ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ (Oscar Awards) ಪಡೆಯಲು ಭಾರತದ ‘12th ಫೇಲ್’ ಸಿನಿಮಾ ಪ್ರಯತ್ನಿಸುತ್ತಿದೆ. ಹಿಂದಿ, ಕನ್ನಡ ಮುಂತಾದ ಭಾಷೆಗಳಲ್ಲಿ ಇತ್ತೀಚೆಗೆ ಬಿಡುಗಡೆ ಆದ ಈ ಸಿನಿಮಾವನ್ನು ಆಸ್ಕರ್ ಸ್ಪರ್ಧೆಗೆ ಕಳಿಸಲಾಗಿದೆ ಎಂದು ಚಿತ್ರದ ನಾಯಕ ನಟ ವಿಕ್ರಾಂತ್ ಮಾಸ್ಸಿ (Vikrant Massey) ಹೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ಅವರು ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಚಿತ್ರತಂಡವೇ ಸ್ವತಂತ್ರವಾಗಿ ನಾಮಿನೇಷನ್ ಸಲ್ಲಿಸಿದೆ. 2024ರಲ್ಲಿ ‘12th ಫೇಲ್’ (12 Fail) ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲಿದೆಯೇ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾಗೆ ವಿಧು ವಿನೋದ್ ಚೋಪ್ರಾ ಅವರು ನಿರ್ದೇಶನ ಮಾಡಿದ್ದಾರೆ.
‘ಸಾಹಿತ್ಯ ಆಜ್ತಕ್ 2023’ ಕಾರ್ಯಕ್ರಮದಲ್ಲಿ ವಿಕ್ರಾಂತ್ ಮಾಸ್ಸಿ ಅವರು ಮಾತನಾಡುತ್ತಿದ್ದರು. ಈ ವೇಳೆ ಅವರು ಆಸ್ಕರ್ ಪ್ರಶಸ್ತಿ ಬಗ್ಗೆ ಮಾಹಿತಿ ಹಂಚಿಕೊಂಡರು. ಭಾರತೀಯರು ಕೂಡ ಆಸ್ಕರ್ ಪ್ರಶಸ್ತಿ ಗೆಲ್ಲಬಹುದು ಎಂಬುದಕ್ಕೆ ‘ಆರ್ಆರ್ಆರ್’ ಸಿನಿಮಾವೇ ಸಾಕ್ಷಿ. 2023ರಲ್ಲಿ ಈ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಅವಾರ್ಡ್ ಪಡೆದುಕೊಂಡಿತು. ಆ ಚಿತ್ರ ಕೂಡ ಸ್ವತಂತ್ರವಾಗಿ ನಾಮಿನೇಟ್ ಆಗಿತ್ತು. ಈಗ ಇದೇ ಪ್ರಯತ್ನದಲ್ಲಿ ‘12th ಫೇಲ್’ ಸಿನಿಮಾ ಕೂಡ ಇದೆ. ಭಾರತದಿಂದ ಅಧಿಕೃತವಾಗಿ ಮಲಯಾಳಂನ ‘2018’ ಚಿತ್ರ ಆಸ್ಕರ್ ಸ್ಪರ್ಧೆಗೆ ಈಗಾಗಲೇ ಆಯ್ಕೆ ಆಗಿದೆ.
ಇದನ್ನೂ ಓದಿ: ‘ಆಸ್ಕರ್’ ಮೂಲಕ ‘ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೆ ವಿಶೇಷ ಗೌರವ; ವಿವೇಕ್ ಅಗ್ನಿಹೋತ್ರಿ ಗುಡ್ ನ್ಯೂಸ್
ಅನುರಾಗ್ ಪಾಠಕ್ ಅವರು ಬರೆದ ಕಾದಂಬರಿಯನ್ನು ಆಧರಿಸಿ ‘12th ಫೇಲ್’ ಸಿನಿಮಾ ತಯಾರಾಗಿದೆ. ಹಲವು ಅಡೆತಡೆಗಳನ್ನು ಮೀರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನು ಆಧರಿಸಿ ಈ ಚಿತ್ರ ಮೂಡಿಬಂದಿದೆ. ಮನೋಜ್ ಕುಮಾರ್ ಶರ್ಮಾ ಅವರ ಪಾತ್ರಕ್ಕೆ ವಿಕ್ರಾಂತ್ ಮಾಸ್ಸಿ ಬಣ್ಣ ಹಚ್ಚಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೇಧಾ ಶಂಕರ್ ಅವರು ‘12th ಫೇಲ್’ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ: ‘ಜವಾನ್’ ಚಿತ್ರ ಆಸ್ಕರ್ಗೆ ಹೋಗಬೇಕು ಎಂದ ನಿರ್ದೇಶಕ ಅಟ್ಲಿ; ಟ್ರೋಲ್ ಮಾಡಿದ ನೆಟ್ಟಿಗರು
ಅಕ್ಟೋಬರ್ 27ರಂದು ‘12th ಫೇಲ್’ ಚಿತ್ರ ಬಿಡುಗಡೆ ಆಯಿತು. ಹಿಂದಿಯಲ್ಲಿ ನಿರ್ಮಾಣ ಆದ ಈ ಸಿನಿಮಾವನ್ನು ಕನ್ನಡಕ್ಕೂ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ನಿರ್ದೇಶಕ ರೋಹಿತ್ ಪದಕಿ ಅವರ ಸಾರಥ್ಯದಲ್ಲಿ ಕನ್ನಡದ ಡಬ್ಬಿಂಗ್ ಕೆಲಸ ನಡೆಯಿತು. ‘ಕೆಆರ್ಜಿ ಸ್ಟುಡಿಯೋಸ್’ ಮೂಲಕ ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಯಿತು. ವಿಧು ವಿನೋದ್ ಚೋಪ್ರಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.