ದುಲ್ಕರ್ ನಿರ್ಮಾಣ ಸಂಸ್ಥೆ ಮೇಲೆ ಕಾಸ್ಟಿಂಗ್ ಕೌಚ್ ಆರೋಪ

Dulquer Salmaan production house: ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ‘ಲೋಕಃ’ ಸಿನಿಮಾ ನಿರ್ಮಾಣ ಮಾಡಿದ್ದು ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಅದರ ಬೆನ್ನಲ್ಲೆ ಒಂದರ ಹಿಂದೊಂದು ಸಂಕಷ್ಟಗಳು ದುಲ್ಕರ್ ಅವರನ್ನು ಎದುರುಗೊಳ್ಳುತ್ತಲೇ ಇವೆ. ಇದೀಗ ದುಲ್ಕರ್ ಸಲ್ಮಾನ್ ಅವರ ವೇಫೆರರ್ ನಿರ್ಮಾಣ ಸಂಸ್ಥೆ ವಿರುದ್ಧ ಪಾತ್ರಕ್ಕಾಗಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.

ದುಲ್ಕರ್ ನಿರ್ಮಾಣ ಸಂಸ್ಥೆ ಮೇಲೆ ಕಾಸ್ಟಿಂಗ್ ಕೌಚ್ ಆರೋಪ
Dulquer Salman

Updated on: Oct 17, 2025 | 8:12 AM

ದುಲ್ಕರ್ ಸಲ್ಮಾನ್ (Dulquer Salman) ನಿರ್ಮಾಣ ಸಂಸ್ಥೆ ಕಳೆದ ಕೆಲವು ವಾರಗಳಿಂದಲೂ ಸುದ್ದಿಯಲ್ಲಿದೆ. ‘ಲೋಕಃ’ ಸಿನಿಮಾ ನಿರ್ಮಾಣವನ್ನು ದುಲ್ಕರ್ ಅವರ ವೆಲ್​​ಫೈರ್ ಫಿಲಮ್ಸ್ ವತಿಯಿಂದ ನಿರ್ಮಾಣ ಮಾಡಲಾಗಿದ್ದು, ಕಡಿಮೆ ಬಜೆಟ್​​ನಲ್ಲಿ ಅತ್ಯುತ್ತಮ ಗುಣಮಟ್ಟದ ಸಿನಿಮಾ ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಈಗ ಅದೇ ನಿರ್ಮಾಣ ಸಂಸ್ಥೆ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪವನ್ನು ಮಾಡಿದ್ದಾರೆ. ‘ಲೋಕಃ’ ಸಿನಿಮಾದ ಬಳಿಕ ದುಲ್ಕರ್ ಸಲ್ಮಾನ್ ಅವರಿಗೆ ಒಂದರ ಹಿಂದೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ.

ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆ ಹಾಗೂ ಮನೆಯ ಮೇಲೆ ಕೆಲ ದಿನಗಳ ಹಿಂದಷ್ಟೆ ಒಮ್ಮೆ ಕಸ್ಟಮ್ಸ್ ಅಧಿಕಾರಿಗಳು ಮತ್ತೊಮ್ಮೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡಿದ್ದರು. ಕಸ್ಟಮ್ಸ್ ಅಧಿಕಾರಿಗಳು ದುಲ್ಕರ್ ಅವರಿಗೆ ಸೇರಿದ ಕೆಲವು ಕಾರುಗಳನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಿದ್ದರು. ಈಗ ಅವರ ನಿರ್ಮಾಣ ಸಂಸ್ಥೆಯ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಹೊರಿಸಲಾಗಿದೆ. ಆರೋಪಕ್ಕೆ ಪ್ರತಿಯಾಗಿ ಕ್ರಮವನ್ನೂ ಸಹ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಕೈಗೊಂಡಿದೆ.

ಯುವತಿಯೊಬ್ಬಾಕೆ ನೀಡಿರುವ ದೂರಿನಂತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿರುವ ಧಿನಿಲ್ ಬಾಬು ಎಂಬಾತ ಯುವತಿಗೆ ಕರೆ ಮಾಡಿ, ತಾನು ದುಲ್ಕರ್ ಅವರ ವೇಫೇರರ್ ನಿರ್ಮಾಣ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದು ವೆಲ್​​ಫೈರ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಮುಂದಿನ ಸಿನಿಮಾನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ, ವೇಫೇರರ್ ಪ್ರೊಡಕ್ಷನ್ ಹೌಸ್​ ಬಳಿ ಇರುವ ಮನೆಯೊಂದಕ್ಕೆ ಬರಲು ಹೇಳಿದ್ದಾನೆ. ಬಳಿಕ ಯುವತಿಯನ್ನು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಹಲ್ಲೆ ಮಾಡಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ಸಿಗದಂತೆ ಮಾಡುವೆ ಎಂದು ಬೆದರಿಸಿದ್ದಾನೆ.

ಇದನ್ನೂ ಓದಿ:ಸ್ಮಗ್ಲಿಂಗ್ ಪ್ರಕರಣ: ಖ್ಯಾತ ನಟ ದುಲ್ಕರ್ ಸಲ್ಮಾನ್​​ಗೆ ಸಮನ್ಸ್ ಜಾರಿ

ಇದೀಗ ಯುವತಿ ಪೊಲೀಸರಿಗೆ ದೂರು ನೀಡಿದ್ದು, ದೂರಿಗೆ ಸಾಕ್ಷ್ಯಗಳಾಗಿ ಮೊಬೈಲ್ ಕರೆ ದಾಖಲೆ, ವಿಡಿಯೋ, ಕಾಲ್ ರೆಕಾರ್ಡ್​​ಗಳನ್ನು ಸಹ ನೀಡಿದ್ದಾಳೆ. ವೆಫೇರ್​​ ಪ್ರೊಡಕ್ಷನ್ ಹೌಸ್ ಹೆಸರು ಬರುತ್ತಿದ್ದಂತೆ ನಿರ್ಮಾಣ ಸಂಸ್ಥೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತಮ್ಮ ಸಂಸ್ಥೆಗೂ ಆರೋಪಿ ವ್ಯಕ್ತಿ ಧಿನಿಲ್ ಬಾಬುಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನಿರ್ಮಾಣ ಸಂಸ್ಥೆಯ ವತಿಯಿಂದ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಕೇರಳ ಫಿಲಂ ಫೆಡರೇಷನ್​​ಗೂ ಸಹ ದೂರು ನೀಡಿದ್ದಾರೆ.

ದುಲ್ಕರ್ ಸಲ್ಮಾನ್ ಅವರ ವೇಫೆರ್ ಪ್ರೊಡಕ್ಷನ್ ಹೌಸ್ ಇತ್ತೀಚೆಗಷ್ಟೆ ‘ಲೋಕಃ’ ಸಿನಿಮಾ ನಿರ್ಮಾಣ ಮಾಡಿದೆ. ‘ಲೋಕಃ’ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಮಾಡಿದ್ದು ಕೇರಳದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ‘ಲೋಕಃ: ಚಾಪ್ಟರ್ 2’ ಸಿನಿಮಾ ನಿರ್ಮಾಣಕ್ಕೆ ಸಹ ಮುಂದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ