ಮೂರು ದಿನಗಳ ಹಿಂದಷ್ಟೆ (ಮಾರ್ಚ್ 09) ಬಾಲಿವುಡ್ನ (Bollywood) ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಸತೀಶ್ ಕೌಶಿಕ್ (Satish Kaushik) ನಿಧನ ಹೊಂದಿದ್ದರು. ಹೃದಯಾಘಾತ ಇವರ ನಿಧನಕ್ಕೆ ಕಾರಣ ಎನ್ನಲಾಗಿತ್ತು. ಆದರೆ ದೆಹಲಿಯ ಉದ್ಯಮಿಯೊಬ್ಬರ ಪತ್ನಿ ಇದೀಗ ಸತೀಶ್ ಕೌಶಿಕ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ನನ್ನ ಪತಿಯೇ ಸತೀಶ್ಗೆ ವಿಷ ಉಣಿಸಿ ಕೊಂದಿದ್ದಾರೆ ಎಂದಿದ್ದಾರೆ.
ನಿಧನಕ್ಕೂ ಮುನ್ನ ಸತೀಶ್, ದೆಹಲಿಯ ಜನಪ್ರಿಯ ಉದ್ಯಮಿ ವಿಕಾಸ್ ಮಾಲು ಅವರ ಫಾರ್ಮ್ ಹೌಸ್ನಲ್ಲಿ ನಡೆದ ಹೋಳಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಇದೀಗ ವಿಕಾಸ್ ಮಾಲು ಅವರ ಎರಡನೇ ಪತ್ನಿ ಸಾನ್ವಿ ಮಾಲು ಆರೋಪ ಮಾಡಿದ್ದು, ಹದಿನೈದು ಕೋಟಿ ಹಣದ ಆಸೆಗೆ ಸತೀಶ್ ಕೌಶಿಕ್ಗೆ ವಿಕಾಸ್ ಮಾಲು ವಿಷ ಉಣಿಸಿದ್ದಾರೆ ಎಂದಿದ್ದಾರೆ. ಮಾತ್ರವಲ್ಲ ಈ ಕುರಿತು ದೆಹಲಿ ಪೊಲೀಸರಿಗೆ ಲಿಖಿತ ದೂರು ಸಹ ಸಲ್ಲಿಸಿದ್ದಾರೆ.
ದೂರಿನ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ವಿಕಾಸ್ ಮಾಲು ಪತ್ನಿ ಸಾನ್ವಿ, ”ಸತೀಶ್ ಕೌಶಿಕ್, ಫಾರ್ಮ್ಹೌಸ್ಗೆ ಬಂದ ಕೆಲ ಹೊತ್ತಿನಲ್ಲಿಯೇ ಅವರ ಆರೋಗ್ಯದಲ್ಲಿ ವ್ಯತ್ಯ ಕಂಡು ಬಂದಿತು. ಅಲ್ಲದೆ ಫಾರ್ಮ್ ಹೌಸ್ನಲ್ಲಿ ಕೆಲವು ಔಷಧಿಗಳು ಸಹ ನನ್ನ ಕಣ್ಣಿಗೆ ಬಿದ್ದವು ಆಗಲೇ ನನಗೆ ಅನುಮಾನ ಬಂತು. ತಮ್ಮ ಪತಿ ವಿಕಾಸ್ ಹಾಗೂ ಸತೀಶ್ ಕೌಶಿಕ್ ನಡುವೆ ಹಣದ ವ್ಯವಹಾರವಿತ್ತು ಇದೇ ಕಾರಣಕ್ಕೆ ನನ್ನ ಪತಿಯೇ ಸತೀಶ್ ಅವರನ್ನು ಕೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ಉದ್ಯಮಿ ವಿಕಾಸ್ ಮಾಲು, ಸತೀಶ್ ಕೌಶಿಕ್ ಬಳಿ 15 ಕೋಟಿ ಸಾಲ ಪಡೆದುಕೊಂಡಿದ್ದರು. ಆದರೆ ಕೋವಿಡ್ ಸಮಯದಲ್ಲಾದ ನಷ್ಟದಿಂದಾಗಿ ಆ ಹಣ ಮುಳುಗಿ ಹೋಯಿತು. ಹಣ ಮರಳಿಸುವಂತೆ ನಾನೂ ಸಹ ವಿಕಾಸ್ಗೆ ಪದೇ-ಪದೇ ಹೇಳುತ್ತಿದ್ದೆ ಈ ಬಗ್ಗೆ ಜಗಳ ಸಹ ಮಾಡಿದ್ದೆ ಆದರೆ ವಿಕಾಸ್ ಹಣ ಮರಳಿ ನೀಡಬೇಕಾಗುತ್ತದೆ ಎಂದು ಸತೀಶ್ ಕೌಶಿಕ್ ಅನ್ನು ಕೊಂದಿದ್ದಾರೆ ಎಂದಿದ್ದಾರೆ ಸಾನ್ವಿ ಮಾಲು.
ಎರಡನೇ ಪತ್ನಿ ಸಾನ್ವಿ ಹೇಳಿಕೆ ಹೊರ ಬೀಳುತ್ತಲೇ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಸಮೇತ ಪೋಸ್ಟ್ ಒಂದನ್ನು ಉದ್ಯಮಿ ವಿಕಾಸ್ ಹಂಚಿಕೊಂಡಿದ್ದು, ಸತೀಶ್ ಅವರು ಕಳೆದ 30 ವರ್ಷದಿಂದಲೂ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ. ಆದರೆ ಅವರು ಹೋದ ಕೆಲವೇ ಗಂಟೆಗಳಲ್ಲಿ ನನ್ನ ಹೆಸರನ್ನು ಕೆಟ್ಟ ರೀತಿಯಲ್ಲಿ ಕೆಲವರು ಬಳಸುತ್ತಿದ್ದಾರೆ ಎಂದಿದ್ದಾರೆ.
”ಘಟನೆ ಬಗ್ಗೆ ನಾನು ಮೌನ ಮುರಿಯಬೇಕಾಗಿದೆ. ಯಾವುದೇ ದುರಂತ ಅನಿರೀಕ್ಷಿತವಾಗಿ ಆಗುತ್ತದೆ ದುರಂತವನ್ನು ಯಾರು ನಿಯಂತ್ರಿಸಲು ಆಗುವುದಿಲ್ಲ. ಇಂಥಹಾ ಸಮಯದಲ್ಲಿ ಮಾಧ್ಯಮಗಳು ಎಲ್ಲರ ಭಾವನೆಗಳಿಗೂ ಗೌರವ ನೀಡುವ ಕಾರ್ಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ” ಎಂದು ವಿಕಾಸ್ ಬರೆದುಕೊಂಡಿದ್ದಾರೆ. ವಿಕಾಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಸತೀಶ್ ಕೌಶಿಕ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರು ಸಾಯುವ ಕೆಲವೇ ಗಂಟೆಗಳ ಮುಂಚಿನ ವಿಡಿಯೋ ಇದಾಗಿತ್ತು ಎನ್ನಲಾಗಿದೆ.