‘ದಿ ಕೇರಳ ಸ್ಟೋರಿ’ ನಿರ್ಮಾಪಕ, ನಿರ್ದೇಶಕನ ನಡುವೆಯೇ ಶುರುವಾಯ್ತು ಜಗಳ

ವಿಪುಲ್ ಅಮೃತ್​ಲಾಲ್ ಶಾ ಹಾಗೂ ನಿರ್ದೇಶಕ ಸುದೀಪ್ತೋ ಸೇನ್ ನಡುವೆ ಕಿರಿಕ್ ಶುರುವಾಗಿದೆ. ‘ದಿ ಕೇರಳ ಸ್ಟೋರಿ 2’ ಸಿನಿಮಾದ ಕಥಾವಸ್ತು ಬಗ್ಗೆ ಸುದೀಪ್ತೋ ಸೇನ್ ತಕರಾರು ತೆಗೆದಿದ್ದಾರೆ. ಅವರ ವಿರುದ್ಧ ವಿಪುಲ್ ಅಮೃತ್​ಲಾಲ್ ಶಾ ಅವರು ಗುಡುಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ದಿ ಕೇರಳ ಸ್ಟೋರಿ’ ನಿರ್ಮಾಪಕ, ನಿರ್ದೇಶಕನ ನಡುವೆಯೇ ಶುರುವಾಯ್ತು ಜಗಳ
Vipul Amrutlal Shah, Sudipto Sen

Updated on: Mar 05, 2026 | 6:22 PM

2023ರಲ್ಲಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾಗೆ ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದರು. ವಿಪುಲ್ ಅಮೃತ್​ಲಾಲ್ ಶಾ (Vipul Amrutlal Shah) ಅವರು ಬಂಡವಾಳ ಹೂಡಿದ್ದರು. ಆದರೆ ‘ದಿ ಕೇರಳ ಸ್ಟೋರಿ 2’ ಸಿನಿಮಾದಿಂದ ಸುದೀಪ್ತೋ ಸೇನ್ ಅವರು ಹೊರಗೆ ಉಳಿದರು. ಅವರ ಬದಲು ಕಾಮ್ಯಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದರು. ಈಗ ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ ಮತ್ತು ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ನಡುವೆ ಜಗಳ ಶುರುವಾಗಿದೆ.

ಸುದೀಪ್ತೋ ಸೇನ್ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಗ್ಗೆ ಕೆಲವು ದಿನಗಳ ಹಿಂದೆ ತಕರಾರು ತೆಗೆದಿದ್ದರು. ವಾಟ್ಸಪ್ ಸಂದೇಶಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ ಎಂದು ಅವರು ಆರೋಪ ಮಾಡಿದ್ದರು. ಅದಕ್ಕೆ ಈಗ ವಿಪುಲ್ ಅಮೃತ್​ಲಾಲ್ ಶಾ ಅವರು ತಿರುಗೇಟು ನೀಡಿದ್ದಾರೆ. ‘ಸುದೀಪ್ತೋ ಸೇನ್ ಅವರ ಸ್ಕ್ರಿಪ್ಟ್ ಕಸದ ಬುಟ್ಟಿಗೆ ಸೇರುವಂತಿತ್ತು’ ವಿಪುಲ್ ಅಮೃತ್​ಲಾಲ್ ಶಾ ವಾಗ್ದಾಳಿ ಮಾಡಿದ್ದಾರೆ.

‘ಅವರ ಪರಿಸ್ಥಿತಿ ನೋಡಿದರೆ ದ್ರಾಕ್ಷಿ ಹಣ್ಣು ಹುಳಿ ಎಂಬಂತಿದೆ. ನಿಜ ಹೇಳಬೇಕೆಂದರೆ, ಸುದೀಪ್ತೋ ಅವರು ದಿ ಕೇರಳ ಸ್ಟೋರಿ 2ಗಾಗಿ ಒಂದು ಸ್ಕ್ರಿಪ್ಟ್ ಬರೆದುಕೊಟ್ಟಿದ್ದರು. ಆದರೆ ಅದು ಸಂಪೂರ್ಣವಾಗಿ ಕಸದ ಬುಟ್ಟಿಗೆ ಸೇರುವಂತಿತ್ತು. ಹಾಗಾಗಿಯೇ ನಾನು ಹೊಸ ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್ ಅವರ ಜೊತೆ ಸೀಕ್ವೆಲ್ ಮಾಡಲು ನಿರ್ಧರಿಸಿದೆ’ ಎಂದು ವಿಪುಲ್ ಹೇಳಿದ್ದಾರೆ.

‘ನಾವು ಎಂತಹ ಸಂಶೋಧನೆ ನಡೆಸಿದ್ದೇವೆ ಎಂಬುದು ಅವರಿಗೆ ತಿಳಿದೇ ಇಲ್ಲ. ಸಂಶೋಧನಾ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಿರಲಿಲ್ಲ. ಹಾಗಿರುವಾಗ ಟೀಕೆ ಮಾಡುವುದು ಎಷ್ಟು ಸರಿ? ನನ್ನ ಸಿನಿಮಾ ಮೇಲೆ ದಾಳಿಯಾದಾಗ ನಾನು ಸುಮ್ಮನಿರಲು ಸಾಧ್ಯವಿಲ್ಲ. ಅವರ ಹೇಳಿಕೆಗಳು ಆಧಾರರಹಿತವಾಗಿವೆ’ ಎಂದು ವಿಪುಲ್ ಅಮೃತ್​ಲಾಲ್ ಶಾ ಅವರು ಗುಡುಗಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾದ ಶೀರ್ಷಿಕೆ ಬಗ್ಗೆ ತಕರಾರು; ರಾಜ್ಯದ ಹೆಸರು ಕೈಬಿಡಲು ಆಗ್ರಹ

ಸುದೀಪ್ತೋ ಸೇನ್ ಹೇಳಿದ್ದಿಷ್ಟು..
ಮೊದಲ ಭಾಗಕ್ಕೆ 10 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾಗಿ ಹೇಳುವ ಸುದೀಪ್ತೋ ಸೇನ್ ಅವರು, ‘ಸೀಕ್ವೆಲ್ ಎನ್ನುವುದು ಸೂಕ್ಷ್ಮ ವಿಷಯ. ಕೇರಳದಿಂದ ಹೊರಗಿನ ರಾಜ್ಯಗಳ ಕಥೆಯನ್ನು ಹೇಳುವಾಗ ಆಳವಾದ ಅಧ್ಯಯನ ಬೇಕು. ಕೇವಲ ವಾಟ್ಸಾಪ್ ಸಂದೇಶಗಳು ಅಥವಾ ಪತ್ರಿಕಾ ವರದಿಗಳನ್ನು ನಂಬಿ ಸಿನಿಮಾ ಮಾಡಲು ನಾನು ತಯಾರಿಲ್ಲ. ಜವಾಬ್ದಾರಿಯುತ ನಿರ್ದೇಶಕನಾಗಿ ನಾನು ಅಂತಹ ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us