‘ಧರ್ಮದ ಬಗೆಗಿನ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ಪರ್ವ ಸಿನಿಮಾ’: ವಿವೇಕ್​ ಅಗ್ನಿಹೋತ್ರಿ

|

Updated on: Oct 21, 2023 | 12:41 PM

‘ನಾನು ಸಾಯೋದಕ್ಕೂ ಮುನ್ನ ಪರ್ವ ಸಿನಿಮಾ ಮಾಡಬೇಕು. ಮಹಾಭಾರತದ ಎಂದರೆ ಅದು ಭಾರತದ ಸಾಕ್ಷಿಪ್ರಜ್ಞೆ. ಭೈರಪ್ಪ ಸಾಕಷ್ಟು ಅಧ್ಯಯನ ನಡೆಸಿ ಈ ಕೃತಿ ರಚಿಸಿದ್ದಾರೆ. ಈ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕಿದ್ದಕ್ಕೆ ಹಾಗೂ ಭೈರಪ್ಪ ಅವರು ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕೆ ಶ್ರೀಕೃಷ್ಣನಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

‘ಧರ್ಮದ ಬಗೆಗಿನ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ಪರ್ವ ಸಿನಿಮಾ’: ವಿವೇಕ್​ ಅಗ್ನಿಹೋತ್ರಿ
ವಿವೇಕ್​ ಅಗ್ನಿಹೋತ್ರಿ, ಎಸ್​.ಎಲ್​. ಭೈರಪ್ಪ
Follow us on

‘ಪರ್ವ’ ಚಿತ್ರದ (Parva Movie) ಟೈಟಲ್​ ಲಾಂಚ್​ ವೇಳೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಮಾತನಾಡಿದ್ದಾರೆ. ‘ಒಂದು ವರ್ಷದ ಹಿಂದೆ ಪ್ರಕಾಶ್​ ಬೆಳವಾಡಿ (Prakash Belawadi) ಅವರು ನನಗೆ ಕರೆ ಮಾಡಿದ್ದರು. ಎಸ್​ಎಲ್​ ಭೈರಪ್ಪ ಅವರ ಬಳಿ ಮಾತನಾಡಿ ಎಂದು ನನಗೆ ಅವರು ಸೂಚಿಸಿದರು. ಅದಕ್ಕೂ ಮುನ್ನ ಮಂಗಳೂರಿನಲ್ಲಿ ಭೈರಪ್ಪ ಅವರ ಸಂದರ್ಶನವನ್ನು ನಾನು ಮಾಡಿದ್ದೆ. ಅವರ ಆಲೋಚನೆಗಳಿಗೆ ನಾನು ಬೆರಗಾಗಿದ್ದೆ. ನನ್ನ ಚಿಂತೆನೆಗಳು ಕೂಡ ಅವರ ರೀತಿ ಇದೆ ಅನಿಸಿತು. ಅಲ್ಲಿಂದ ನಾನು ಅವರ ಜೊತೆ ಸಂಪರ್ಕ ಬೆಳೆಸಿಕೊಂಡೆ. ನನ್ನ ತಂದೆ ಕೂಡ ಲೇಖಕ ಆಗಿದ್ದರು. ಭೈರಪ್ಪ ಅವರು ನನ್ನ ಕಾಶ್ಮೀರ್​ ಫೈಲ್ಸ್​ ಸಿನಿಮಾವನ್ನು ನೋಡಿದ್ದರು. ತಮ್ಮ ಪರ್ವ ಕೃತಿಗೆ ಸಿನಿಮಾ ರೂಪದಲ್ಲಿ ನಾವು ನ್ಯಾಯ ಒದಗಿಸಬಹುದು ಅಂತ ಅವರಿಗೆ ಅನಿಸಿತು. ಅಲ್ಲಿಂದ ಚರ್ಚೆ ಶುರುವಾಯಿತು’ ಎಂದಿದ್ದಾರೆ ವಿವೇಕ್​ ಅಗ್ನಿಹೋತ್ರಿ.

‘ನಾನು ಸಾಯೋದಕ್ಕೂ ಮುನ್ನ ‘ಪರ್ವ’ ಸಿನಿಮಾ ಮಾಡಬೇಕು. ಮಹಾಭಾರತದ ಎಂದರೆ ಅದು ಭಾರತದ ಸಾಕ್ಷಿಪ್ರಜ್ಞೆ. ಭೈರಪ್ಪ ಅವರು ಸಾಕಷ್ಟು ಅಧ್ಯಯನ ನಡೆಸಿ ಈ ಕೃತಿ ಬರೆದಿದ್ದಾರೆ. ಈ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದಕ್ಕೆ ಹಾಗೂ ಭೈರಪ್ಪ ಅವರು ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕೆ ಶ್ರೀಕೃಷ್ಣನಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನೂರಾರು ವರ್ಷಗಳ ಕಾಲ ಧರ್ಮದ ಬಗ್ಗೆ ಯಾರಿಗೆ ಯಾವುದೇ ಪ್ರಶ್ನೆ ಇದ್ದರೂ ಕೂಡ ಮೂರು ಭಾಗಗಳಲ್ಲಿ ಮೂಡಿಬರುವ ಈ ಸಿನಿಮಾ ಉತ್ತರ ನೀಡುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

ಇದನ್ನೂ ಓದಿ: Parva: ‘ಪರ್ವ’ ಕಾದಂಬರಿ ಆಧರಿಸಿ ವಿವೇಕ್​ ಅಗ್ನಿಹೋತ್ರಿ ಸಿನಿಮಾ; ಟೈಟಲ್​ ಲಾಂಚ್​ ಮಾಡಿದ ಎಸ್​.ಎಲ್​. ಭೈರಪ್ಪ

ಇಂದು (ಅಕ್ಟೋಬರ್​ 21) ಬೆಂಗಳೂರಿನ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ‘ಪರ್ವ’ ಸಿನಿಮಾದ ಟೈಟಲ್​ ಲಾಂಚ್​ ಕಾರ್ಯಕ್ರಮ ನಡೆದಿದೆ. ಲೇಖಕ ಎಸ್​.ಎಲ್​. ಭೈರಪ್ಪ ಅವರು ಟೈಟಲ್​ ಲಾಂಚ್​ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಪಲ್ಲವಿ ಜೋಶಿ, ಪ್ರಕಾಶ್​ ಬೆಳವಾಡಿ ಕೂಡ ಈ ಭಾಗಿ ಆಗಿದ್ದರು.

‘ಪರ್ವ’ ಕಾದಂಬರಿಯನ್ನು ಆಧರಿಸಿ ಇಂಗ್ಲಿಷ್​ನಲ್ಲಿ ಪ್ರಕಾಶ್​ ಬೆಳವಾಡಿ ಅವರು ನಾಟಕ ನಿರ್ದೇಶಿಸಿದ್ದಾರೆ. 8 ಗಂಟೆಗಳ ಅವಧಿಯ ದೀರ್ಘ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿದೆ. ಈಗ ಈ ಕಾಂದಬರಿಗೆ ಸಿನಿಮಾ ರೂಪ ಕೂಡ ಸಿಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿವೇಕ್​ ಅಗ್ನಿಹೋತ್ರಿ ಅವರು ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಪರ್ವ’ ಎಂದರೆ ಏನು ಎಂಬುದನ್ನು ವಿವರಿಸುವಂತಹ ವಿಡಿಯೋವನ್ನು ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’, ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗಳ ಬಳಿಕ ಅವರು ಈ ಚಿತ್ರ ಕೈಗೆತ್ತಿಕೊಂಡಿರುವುದರಿಂದ ಭಾರಿ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.