ಸೂಕ್ಷ್ಮ ವಿಷಯಗಳ ಬಗ್ಗೆ ಸಿನಿಮಾಗಳು ಮಾಡುವ ಧೈರ್ಯವನ್ನು ಕೆಲವು ನಿರ್ದೇಶಕರು, ನಿರ್ಮಾಪಕರು ಇತ್ತೀಚೆಗೆ ಹೆಚ್ಚು ತೋರುತ್ತಿದ್ದಾರೆ. ನಿರ್ದಿಷ್ಟ ಕೋಮನ್ನು ಗುರಿಯಾಗಿರಿಸಿಕೊಂಡು ನಿರ್ಮಿಸಲಾದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files), ‘ದಿ ಕೇರಳ ಸ್ಟೋರಿ’, ‘ರಜಾಕರ್’ ಸಿನಿಮಾಗಳ ಬಳಿಕ ಈಗ ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ನಿರ್ಮಾಣವಾಗಿದ್ದು, ಸಿನಿಮಾ ಇದೇ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆಗೆ ನ್ಯಾಯಾಲಯ ತಡೆ ಒಡ್ಡಿದೆ.
ಕಮಲ್ ಚಂದ್ರಾ ನಿರ್ದೇಶನ ಮಾಡಿ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಮೌಲಾ ಒಬ್ಬ, ಮಹಿಳೆಯರು ಕೇವಲ ಪುರುಷರ ಭೋಗ ವಸ್ತುಗಳು, ಅವರಿಗೆ ಸ್ವಾತಂತ್ರ್ಯ ನೀಡುವಂತಿಲ್ಲ ಎಂಬಿತ್ಯಾದಿ ಭಾಷಣ ಮಾಡುತ್ತಿರುವ ದಶ್ಯದಿಂದ ಪ್ರಾರಂಭವಾಗುವ ಟೀಸರ್, ಮುಸ್ಲಿಂ ಮಹಿಳೆಯರ ಮೇಲೆ ಅವರ ಪತಿ ನಡೆಸುತ್ತಿರುವ ದೌರ್ಜನ್ಯದ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ.
ಈ ಸಿನಿಮಾದ ವಿರುದ್ಧ ಅಜರ್ ತಂಬೋಲ್ ಎಂಬುವರು, ಸಿನಿಮಾದ ಟೀಸರ್ ಅನ್ನು ಆಧರಿಸಿ ಸಿನಿಮಾದ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ಮಾಡಿದ ಬಾಂಬೆ ಹೈಕೋರ್ಟ್, ಜೂನ್ 14 ರವರೆಗೆ ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು, ಅಂದು ಮರು ವಿಚಾರಣೆ ನಡೆಯಲಿದೆ. ಸಿನಿಮಾದ ಬಗ್ಗೆ ಸಿಬಿಎಫ್ಸಿ ಬಾಂಬೆ ಹೈಕೋರ್ಟ್ಗೆ ಮಾಹಿತಿ ನೀಡಿದ್ದು, ಸಿನಿಮಾದ ಸರ್ಟಿಫಿಕೇಟ್ ನೀಡುವ ಹಕ್ಕಿದ್ದು, ಅದನ್ನು ತಾವು ನಿಭಾಯಿಸಿದ್ದು, ಟ್ರೈಲರ್ ಬಗ್ಗೆ ತಾವೇನೂ ಮಾಡಲಾಗುವುದಿಲ್ಲ ಎಂದಿದೆ.
ಇದನ್ನೂ ಓದಿ:‘ಸಹಾರಾ’ ಚಿತ್ರದ ಹಾಡು ಬಿಡುಗಡೆ ಮಾಡಿದ ನಟ ಗಣೇಶ್; ಜೂ.7ಕ್ಕೆ ಸಿನಿಮಾ ರಿಲೀಸ್
ಸಿನಿಮಾ ತಂಡದ ಪರ ವಕೀಲ ಅದ್ವೈತ ಸೆತ್ನಾ ಮಾತನಾಡಿ, ಸಿನಿಮಾವು ಎಂಟು ಸದಸ್ಯರ ಸಮಿತಿಯಿಂದ ನೋಡಿ, ಅವರು ಸೂಚಿಸಿದ ಕೆಲವು ಬದಲಾವಣೆಗಳನ್ನು ಮಾಡಿದ ಬಳಿಕ ಸಿನಿಮಾಕ್ಕೆ ‘ಯು/ಎ’ ಸರ್ಟಿಫಿಕೇಟ್ ನೀಡಲಾಗಿದೆ. ಚಿತ್ರತಂಡವು ಕೆಲವು ಸಂಭಾಷಣೆಗಳನ್ನು ತೆಗೆದುಹಾಕಿದೆ. ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಪಡಿಸಿದೆ.
ಈ ನಡುವೆ ಚಿತ್ರತಂಡವು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ತಮಗೆ ಸತತ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಚಿತ್ರತಂಡ ಆರೋಪ ಮಾಡಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿರುವ ಅನು ಕಪೂರ್, ತಮಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದಿದ್ದು, ಪೊಲೀಸ್ ರಕ್ಷಣೆ ಕೋರಿದ್ದಾರೆ. ಅಲ್ಲದೆ, ಸಿನಿಮಾ ನೋಡಿ ಬಳಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಸಹ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ