
ಊರ್ವಶಿ ರೌಟೆಲಾ (Urvasi Rautela) ಒಳ್ಳೆಯ ನೃತ್ಯಗಾರ್ತಿ ಆದರೆ ಬಾಯಿ ಬಿಟ್ಟರೆ ವಿವಾದ ಉಂಟಾಗುವ ಮಾತುಗಳನ್ನೇ ಆಡುತ್ತಾರೆ. ತಮ್ಮನ್ನು ತಾವು ಪಿಆರ್ ಮಾಡಿಕೊಳ್ಳುತ್ತಲೇ ಇರುವ ಛಾಳಿ ಊರ್ವಶಿ ರೌಟೆಲಾ ಅವರಿಗೆ. ಈ ಹಿಂದೆ ತಮ್ಮನ್ನು ತಾವು ಹೊಗಳಿಕೊಳ್ಳುವ ಭರದಲ್ಲಿ ತಾನು ದೇಶದ ಶ್ರೀಮಂತ ನಟಿ ಎಂದು ಹೇಳಿಕೊಂಡಿದ್ದರು ಈ ನಟಿ. ಸೈಫ್ ಅಲಿ ಖಾನ್ ಮೇಲೆ ದಾಳಿ ಆದ ಬಗ್ಗೆ ಕೇಳಿದ ಪ್ರಶ್ನೆ ಕೇಳಿದಾಗೂ ತಮ್ಮ ಸಿರಿತನದ ಬಗ್ಗೆಯೇ ಮಾತನಾಡಿ ಟ್ರೋಲ್ ಆಗಿದ್ದ ಊರ್ವಶಿ ರೌಟೆಲಾ, ಈಗ ಸಹ ತಮ್ಮನ್ನು ಹೊಗಳಿಕೊಳ್ಳುವ ಭರದಲ್ಲಿ ಆಡಿದ ಮಾತುಗಳು ದೇವಾಲಯದ ಆರಾಧಕರಿಗೆ ಘಾಸಿ ಉಂಟು ಮಾಡಿದೆ.
ನಟಿ ಊರ್ವಶಿ ರೌಟೆಲಾ, ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಅಭಿಮಾನಿಗಳು ತಮಗಾಗಿ ದೇವಾಲಯ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದರು. ಉತ್ತರಾಖಂಡ್ನಲ್ಲಿ ನನ್ನ ಹೆಸರಿನಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ನನ್ನ ಮೂರ್ತಿಯನ್ನು ದೇವರಾಗಿ ಇರಿಸಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ, ಪ್ರತಿದಿನ ಸಾವಿರಾರು ಮಂದಿ ಭಕ್ತಾದಿಗಳು ಅಲ್ಲಿಗೆ ಭೇಟಿ ನೀಡುತ್ತಾರೆ, ನನ್ನ ಮೂರ್ತಿಗೆ ಮಾಲೆ ಹಾಕಿ ಪೂಜೆ ಮಾಡುತ್ತಾರೆ ಎಂದೆಲ್ಲ ಹೇಳಿಕೊಂಡಿದ್ದರು.
ಅಸಲಿಗೆ ಉತ್ತರಾಖಂಡ್ ನಲ್ಲಿ ಬದ್ರಿನಾಥ ಧಾಮದ ಬಳಿ ಊರ್ವಶಿ ದೇವಾಲಯ ಇದೆ ಆದರೆ ಅದು ಮಾತೆ ಊರ್ವಶಿಯ ದೇವಾಲಯ. ಆ ದೇವಾಲಯಕ್ಕೆ ಸಾವಿರಾರು ವರ್ಷಗಳ ಐತಿಹ್ಯ ಇದೆ. ದೇವರ ದೇವಾಲಯವನ್ನು ತನ್ನ ದೇವಾಲಯ ಎಂದು ಊರ್ವಶಿ ರೌಟೆಲಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದು ಊರ್ವಶಿ ದೇವಾಲಯದ ಆರಾಧಕರ ಸಿಟ್ಟಿಗೆ ಕಾರಣವಾಗಿದೆ.
ಇದನ್ನೂ ಓದಿ:ದೆಹಲಿಯಲ್ಲಿ ಊರ್ವಶಿ ರೌಟೆಲಾ ಹವಾ ನೋಡಿ….
ಊರ್ವಶಿ ದೇವಾಲಯ ಪೂಜಾರಿ ಭುವನ್ ಚಂದ್ರ ಉನಿಯಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ನಟಿ ಊರ್ವಶಿ ರೌಟೆಲಾಗೂ ಊರ್ವಶಿ ದೇವಾಲಯಕ್ಕೂ ಯಾವುದೇ ಸಂಬಂಧ ಇಲ್ಲ. ಈ ದೇವಾಲಯ ಮಾತೆಯ ಸತಿಯ ಅಂಶ. 108 ಶಕ್ತಿದೇವತೆಗಳ ದೇವಾಲಯಗಳಲ್ಲಿ ಇದೂ ಸಹ ಒಂದಾಗಿದೆ. ಸ್ಥಳೀಯ ಹಲವು ಹಳ್ಳಿ, ನಗರಗಳಲ್ಲಿ ಈ ದೇವಿಯ ಆರಾಧಾಕರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ ಎಂದು ಭುವನ್ ಚಂದ್ರ ಹೇಳಿದ್ದಾರೆ.
ನಟಿ ಊರ್ವಶಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ‘ಇದು ಆ ನಟಿಯ ದೇವಾಲಯ ಅಲ್ಲ. ಪವಿತ್ರಾ ದೇವಾಲಯದ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಇಂಥಹಾ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರು ಸಹ ರೌಟೆಲಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:47 am, Sat, 19 April 25