ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ್’ ಸಿನಿಮಾದ ಪಾತ್ರಗಳು: ಫೋಟೋ ವೈರಲ್
‘ಧುರಂಧರ್ 2’ ಸಿನಿಮಾದ ಕ್ರೇಜ್ ಈಗ ಚಿತ್ರಮಂದಿರಕ್ಕೆ ಮಾತ್ರ ಸೀಮಿತವಾಗಿಲ್ಲ, ಶಾಲಾ-ಕಾಲೇಜಿಗೂ ಬಂದಿದೆ. ಅಕೌಂಟ್ಸ್ ಪ್ರಶ್ನೆ ಪತ್ರಿಕೆಯ ಒಂದು ಫೋಟೋ ವೈರಲ್ ಆಗಿದ್ದು, ಅದನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಈ ಪ್ರಶ್ನೆ ಪತ್ರಿಕೆಯಲ್ಲಿ ‘ಧುರಂಧರ್’ ಸಿನಿಮಾದ ಕೆಲವು ಪ್ರಮುಖ ಪಾತ್ರಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ಸುನಾಮಿ ಎಬ್ಬಿಸಿದೆ. ಚಿತ್ರಮಂದಿರಗಳಲ್ಲಿ ದಾಖಲೆ ಬರೆಯುತ್ತಿರುವ ಈ ಸಿನಿಮಾ ಈಗ ಅನಿರೀಕ್ಷಿತ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಶ್ನೆ ಪತ್ರಿಕೆಯಲ್ಲಿ ಕೂಡ ‘ಧುರಂಧರ್’ ಸಿನಿಮಾದ ಪಾತ್ರಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ! ಇದಕ್ಕೆ ಸಂಬಂಧಿಸಿದ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಶ್ನೆ ಪತ್ರಿಕೆಯನ್ನು (Accounts Question Paper) ನೋಡಿದ ನೆಟ್ಟಿಗರು ಹತ್ತಾರು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಅಕೌಂಟ್ಸ್ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಶಿಕ್ಷಕರು ಸಿನಿಮಾದ ಪಾತ್ರಗಳನ್ನು ಬಳಸಿ ಲೆಕ್ಕದ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದಾರೆ. ಇದನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, ‘ಧುರಂಧರ್ ಎಷ್ಟು ವೈರಲ್ ಆಗಿದೆ ಎಂದರೆ, ಅಕೌಂಟ್ಸ್ ಸರ್ ಕೂಡ ಈ ಸಿನಿಮಾದ ಫ್ಯಾನ್ ಆಗಿದ್ದಾರೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಸಾಮಾನ್ಯವಾಗಿ ಅಕೌಂಟ್ಸ್ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಸ್ವಲ್ಪ ಒಣ ವಿಷಯ ಎನಿಸುವುದು ಸಹಜ. ಆದರೆ ಇಲ್ಲಿ ಶಿಕ್ಷಕರು ಸಿನಿಮಾದ ಪಾತ್ರಗಳಾದ ಹಮ್ಜಾ ಅಲಿ ಮಜಾರಿ, ರೆಹಮಾನ್ ಡಕಾಯತ್ ಮತ್ತು ಉಜೈರ್ ಬಲೋಚ್ ಅವರ ಹೆಸರುಗಳನ್ನು ಪ್ರಶ್ನೆಗಳಲ್ಲಿ ಬಳಸಿದ್ದಾರೆ. ಒಂದು ಪ್ರಶ್ನೆಯಲ್ಲಿ ‘ರೆಹಮಾನ್ 2025ರ ಡಿಸೆಂಬರ್ 5ರಂದು ನಿಧನರಾದರು’ ಎಂದು ಉಲ್ಲೇಖಿಸಿ ಅದರ ಆಧಾರದ ಮೇಲೆ ಲೆಕ್ಕ ಮಾಡಲು ಹೇಳಲಾಗಿದೆ. ಶಿಕ್ಷಕರ ಈ ಕ್ರಿಯೇಟಿವ್ ಐಡಿಯಾಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಮಾರ್ಚ್ 19ರಂದು ತೆರೆಕಂಡ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಅನೇಕ ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ.
ಇದನ್ನೂ ಓದಿ: ‘ಧುರಂಧರ್’ ಸಿನಿಮಾದಲ್ಲಿನ ಹಲವು ತಪ್ಪುಗಳ ಪಟ್ಟಿ ನೀಡಿದ ಪಾಕಿಸ್ತಾನಿ ಪ್ರೇಕ್ಷಕರು
ಕೇವಲ 7 ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ಅಂದಾಜು 1 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಸಿನಿಮಾದ ಚಿತ್ರಕಥೆ ಮತ್ತು ಭರ್ಜರಿ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟ ಆಗಿವೆ. ಶಾಲಾ-ಕಾಲೇಜಿನ ಪರೀಕ್ಷೆಯಲ್ಲೂ ಈ ಸಿನಿಮಾದ ಪಾತ್ರಗಳು ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಜನಪ್ರಿಯತೆ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




