್ಗಳನ್ನು ನೀಡಲಾಗಿತ್ತು. ನಟ ಪ್ರಕಾಶ್ ರೈ, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ ಇನ್ನೂ ಕೆಲವ ನಟ-ನಟಿಯರುಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯಲಾಗಿತ್ತು. ಇಡಿ ನೊಟೀಸ್ ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಲಕ್ಷ್ಮಿ ಮಂಚು, ಈ ಅಧಿಕಾರಿಗಳ ತನಿಖೆ ನನಗೆ ನಗು ತರಿಸುತ್ತದೆ. ಅವರು ಯಾವಾಗಲೂ ಪ್ರಕರಣದ ಕೊನೆಯ ವ್ಯಕ್ತಿಯನ್ನೇ ವಿಚಾರಿಸುತ್ತಾರೆ, ನಾವು ಜಾಹೀರಾತಿನಲ್ಲಿ ನಟಿಸಿದವರಷ್ಟೆ, ನೀವು ನೊಟೀಸ್ ನೀಡಿ ವಿಚಾರಣೆ ಮಾಡಬೇಕಿರುವುದು ಆ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಾರಂಭ ಮಾಡಿದವರನ್ನು ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ