ನಟಿ ತ್ರಿಷಾ ಮನೆಗೆ ಬಾಂಬ್ ಬೆದರಿಕೆ, ವಿಜಯ್ ಅಭಿಮಾನಿಗಳ ಕೆಲಸ?

Trisha Krishnan: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ನಟಿ ತ್ರಿಷಾ ಕೃಷ್ಣನ್ ಮಾತ್ರವೇ ಅಲ್ಲದೆ ತಮಿಳುನಾಡಿನ ಕೆಲ ಪ್ರಮುಖ ರಾಜಕಾರಣಿಗಳು, ಸಿನಿಮಾ ನಟರುಗಳ ಮನೆಯಲ್ಲಿಯೂ ಬಾಂಬ್ ಇರಿಸಿರುವುದಾಗಿ ಕರೆಗಳು ಬಂದಿವೆ. ಚೆನ್ನೈ ಪೊಲೀಸರು ಬಾಂಬ್ ಸ್ಕ್ವಾಡ್ ಜೊತೆಗೆ ಪರಿಶೀಲನೆ ನಡೆಸಿ, ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ತ್ರಿಷಾ ಮನೆಗೆ ಬಾಂಬ್ ಬೆದರಿಕೆ, ವಿಜಯ್ ಅಭಿಮಾನಿಗಳ ಕೆಲಸ?
Trisha Krishnan

Updated on: Oct 03, 2025 | 1:23 PM

ಚೆನ್ನೈನಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಪೊಲೀಸರಿಗೆ ವಿಪರೀತ ಕೆಲಸ ಕೊಟ್ಟಿದ್ದಾರೆ ಕೆಲ ದುರುಳರು. ಖ್ಯಾತ ನಟಿ ತ್ರಿಷಾ ಸೇರಿದಂತೆ ಹಲವು ಮನೆಗಳಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಿದ್ದಾರೆ. ಚೆನ್ನೈ ಪೊಲೀಸರು ತ್ರಿಷಾ ಹಾಗೂ ಇನ್ನೂ ಕೆಲವು ಸೆಲೆಬ್ರಿಟಿಗಳು, ರಾಜಕಾರಣಿಗಳ ಮನೆಗಳಿಗೆ ಶ್ವಾನದಳದೊಟ್ಟಿಗೆ ತೆರಳಿ ತನಿಖೆ ನಡೆಸಿದ್ದು, ಬಾಂಬ್ ಕರೆಗಳು ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

ನಟಿ ತ್ರಿಷಾ ಅವರ ತೇನಮ್​​ಪೇಟ್ ಮನೆ, ಸಿಎಂ ಸ್ಟಾಲಿನ್ ಅವರ ಮನೆ ರಾಜ್ಯಪಾಲರ ಭವನ, ತಮಿಳುನಾಡು ಬಿಜೆಪಿ ಮುಖ್ಯ ಕಚೇರಿ ಮತ್ತು ನಟ, ರಾಜಕಾರಣಿ ಎಸ್​​ವಿ ಶೇಖರ್ ಅವರ ಮನೆಗಳಲ್ಲಿ ಬಾಂಬ್ ಇರಿಸಿರುವುದಾಗಿ ಪೊಲೀಸರಿಗೆ ಕರೆ ಬಂದಿದೆ. ಪೊಲೀಸರು ಕೂಡಲೇ ತ್ರಿಷಾ, ಸ್ಟಾಲಿನ್ ಅವರ ಅಧಿಕೃತ ನಿವಾಸ, ಎಸ್​​ವಿ ಶೇಖರ್ ಮನೆ ಹಾಗೂ ಬಿಜೆಪಿ ರಾಜ್ಯ ಕಚೇರಿಗಳಿಗೆ ತೆರಳಿ ತನಿಖೆ ನಡೆಸಿದ್ದಾರೆ. ಬಾಂಬ್ ಸ್ಕ್ವಾಡ್ ಮತ್ತು ಶ್ವಾನಗಳನ್ನು ಸಹ ಕರೆದುಕೊಂಡು ಹೋಗಿ ವಿವರವಾದ ತನಿಖೆ ನಡೆಸಿ ಬಳಿಕ ಇದೊಂದು ನಕಲಿ ಕರೆ ಎಂದು ಖಾತ್ರಿ ಪಡಿಸಿದ್ದಾರೆ.

ನಟ ವಿಜಯ್ ಅವರ ಅಭಿಮಾನಿಗಳದ್ದೇ ಈ ಕೆಲಸ ಆಗಿರಬಹುದು ಎಂಬ ಅನುಮಾವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ 41 ಮಂದಿ ಮೃತರಾಗಿದ್ದು, ಪ್ರಕರಣದ ಬಗ್ಗೆ ಸಿಎಂ ಸ್ಟಾಲಿನ್ ಅವರು ಗಂಭೀರವಾದ ಆದೇಶಗಳನ್ನು ಪೊಲೀಸರಿಗೆ ನೀಡಿದ್ದಾರೆ. ವಿಜಯ್ ಪಕ್ಷದ ಕೆಲ ಮುಖಂಡರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನು ನಟಿ ತ್ರಿಷಾ, ಮೃತರ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದು ವಿಜಯ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ನಟ, ರಾಜಕಾರಣಿ ಎಸ್​​ವಿ ಶೇಖರ್ ಸಹ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ವಿಜಯ್ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಇನ್ನು ವಿಜಯ್ ಅವರಿಗೆ ಬಿಜೆಪಿ ರಾಜಕೀಯ ವಿರೋಧಿ, ಹಾಗಾಗಿ ಇವರುಗಳನ್ನೇ ಟಾರ್ಗೆಟ್ ಮಾಡಿ ಬಾಂಬ್ ಇರಿಸಿರುವುದು ಸುಳ್ಳು ಕರೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕಾಲ್ತುಳಿದ ಬಳಿಕ ವಿಜಯ್ ಪ್ರತಿಕ್ರಿಯೆ, ‘ನನಗೆ ಏನು ಬೇಕಾದರೆ ಮಾಡಿ, ನನ್ನವರ ಬಿಟ್ಟುಬಿಡಿ’

ಚೆನ್ನೈ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ಸುಳ್ಳು ಕರೆ ಮಾಡಿದವರ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ಅಂದಹಾಗೆ ಚೆನ್ನೈನಲ್ಲಿ ಹೀಗೆ ನಕಲಿ ಬಾಂಬ್ ಕರೆಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದೆ ರಜನೀಕಾಂತ್ ನಿವಾಸಕ್ಕೆ ಬಾಂಬ್ ಸುಳ್ಳು ಕರೆ ಬಂದಿತ್ತು. ಈ ಮುಂಚೆ ನಟ ವಿಜಯ್, ರಜನೀಕಾಂತ್ ಅವರ ಮನೆಗಳಿಗೂ ಬಾಂಬ್ ಬೆದರಿಕೆಗಳು ಬಂದಿದ್ದವು. ಹಲವು ವರ್ಷಗಳ ಹಿಂದೆ ನಿರ್ದೇಶಕ ಮಣಿರತ್ನಂ ಅವರ ಮನೆಯ ಮೇಲೆ ನಿಜವಾಗಿಯೂ ಬಾಂಬ್ ದಾಳಿ ಆಗಿತ್ತು. ಹಾಗಾಗಿ ಈ ರೀತಿಯ ಯಾವುದೇ ಬಾಂಬ್ ಕರೆಗಳು ಬಂದಾಗಲು ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ