
ಬ್ರಿಟನ್ ಪ್ರವಾಸದಲ್ಲಿರುವ ಖ್ಯಾತ ಗಾಯಕಿ ಬಾಂಬೆ ಜಯಶ್ರೀ (Bombay Jayashri) ಆರೋಗ್ಯದಲ್ಲಿ ಏರು-ಪೇರಾಗಿದ್ದು, ಅವರಿಗೆ ಅಲ್ಲಿಯೇ ಶಸ್ತಚಿಕಿತ್ಸೆ ಮಾಡಲಾಗಿದೆ. ವೈದ್ಯರ ಮಾಹಿತಿಯಂತೆ ಈಗ ಆರೋಗ್ಯ ಸ್ಥಿರವಾಗಿದೆ. ಬಾಂಬೆ ಜಯಶ್ರೀ ಅವರು ಬ್ರಿಟನ್ನಲ್ಲಿ ಕಾರ್ಯಕ್ರಮ ನೀಡಲು ತೆರಳಿದ್ದರು ಅಲ್ಲಿ ಅವರಿಗೆ ಆನ್ಯುರಿಸಮ್ (Aneurysm) ಸಮಸ್ಯೆ ಉಲ್ಬಣವಾಗಿದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಯಶ್ರೀ ಅವರಿಗೆ ಅಗತ್ಯವಿದ್ದ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.
ರಕ್ತನಾಳಕ್ಕೆ ಹಾನಿ ಉಂಟಾಗಿ ರಕ್ತನಾಳಗಳ ಗೋಡೆಯು ದುರ್ಬಲಗೊಳ್ಳುವುದರಿಂದ ಹೃದಯದ ಕವಾಟದಲ್ಲಿ ಊತ ಕಾಣಿಸಿಕೊಳ್ಳುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಆನ್ಯುರಿಸಮ್ ಎನ್ನಲಾಗುತ್ತಿದೆ. ಇದೇ ಸಮಸ್ಯೆಯನ್ನು ಗಾಯಕಿ ಬಾಂಬೆ ಜಯಶ್ರೀ ಅವರು ಎದುರಿಸಿದ್ದರು.
ಗಾಯಕಿಯ ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಬಗ್ಗೆ ಕುಟುಂಬ ಸದಸ್ಯರು ಮಾಹಿತಿ ಹಂಚಿಕೊಂಡಿದ್ದು, ಜಯಶ್ರೀ ಅವರ ಜೊತೆಗಿದ್ದ ಕಲಾವಿದರಿಂದ ಹಾಗೂ ಎನ್ಎಚ್ಎಸ್ ಆಸ್ಪತ್ರೆಯ ಸಮರ್ಥ ಸಿಬ್ಬಂದಿಗಳಿಂದಾಗಿ ಸಮಯೋಚಿತ ವೈದ್ಯಕೀಯ ಚಿಕಿತ್ಸೆಯನ್ನು ಜಯಶ್ರೀ ಪಡೆದುಕೊಂಡಿದ್ದಾರೆ. ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ, ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ಒಂದೆರಡು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ ತಾವುಗಳೇ ಅವರ ಆರೋಗ್ಯ ಮಾಹಿತಿಯನ್ನು ಕಾಲದಿಂದ ಕಾಲಕ್ಕೆ ಹಂಚಿಕೊಳ್ಳಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳನ್ನು ನಂಬಬೇಡಿರೆಂದು ಮನವಿ ಮಾಡಿದ್ದಾರೆ.
ಬ್ರಿಟನ್ನಲ್ಲಿ ಮ್ಯೂಸಿಕ್ ಟೂರ್ ನಲ್ಲಿ ಗಾಯಕಿ ಬಾಂಬೆ ಜಯಶ್ರೀ ಪಾಲ್ಗೊಂಡಿದ್ದಾರೆ. ಬ್ರಿಟನ್ನ ಹಲವು ನಗರಗಳಲ್ಲಿ ಜಯಶ್ರೀ ಕರ್ನಾಟಿಕ್ ಸಂಗೀತ ಹಾಗೂ ಇತರೆ ಹಾಡುಗಳನ್ನು ಹಾಡುತ್ತಿದ್ದಾರೆ. ಶುಕ್ರವಾರ ಅವರು ಲಿವರ್ಪುಲ್ನ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಆರೋಗ್ಯ ಏರುಪೇರಾದ ಕಾರಣ ಶೋ ಅನ್ನು ರದ್ದು ಮಾಡಲಾಯಿತು.
ಬಾಂಬೆ ಜಯಶ್ರೀ ಅವರು ಖ್ಯಾತ ಕರ್ನಾಟಿಕ್ ಸಂಗೀತ ಗಾಯಕಿ ಆಗಿರುವ ಜೊತೆಗೆ ಹಲವು ದಶಕಗಳಿಂದಲೂ ಸಿನಿಮಾ ಹಾಡುಗಳನ್ನು ಸಹ ಹಾಡುತ್ತಿದ್ದಾರೆ. ಕನ್ನಡದಲ್ಲಿ ಪ್ರೀತ್ಸೆ ಅಂತ ಪ್ರಾಣಾ ತಿನ್ನೊ, ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ ಹಾಗೂ ಇನ್ನೂ ಕೆಲವು ಹಾಡುಗಳನ್ನು ಹಾಡಿದ್ದಾರೆ. ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಜಯಶ್ರೀ ಹಾಡಿದ್ದಾರೆ. ಹಿಂದಿಯಲ್ಲಿ ಅವರು ಹಾಡಿರುವ ಜರಾ ಜರಾ ಬೆಹಕತಾ ಹೈ ಹಾಡು ಬಹಳ ಜನಪ್ರಿಯ.