‘ಕ್ಯಾಪ್ಟನ್ ಮಿಲ್ಲರ್’ ಶೂಟಿಂಗ್​ನಲ್ಲಿ ಶಿವಣ್ಣನಿಂದಾಗಿ ನಿರ್ದೇಶಕರಿಗೆ ಆಗಿತ್ತು ದೊಡ್ಡ ಆಘಾತ, ಏನದು?

|

Updated on: Jan 09, 2024 | 9:51 PM

Shiva Rajkumar: ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣನ ಪಾತ್ರದ ಶೂಟಿಂಗ್ ನಡೆದಾಗ ಆದ ಅವಘಡದ ಬಗ್ಗೆ ನಿರ್ದೇಶಕ ಮಾತನಾಡಿದ್ದಾರೆ. ಜೀವವೇ ಹೋದಂತೆ ಅನಿಸಿತ್ತಂತೆ ನಿರ್ದೇಶಕ ಅರುಣ್​ಗೆ. ಅಂಥಹದ್ದೇನಾಗಿತ್ತು?

‘ಕ್ಯಾಪ್ಟನ್ ಮಿಲ್ಲರ್’ ಶೂಟಿಂಗ್​ನಲ್ಲಿ ಶಿವಣ್ಣನಿಂದಾಗಿ ನಿರ್ದೇಶಕರಿಗೆ ಆಗಿತ್ತು ದೊಡ್ಡ ಆಘಾತ, ಏನದು?
ಶಿವರಾಜ್ ಕುಮಾರ್
Follow us on

ಶಿವರಾಜ್ ಕುಮಾರ್ (Shiva Rajkumar) ಹಾಗೂ ಧನುಶ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ತಮಿಳುನಾಡಿನಲ್ಲಿ ಶಿವಣ್ಣ ಕ್ರೇಜ್ ಅದ್ಧೂರಿಯಾಗಿದ್ದು, ಧನುಶ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಶಿವಣ್ಣನ ಅಭಿಮಾನಿಗಳು ಸಹ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಶೂಟಿಂಗ್ ವೇಳೆ ಅವಘಡವೊಂದು ನಡೆದಿದ್ದ ಬಗ್ಗೆ ಹಾಗೂ ಶಿವಣ್ಣನಿಂದಾಗಿ ಜೀವವೇ ಬಾಯಿಗೆ ಬಂದಂತಾಗಿದ್ದ ಪ್ರಸಂಗವನ್ನು ನಿರ್ದೇಶಕ ಅರುಣ್ ಮಟ್ಟೇಶ್ವರನ್ ವಿವರಿಸಿದ್ದಾರೆ.

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಶೂಟಿಂಗ್​ಗೆ ಮೊದಲ ದಿನ ಶಿವರಾಜ್ ಕುಮಾರ್ ಬಂದಾಗ ನಿರ್ದೇಶಕ ಅರುಣ್ ಹಾಗೂ ಅವರ ತಂಡಕ್ಕೆ ಬಹಳ ಟೆನ್ಶನ್ ಆಗಿತ್ತಂತೆ. ಸೂಪರ್ ಸ್ಟಾರ್ ಒಬ್ಬರು ಬರುತ್ತಿದ್ದಾರೆ, ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದೆಲ್ಲ ತಂಡ ಯೋಚಿಸಿತ್ತಂತೆ ಆದರೆ ಶಿವಣ್ಣ ಬಂದವರೇ ಬಹಳ ಸರಳವಾಗಿ ಎಲ್ಲರೊಟ್ಟಿಗೆ ಬೆರೆತು ಹೊಸ ಎನರ್ಜಿಯನ್ನು ಸೆಟ್​ಗೆ ತಂದುಬಿಟ್ಟರಂತೆ. ಇದರಿಂದಾಗಿ ತಂಡದವರಿಗೆ ಕೆಲಸ ಮಾಡಲು ಬಹಳ ಸುಲಭವಾಯ್ತಂತೆ.

ಇದನ್ನೂ ಓದಿ:‘ಆರ್​ಆರ್​ಆರ್​’ ಸ್ಟಾರ್ ಜೊತೆ ಶಿವರಾಜ್ ಕುಮಾರ್ ನಟನೆ, ನಿರ್ದೇಶಕ ಯಾರು?

ಆದರೆ ಒಮ್ಮೆ ಕುದುರೆ ಚೇಸ್​ನ ಶಾಟ್ ಒಂದರ ಚಿತ್ರೀಕರಣ ನಡೆಯುವಾಗ ಕುದುರೆ ಓಡಿಸಿಕೊಂಡು ಬರುತ್ತಿದ್ದ ಶಿವರಾಜ್ ಕುಮಾರ್, ಕುದುರೆ ಜೊತೆಗೆ ಬಿದ್ದು ಬಿಟ್ಟರಂತೆ. ಆ ದೃಶ್ಯ ನೋಡಿ ನಿರ್ದೇಶಕ ಅರುಣ್​ಗೆ ಜೀವವೇ ಬಾಯಿಗೆ ಬಂದಂತಾಯ್ತಂತೆ, ಏನಪ್ಪ ಇದು, ಕರ್ನಾಟಕದ ಸೂಪರ್ ಸ್ಟಾರ್ ಅನ್ನು ಕರೆತಂದು ಹೀಗೆ ಆಗೋಯ್ತಲ್ಲ, ಶಿವಣ್ಣನಿಗೆ ಏನಾದರೂ ಆದರೆ ನನ್ನನ್ನು ಕರ್ನಾಟಕದವರು ಜೀವ ಸಹಿತ ಬಿಡಲ್ಲ, ಕರ್ನಾಟಕದವರೊಟ್ಟಿಗೆ ದೊಡ್ಡ ಜಗಳವೇ ಆಗಿಬಿಡುತ್ತದೆ, ತಮಿಳುನಾಡು ಗಡಿಯನ್ನು ಬಂದ್ ಮಾಡಬೇಕಾಗುತ್ತದೆ. ಕರ್ನಾಟಕ-ತಮಿಳುನಾಡು ನಡುವೆ ಯುದ್ಧವೇ ನಡೆದು ಬಿಡುತ್ತದೆ ಎಂದೆಲ್ಲ ಅನಿಸಿಬಿಟ್ಟಿತಂತೆ.

ಕುದುರೆಯಿಂದ ಬಿದ್ದಿದ್ದ ಶಿವರಾಜ್ ಕುಮಾರ್ ಅವರನ್ನು ಎತ್ತಲು ತಾವೂ ಸೇರಿದಂತೆ ಇಡೀ ಚಿತ್ರತಂಡವೇ ಅವರತ್ತ ಓಡಿತಂತೆ, ಶಿವಣ್ಣನ ಬಾಡಿಗಾರ್ಡ್ ಸಹ ಮೊದಲು ಓಡಿ ಹೋದರಂತೆ. ಆದರೆ ಅಷ್ಟರಲ್ಲಾಗಲೇ ಶಿವಣ್ಣ ತಾವೇ ಎದ್ದು, ಗಾಬರಿಯಾಗಿ ತಮ್ಮತ್ತ ಓಡಿ ಬಂದವರನ್ನು ಉದ್ದೇಶಸಿ, ‘ಇಲ್ಲ ನನಗೇನೂ ಆಗಿಲ್ಲ, ನಾನು ಆರಾಮವಾಗಿದ್ದೀನಿ, ಸಣ್ಣ-ಪುಟ್ಟ ಗಾಯಗಳಷ್ಟೆ. ನಡೆಯಿರಿ, ಇನ್ನೋಂದು ಶಾಟ್ ತೆಗೆಯೋಣ’ ಎಂದರಂತೆ. ಶಿವಣ್ಣನ ಮಾತು ಕೇಳಿ ಹೋದ ಜೀವ ಬಂದಂತಾಯ್ತಂತೆ ನಿರ್ದೇಶಕ ಅರುಣ್​ಗೆ.

ಶಿವರಾಜ್ ಕುಮಾರ್ ಅಷ್ಟು ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಸಹ ಒಮ್ಮೆ ಸಹ ತಾವೊಬ್ಬ ಸ್ಟಾರ್ ಎಂಬಂತೆ ನಡೆದುಕೊಳ್ಳಲಿಲ್ಲ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು. ಸೆಟ್​ನಲ್ಲಿ ಇರುವ ಎಲ್ಲರ ಕಾಲೆಳೆಯುತ್ತಾ ತಮಾಷೆ ಮಾಡುತ್ತಾ ಇರುತ್ತಿದ್ದರು. ನನ್ನನ್ನು ಬಹಳ ತಮಾಷೆ ಮಾಡಿದರು. ಯಾವ ಯಾವ ದುರಭ್ಯಾಸಗಳು ಇವೆ ಎಂದು ನನ್ನನ್ನು ಕೇಳಿದ್ದರು, ಭೂಮಿ ಮೇಲಿನ ಎಲ್ಲ ಕೆಟ್ಟ ಅಭ್ಯಾಸಗಳು ನನಗಿವೆ ಎಂದು ತಮಾಷೆಯಾಗಿ ಹೇಳಿದ್ದೆ ಎಂದು ಅರುಣ್ ನೆನಪು ಮಾಡಿಕೊಂಡರು.

ಧನುಶ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿರುವ ‘ಕ್ಯಾಪ್ಟನ್ ಮಿಲ್ಲರ್’ ಸ್ವತಂತ್ರ್ಯ ಪೂರ್ವದ ಕತೆ ಹೊಂದಿದೆ. ಸಿನಿಮಾದಲ್ಲಿ ಇನ್ನೂ ಕೆಲವು ಪ್ರತಿಭಾವಂತ ನಟರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಹಾಡು ಈಗಾಗಲೇ ಬಿಡುಗಡೆ ಆಗಿದ್ದು, ಬಹಳ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಜನವರಿ 12ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ