ಚಿತ್ರಮಂದಿರಕ್ಕೆ ಜನರನ್ನು ಕರೆತರುವುದು ಅಷ್ಟು ಸುಲಭದ ಕೆಲಸ ಅಲ್ಲ. ಒಳ್ಳೆಯ ಸಿನಿಮಾ ಮಾಡಿದರೆ ಸಾಲದು. ಉತ್ತಮವಾಗಿ ಪ್ರಚಾರ ಕೂಡ ಮಾಡಬೇಕು. ಹಾಗಿದ್ದರೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ನಂಬಿಕೆ ಇಲ್ಲ. ಬಾಕ್ಸ್ ಆಫೀಸ್ನಲ್ಲಿ (Box Office) ಗೆಲ್ಲಬೇಕು ಎಂದು ನಿರ್ಮಾಪಕರು ಹಲವಾರು ಸರ್ಕಸ್ ಮಾಡುತ್ತಾರೆ. ಮಾರ್ಕೆಟಿಂಗ್ ಸಲುವಾಗಿ ಬಗೆಬಗೆಯ ಗಿಮಿಕ್ ಕೂಡ ಮಾಡಲಾಗುತ್ತದೆ. ಉಚಿತವಾಗಿ ಟಿಕೆಟ್ (Free Tickets) ಕೊಡುವುದು ಕೂಡ ಒಂದು ಗಿಮಿಕ್. ಸದ್ಯ ಬಾಲಿವುಡ್ನ ಚಿತ್ರವೊಂದು ಇಂಥ ಪ್ರಯತ್ನ ಮಾಡಿಯೂ ಕೂಡ ಪ್ರೇಕ್ಷಕರನ್ನು ಸೆಳೆಯಲು ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಆಗಿಲ್ಲ. ಯಾವುದು ಆ ಸಿನಿಮಾ? ‘ಜರಾ ಹಟ್ಕೆ ಜರಾ ಬಚ್ಕೆ’! ಹೌದು, ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾಗೆ ನಿರೀಕ್ಷಿತ ಮಟ್ಟದ ಕಲೆಕ್ಷನ್ ಆಗುತ್ತಿಲ್ಲ. ನಾಲ್ಕು ದಿನಕ್ಕೆ ಈ ಚಿತ್ರ (Zara Hatke Zara Bachke) 26.73 ಕೋಟಿ ರೂಪಾಯಿ ಗಳಿಸಿದೆ. ಆದರೂ ಕೂಡ ನಿರ್ಮಾಪಕರು ಕೈ ಸುಟ್ಟುಕೊಂಡಂತೆ ಆಗಿದೆ.
ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅವರು ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ದಿನೇಶ್ ವಿಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ಕಾರಣಕ್ಕೆ ‘ಒಂದು ಟಿಕೆಟ್ ಕೊಂಡರೆ ಮತ್ತೊಂದು ಉಚಿತ’ ಎಂಬ ಆಫರ್ ನೀಡಲಾಯಿತು. ವೀಕೆಂಡ್ನಲ್ಲಿ ಈ ಆಫರ್ ಇದ್ದಿದ್ದರಿಂದ ಒಂದಷ್ಟು ಜನರು ಚಿತ್ರಮಂದಿರಕ್ಕೆ ಬಂದರು ಎಂಬುದು ನಿಜ. ಈ ಆಫರ್ನಲ್ಲಿ 2.5 ಲಕ್ಷ ಟಿಕೆಟ್ಗಳನ್ನು ಉಚಿತವಾಗಿ ನೀಡಲಾಗಿದೆ. ಇದರಿಂದ ನಿರ್ಮಾಪಕರಿಗೆ 5.50 ಕೋಟಿ ರೂಪಾಯಿ ಹೊರೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Sara Ali Khan: ಹಿಂದೂಗಳ ದೇವಸ್ಥಾನಕ್ಕೆ ತೆರಳಿದ್ದಕ್ಕೆ ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ ಸಾರಾ ಅಲಿ ಖಾನ್
‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿತು. ಜೂನ್ 2ರಂದು ತೆರೆಕಂಡ ಈ ಚಿತ್ರಕ್ಕೆ ಮೊದಲ ದಿನ ಸಂಗ್ರಹ ಆಗಿದ್ದು 5.49 ಕೋಟಿ ರೂಪಾಯಿ. ಆದರೆ ಎರಡನೇ ದಿನವಾದ ಶನಿವಾರ (ಜೂನ್ 3) ಕೊಂಚ ಚೇತರಿಕೆ ಕಂಡಿದ್ದು, 7.20 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೂರನೇ ದಿನ 9.90 ಕೋಟಿ ರೂಪಾಯಿ ಸಂಗ್ರಹವಾಯಿತು. ನಾಲ್ಕನೇ ದಿನದ ಕಲೆಕ್ಷನ್ 4.14 ಕೋಟಿ ರೂಪಾಯಿ. ಮುಂಬರುವ ದಿನಗಳಲ್ಲಿ ಈ ಸಿನಿಮಾ ಎಷ್ಟು ಕಮಾಯಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹಿಂದಿ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿಲ್ಲ. ಹಾಗಾಗಿ ಸಾಧಾರಣೆ ಗಳಿಕೆ ಆದರೂ ಕೂಡ ಸಮಾಧಾನಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಸಾರಾ ಅಲಿ ಖಾನ್ ಅವರು ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸೈಫ್ ಅಲಿ ಖಾನ್ರ ಮಗಳು ಎಂಬ ಕಾರಣಕ್ಕೆ ಅವರಿಗೆ ಅವಕಾಶಗಳು ಸುಲಭವಾಗಿ ಸಿಗುತ್ತಿವೆ. ಆದರೆ ಅಷ್ಟು ಸುಲಭಕ್ಕೆ ಗೆಲುವು ದಕ್ಕುತ್ತಿಲ್ಲ. ಇನ್ನು, ವಿಕ್ಕಿ ಕೌಶಲ್ ಹಲವು ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.