ಕಾಲ್ತುಳಿದ ಬಳಿಕ ವಿಜಯ್ ಪ್ರತಿಕ್ರಿಯೆ, ‘ನನಗೆ ಏನು ಬೇಕಾದರೆ ಮಾಡಿ, ನನ್ನವರ ಬಿಟ್ಟುಬಿಡಿ’
Thalapathy Vijay: ತಮಿಳುನಾಡಿನ ಕರೂರಿನಲ್ಲಿ ನಡೆದ ದಳಪತಿ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಮಂದಿ ನಿಧನ ಹೊಂದಿ ಮೂರು ದಿನಗಳಾಗಿವೆ. ಇದೀಗ ದಳಪತಿ ವಿಜಯ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ವಿಡಿಯೋನಲ್ಲಿ ನೋವಿನಿಂದ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ಹೇಳಿರುವುದೇನು? ಇಲ್ಲಿದೆ ಮಾಹಿತಿ...

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ, ರಾಜಕೀಯ ಪಕ್ಷವನ್ನೂ ಸ್ಥಾಪಿಸಿರುವ ದಳಪತಿ ವಿಜಯ್ ಅವರ ಇತ್ತೀಚೆಗಿನ ರಾಜಕೀಯ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲ 40ಕ್ಕೂ ಹೆಚ್ಚು ಮಂದಿ ನಿಧನ ಹೊಂದಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ ವಿಜಯ್ ಅವರ ರ್ಯಾಲಿ ಸಂದರ್ಭದಲ್ಲಿ ವಿಜಯ್ ಅವರನ್ನು ನೋಡಲು ಭಾರಿ ಸಂಖ್ಯೆಯ ಜನ ಸೇರಿದ್ದರು, ಈ ವೇಳೆ ನಡೆದ ಕಾಲ್ತುಳಿತದಲ್ಲಿ 40ಕ್ಕೂ ಹೆಚ್ಚು ಮಂದಿ ನಿಧನ ಹೊಂದಿದರು. ಘಟನೆ ನಡೆದು ಮೂರು ದಿನಗಳಾಗಿದ್ದು, ಇದೀಗ ವಿಜಯ್ ವಿಡಿಯೋ ಮೂಲಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋನಲ್ಲಿ ನೋವಿನಿಂದ ಮಾತನಾಡಿರುವ ವಿಜಯ್, ‘ನನ್ನ ಜೀವನದಲ್ಲಿಯೇ ಇಷ್ಟು ನೋವಿನ, ದುಃಖದ ದಿನವನ್ನು ನಾನು ಈವರೆಗೆ ನೋಡಿರಲಿಲ್ಲ. ನನ್ನ ಮೇಲಿನ ಪ್ರೀತಿಯಿಂದ ಅಷ್ಟು ಜನ ನೋಡಲು ಬಂದಿದ್ದರು, ಅವರ ಪ್ರೀತಿಗೆ ನಾನು ಎಂದಿಗೂ ಋಣಿಯಾಗಿರುತ್ತೇನೆ. ನಾನು ಮತ್ತೆ ಏಕೆ ಕರೂರಿಗೆ ಬರಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ನನಗೆ ಅವರ ಮೇಲಿರುವ ಪ್ರೀತಿ. ನಾನು ಮತ್ತೆ ಬಂದರೆ ಸಮಸ್ಯೆ ಆಗುತ್ತದೆ. ಆದರೆ ಖಂಡಿತ ಸಂತ್ರಸ್ತ ಕುಟುಂಬಗಳನ್ನು ನಾನು ಭೇಟಿ ಆಗಲಿದ್ದೇನೆ’ ಎಂದಿದ್ದಾರೆ ವಿಜಯ್.
‘ನಾನು ಈ ವರೆಗೆ ಐದು ರ್ಯಾಲಿಗಳಲ್ಲಿ ಭಾಗಿ ಆಗಿದ್ದೇನೆ. ಎಲ್ಲಿಯೂ ಇಂಥಹಾ ಘಟನೆ ನಡೆದಿಲ್ಲ. ಜನರ ಸುರಕ್ಷತೆಗಾಗಿ ನಾವು ಪೊಲೀಸರ ಬಳಿ ಚರ್ಚೆ ಮಾಡಿದ್ದೆವು, ಸುರಕ್ಷಿತ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದೆವು, ಆದರೂ ಈ ಘಟನೆ ಆಗಬಾರದಿತ್ತು, ಈ ಘಟನೆ ಆಗಿ ಹೋಗಿದೆ. ನಾನು ಕೂಡ ಮನುಷ್ಯನೇ. ಆದರೆ ಇಂದಿನಿಂದ ನನಗೆ ಜನರ ಸುರಕ್ಷತೆಯೇ ಮೊದಲ ಆದ್ಯತೆ ಆಗಲಿದೆ’ ಎಂದಿದ್ದಾರೆ ವಿಜಯ್.
ಇದನ್ನೂ ಓದಿ:600 ಕೋಟಿ ರೂಪಾಯಿ ಒಡೆಯ ನಟ ದಳಪತಿ ವಿಜಯ್
‘ಏನೇನು ನಡೆಯುತ್ತಿದೆ, ಏನು ನಡೆದಿದೆ ಎಂಬುದನ್ನು ಜನ ನೋಡಿದ್ದಾರೆ, ನೋಡುತ್ತಿದ್ದಾರೆ. ಸತ್ಯ ಹೊರಗೆ ಬರಲಿದೆ. ನನ್ನ ರಾಜಕೀಯ ಪಯಣ ಇನ್ನಷ್ಟು ಶಕ್ತಿಯುತ ಆಗಿದೆ’ ಎಂದಿರುವ ವಿಜಯ್, ತಮ್ಮ ಪಕ್ಷದ ಮುಖಂಡರನ್ನು ಬಂಧಿಸಿರುವ ಬಗ್ಗೆ ಮಾತನಾಡಿ, ‘ಸ್ಟಾಲಿನ್ ಸರ್, ನನ್ನ ಜನರಿಗೆ ಏನೂ ಮಾಡಬೇಡಿ, ನಿಮಗೆ ದ್ವೇಷ ತೀರಿಸಿಕೊಳ್ಳಬೇಕು ಎಂಬುದಾದರೆ ನನ್ನ ಮೇಲೆ ಮಾಡಿ, ನಾನು ನನ್ನ ಮನೆಯಲ್ಲಿಯೇ ಇರುತ್ತೇನೆ ಅಥವಾ ಕಚೇರಿಯಲ್ಲಿರುತ್ತೇನೆ’ ಎಂದಿದ್ದಾರೆ ವಿಜಯ್.
ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಟಿವಿಕೆ ಪಕ್ಷದ ಹಲವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕರೂರಿನ ಟಿವಿಕೆ ಮುಖಂಡರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಸಹ ನೀಡಲಾಗಿದೆ. ಕರೂರು ಕಾಲ್ತುಳಿತದಲ್ಲಿ 41 ಮಂದಿ ನಿಧನ ಹೊಂದಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




