ಧುರಂಧರ್ 2: ಪ್ರೊಪಗಾಂಡ ಸಿನಿಮಾಗಳ ವಿರುದ್ಧ ನಿರ್ದೇಶಕ ವೆಟ್ರಿಮಾರನ್ ಕಿಡಿ; ವಿಡಿಯೋ ವೈರಲ್

‘ಧುರಂಧರ್ 2’ ಸಿನಿಮಾವನ್ನು ಅನೇಕ ಸೆಲೆಬ್ರಿಟಿಗಳು ಹೊಗಳುತ್ತಿದ್ದಾರೆ. ಆದರೆ ಕೆಲವರು ವಿರೋಧಿಸಿದ್ದಾರೆ. ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ಪರೋಕ್ಷವಾಗಿ ಈ ಸಿನಿಮಾವನ್ನು ಟೀಕಿಸಿ ಮಾತನಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ. ವೆಟ್ರಿಮಾರನ್ ಅವರ ಈ ಹೇಳಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.

ಧುರಂಧರ್ 2: ಪ್ರೊಪಗಾಂಡ ಸಿನಿಮಾಗಳ ವಿರುದ್ಧ ನಿರ್ದೇಶಕ ವೆಟ್ರಿಮಾರನ್ ಕಿಡಿ; ವಿಡಿಯೋ ವೈರಲ್
Vetrimaaran
Image Credit source: Thi Cinemas

Updated on: Mar 29, 2026 | 9:13 AM

ಶ್ರೀಲಂಕಾ ನಾಗರಿಕ ಯುದ್ಧದ ಕಹಿ ಘಟನೆಗಳನ್ನಾಧರಿಸಿದ ‘ನೀಲಿರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ತಮಿಳು ನಿರ್ದೇಶಕ ವೆಟ್ರಿಮಾರನ್ ಪಾಲ್ಗೊಂಡಿದ್ದರು. ಈ ವೇಳೆ ಅವರು ಸಿನಿಮಾರಂಗದಲ್ಲಿ ಹೆಚ್ಚುತ್ತಿರುವ ಪ್ರೊಪಗಾಂಡ (Propaganda) ಮತ್ತು ದ್ವೇಷ ಬಿತ್ತುವ ಚಿತ್ರಗಳ ಬಗ್ಗೆ ನೇರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವೆಟ್ರಿಮಾರನ್ (Vetrimaaran) ಅವರ ಈ ಮಾತುಗಳು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಅವರ ‘ಧುರಂಧರ್ 2’ (Dhurandhar 2) ಚಿತ್ರವನ್ನೇ ಗುರಿಯಾಗಿಸಿಕೊಂಡು ಅವರು ಟೀಕಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.

ವೇದಿಕೆಯ ಮೇಲೆ ಮಾತನಾಡಿದ ವೆಟ್ರಿಮಾರನ್, ‘ನಮ್ಮ ಕಥೆಗಳನ್ನು ನಾವೇ ಹೇಳುವವರೆಗೆ, ನಮ್ಮ ಜೀವನ ಎಂತಹುದು ಎಂಬುದನ್ನು ನಮ್ಮ ಶತ್ರುಗಳೇ ನಿರ್ಧರಿಸುತ್ತಾರೆ. ನಮ್ಮ ಕಥೆಗಳನ್ನು ಮುಕ್ತವಾಗಿ ಹೇಳುವ ಪ್ರಜಾಪ್ರಭುತ್ವದ ಹಕ್ಕು ನಮಗಿಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಸಂಕಷ್ಟದ ನಡುವೆಯೂ ಶ್ರೀಲಂಕಾದ ಕಥೆಯನ್ನು ಆಯ್ಕೆ ಮಾಡಿಕೊಂಡ ‘ನೀಲಿರ’ ಚಿತ್ರತಂಡವನ್ನು ಅವರು ಶ್ಲಾಘಿಸಿದರು. ಅಲ್ಲದೆ, ತೆಲುಗು ರಾಜ್ಯದವರಾಗಿದ್ದರೂ ಇಂತಹ ಕಥೆಗೆ ಬೆನ್ನೆಲುಬಾಗಿ ನಿಂತ ನಟ ರಾಣಾ ದಗ್ಗುಬಾಟಿ ಅವರ ಬೆಂಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಇತ್ತೀಚಿನ ಕೆಲವು ಸಿನಿಮಾಗಳ ಬಗ್ಗೆ ಮಾತನಾಡಿದ ಅವರು, ‘ಇಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಕೇವಲ ದ್ವೇಷ ಅಥವಾ ಹಿಂಸೆಯನ್ನು ಮಾರಾಟ ಮಾಡುವ ಮೂಲಕ ನೂರಾರು ಕೋಟಿ ಗಳಿಸುವ ಉದ್ದೇಶದ ಚಿತ್ರಗಳು ಬರುತ್ತಿವೆ. ಆದರೆ ನೀಲಿರ ಚಿತ್ರವು ಯಾವುದೇ ಧರ್ಮ, ಸಮುದಾಯ ಅಥವಾ ಜನಾಂಗವನ್ನು ಕೆಟ್ಟದಾಗಿ ಚಿತ್ರಿಸುವುದಿಲ್ಲ’ ಎಂದರು.

ಮುಖ್ಯವಾಗಿ, ನೋಟ್ ಬ್ಯಾನ್ ಬಗ್ಗೆ ವೆಟ್ರಿಮಾರನ್ ಅವರು ನೀಡಿದ ಹೇಳಿಕೆಯಿಂದ ಈ ವಿಡಿಯೋ ವೈರಲ್ ಆಗಿದೆ. ‘ನೋಟ್ ಬ್ಯಾನ್ ಸಮಯದಲ್ಲಿ ಯಾರು ಹೆಚ್ಚು ತೊಂದರೆ ಅನುಭವಿಸಿದರು ಮತ್ತು ಕ್ಯೂನಲ್ಲಿ ನಿಂತು ಎಷ್ಟು ಜೀವಗಳು ಹೋದವು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಇಂದು ಸಿನಿಮಾಗಳ ಮೂಲಕ ಆ ನೆನಪನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.

ಇದನ್ನೂ ಓದಿ: ‘ಧುರಂಧರ್’ ನಿರ್ಮಾಪಕರ ಜೊತೆ ಕೈ ಜೋಡಿಸಿದ ರಾಮ್ ಚರಣ್; ಸಿಕ್ತು ದೊಡ್ಡ ಸುದ್ದಿ

ಭಯೋತ್ಪಾದನೆಯನ್ನು ತಡೆಯಲು ಮತ್ತು ನಕಲಿ ನೋಟು ಹಾವಳಿಯನ್ನು ನಿಲ್ಲಿಸಲು ನೋಟ್ ಬ್ಯಾನ್ ಮಾಡಲಾಯಿತು ಎಂಬಂತೆ ‘ಧುರಂಧರ್ 2’ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವೆಟ್ರಿಮಾರನ್ ಅವರ ಮಾತುಗಳು ನೇರವಾಗಿ ಈ ಚಿತ್ರಕ್ಕೇ ಅನ್ವಯಿಸುತ್ತವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:11 am, Sun, 29 March 26

Follow Us