ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಬಹಳ ನಿರೀಕ್ಷೆ ಇಟ್ಟುಕೊಂಡು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ (The Vaccine War) ಮಾಡಿದರು. ಸೆಪ್ಟೆಂಬರ್ 28ರಂದು ಈ ಸಿನಿಮಾ ಬಿಡುಗಡೆ ಆಯಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಚಿತ್ರಕ್ಕೆ ಕಲೆಕ್ಷನ್ ಆಗಲಿಲ್ಲ. ಹಾಗಂತ ವಿವೇಕ್ ಅಗ್ನಿಹೋತ್ರಿ ಅವರು ತೀರಾ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ಯಾಕೆಂದರೆ, ಈಗ ಈ ಸಿನಿಮಾಗೆ ‘ಆಸ್ಕರ್’ (Oscar) ಕಡೆಯಿಂದ ವಿಶೇಷ ಮನ್ನಣೆ ಸಿಕ್ಕಿದೆ. ಆ ಸುದ್ದಿಯನ್ನು ಸ್ವತಃ ವಿವೇಕ್ ಅಗ್ನಿಹೋತ್ರಿ ಅವರು ಹಂಚಿಕೊಂಡಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಸ್ಕ್ರಿಪ್ಟ್ ಕಳಿಸಿಕೊಡುವಂತೆ ಅಕಾಡೆಮಿ ಕಡೆಯಿಂದ ಸಂದೇಶ ಬಂದಿದೆ. ಇದು ಚಿತ್ರತಂಡದ ಸಂಸತಕ್ಕೆ ಕಾರಣ ಆಗಿದೆ.
ಆಸ್ಕರ್ ಪ್ರಶಸ್ತಿ ನೀಡುವ ‘ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್’ ಸಂಸ್ಥೆಯು ಕೆಲವು ಗಮನಾರ್ಹ ಸಿನಿಮಾಗಳ ಸ್ಕ್ರಿಪ್ಟ್ಗಳನ್ನು ಸಂಗ್ರಹಿಸುತ್ತದೆ. ಆ ರೀತಿ ಸಂಗ್ರಹಿಸಿದ ಚಿತ್ರಕಥೆಯನ್ನು ಲೈಬ್ರರಿಯಲ್ಲಿ ಇಡಲಾಗುತ್ತದೆ. ಅಂಥ ಸಿನಿಮಾಗಳ ಸಾಲಿಗೆ ‘ದಿ ವ್ಯಾಕ್ಸಿನ್ ವಾರ್’ ಚಿತ್ರ ಕೂಡ ಸೇರಿರುವುದು ವಿಶೇಷ. ತಮ್ಮ ಸಿನಿಮಾಗೆ ಈ ರೀತಿಯ ಮನ್ನಣೆ ಸಿಕ್ಕಿದ್ದನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡು ವಿವೇಕ್ ಅಗ್ನಿಹೋತ್ರಿ ಸಂಭ್ರಮಿಸಿದ್ದಾರೆ.
I am proud that the script of #TheVaccineWar #ATrueStory has been invited and accepted in the ‘Academy Collections’ by the library of https://t.co/kJOpVrraiB. I am happy that for hundreds of years more and more serious people will read this great story of Indian superheroes. pic.twitter.com/qyoynIFRqs
— Vivek Ranjan Agnihotri (@vivekagnihotri) October 12, 2023
ಕೊವಿಡ್-19 ಹಾವಳಿ ಮಿತಿ ಮೀರಿದ ಸಂದರ್ಭದಲ್ಲಿ ಭಾರತವು ಸ್ವತಂತ್ರವಾಗಿ ವ್ಯಾಕ್ಸಿನ್ ಕಂಡು ಹಿಡಿದ ಕಥೆಯನ್ನು ಇಟ್ಟುಕೊಂಡು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ತಯಾರಾಗಿದೆ. ಈ ಸಿನಿಮಾ ಮೂಲಕ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಗಿದೆ. ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪಾತ್ರವರ್ಗದಲ್ಲಿ ನಾನಾ ಪಾಟೇಕರ್, ಸಪ್ತಮಿ ಗೌಡ, ಪಲ್ಲವಿ ಜೋಶಿ, ಗಿರಿಜಾ ಓಕ್, ರೈಮಾ ಸೇನ್ ಸೇರಿದಂತೆ ಹಲವರು ನಟಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಹಿಟ್ ಆಗದಿದ್ದರೂ ಕೂಡ ಆಸ್ಕರ್ ಸಂಸ್ಥೆಯಿಂದ ಗೌರವ ಸಿಕ್ಕಿರುವುದಕ್ಕೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ ಕಳಪೆ ಕಲೆಕ್ಷನ್; ಚಿತ್ರಮಂದಿರದ ಎದುರು ಜನರ ಪ್ರತಿಭಟನೆ: ವಿಡಿಯೋ ವೈರಲ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಹವಾ ಹೆಚ್ಚಿತು. ದೇಶಾದ್ಯಂತ ಅವರು ಜನಪ್ರಿಯತೆ ಪಡೆದರು. ಆ ಸಿನಿಮಾದ ಅಭೂತಪೂರ್ವ ಗೆಲುವಿನ ಬಳಿಕ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೈಗೆತ್ತಿಕೊಂಡಿದ್ದರಿಂದ ಭಾರಿ ನಿರೀಕ್ಷೆ ಸೃಷ್ಟಿ ಆಗಿತ್ತು. ಆದರೆ ಎಲ್ಲರ ನಿರೀಕ್ಷೆ ತಲೆ ಕೆಳಗಾಯಿತು. 2022ರಲ್ಲಿ ಬಿಡುಗಡೆ ಆಗಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬರೋಬ್ಬರಿ 252 ಕೋಟಿ ರೂಪಾಯಿ ಗಳಿಸಿದ್ದರೆ, 2023ರಲ್ಲಿ ತೆರೆಕಂಡ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೇವಲ 5.50 ಕೋಟಿ ರೂಪಾಯಿಗೆ ಆಟ ಮುಗಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.