ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗ ಚೈತನ್ಯಗೆ ಇದು ಎರಡನೇ ಮದುವೆಯಾದರೆ, ಶೋಭಿತಾಗೆ ಇದು ಮೊದಲನೆಯದ್ದು. ಈ ಹಿಂದೆ ನಾಗ ಚೈತನ್ಯ ಹಾಗೂ ಸಮಂತಾ ಮದುವೆಯಾಗಿದ್ದಾಗ ಅವರಿಬ್ಬರ ಜಾತಕ ವಿಶ್ಲೇಷಿಸಿ, ಈ ಇಬ್ಬರೂ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ, ಇದೀಗ ನಾಗ ಚೈತನ್ಯ ಹಾಗೂ ಶೋಭಿತಾರ ಜಾತಕ ವಿಶ್ಲೇಷಣೆ ಮಾಡಿದ್ದಾರೆ. ಇಬ್ಬರ ಜಾತಕ ವಿಶ್ಲೇಷಣೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋನಲ್ಲಿ ವೇಣು ಸ್ವಾಮಿ ಹೇಳಿರುವಂತೆ, ‘ನಾಗ ಚೈತನ್ಯ ಹಾಗೂ ಶೋಭಿತಾ ಜಾತಕ ಪರಸ್ಪರ ಸರಿಹೊಂದುವುದಿಲ್ಲ. ಇವರಿಬ್ಬರ ನಡುವೆ 2027 ರಿಂದಲೇ ಸಮಸ್ಯೆ ಪ್ರಾರಂಭ ಆಗಲಿದೆ. ಈ ಇಬ್ಬರ ಮಧ್ಯೆ ಸಮಸ್ಯೆಗೆ ಮಹಿಳೆಯೊಬ್ಬರು ಕಾರಣ ಆಗುತ್ತಾರೆ. 2027 ರ ಬಳಿಕ ಈ ಇಬ್ಬರ ನಡುವೆ ಜಗಳಗಳು ನಡೆಯಲಿವೆ’ ಎಂದು ವೇಣು ಸ್ವಾಮಿ ಹೇಳಿದ್ದಾರೆ.
‘ಸಮಂತಾ ಹಾಗೂ ನಾಗ ಚೈತನ್ಯ ದಾಂಪತ್ಯಕ್ಕೆ 100 ಕ್ಕೆ 50 ಅಂಕವನ್ನಾದರೂ ಕೊಡಬಹುದಾಗಿತ್ತು. ಆದರೆ ನಾಗ ಚೈತನ್ಯ ಮತ್ತು ಶೋಭಿತಾ ದುಲಿಪಾಲ ದಾಂಪತ್ಯಕ್ಕೆ 100 ಕ್ಕೆ ಹತ್ತು ಅಂಕಗಳನ್ನು ಸಹ ಹಾಕಲು ಸಾಧ್ಯವಿಲ್ಲ. ಶೋಭಿತಾ ಜಾತಕದಲ್ಲಿ ಕೆಲವು ಗಂಭೀರ ಸಮಸ್ಯೆಗಳಿವೆ. ಇನ್ನು ಸಮಂತಾ ತಮ್ಮ ವೃತ್ತಿ ಜೀವನದಲ್ಲಿ ಇನ್ನು ಮುಂದೆ ದೊಡ್ಡ ಮಟ್ಟದ ಪ್ರಗತಿ ಸಾಧಿಸಲಿದ್ದಾರೆ. ಆದರೆ ಶೋಭಿತಾ ವೃತ್ತಿ ಜೀವನದಲ್ಲಿ ಏಳ್ಗೆ ಆಗುವುದಿಲ್ಲ’ ಎಂದಿದ್ದಾರೆ ವೇಣು ಸ್ವಾಮಿ.
ಇದನ್ನೂ ಓದಿ:ಸಮಂತಾ ಬಗ್ಗೆ ನಾಗ ಚೈತನ್ಯ 2ನೇ ಪತ್ನಿ ಶೋಭಿತಾಗೆ ಇರುವ ಅಭಿಪ್ರಾಯ ಏನು? ವಿಡಿಯೋ ವೈರಲ್
ವೇಣು ಸ್ವಾಮಿ, ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ಬೇಡಿಕೆ ಇರುವ ಜ್ಯೋತಿಷಿ. ನಟಿ ರಶ್ಮಿಕಾ ಸೇರಿದಂತೆ ಹಲವು ನಟಿಯರು, ನಟರು ವೇಣು ಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದರು. ವೇಣು ಸ್ವಾಮಿ, ಹಲವರಿಗೆ ಭವಿಷ್ಯವನ್ನು ಸಹ ಹೇಳಿದ್ದಾರೆ. ಆದರೆ ಕಳೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಭವಿಷ್ಯ ಹೇಳಿದ್ದ ವೇಣು ಸ್ವಾಮಿ, ಮತ್ತೊಮ್ಮೆ ಜಗನ್ ಮೋಹನ್ ರೆಡ್ಡಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದಿದ್ದರು. ಪವನ್ ಕಲ್ಯಾಣ್ ಸೋಲಲಿದ್ದಾರೆ ಎಂದಿದ್ದರು. ಆದರೆ ಅವರ ಭವಿಷ್ಯ ಸಂಪೂರ್ಣ ಮಕಾಡೆ ಮಲಗಿತ್ತು. ಅದಾದ ಬಳಿಕ ವಿಡಿಯೋ ಒಂದನ್ನು ಮಾಡಿದ್ದ ವೇಣು ಸ್ವಾಮಿ ಜನರ ಬಳಿ ಕ್ಷಮೆ ಕೇಳಿದ್ದರು. ಅಲ್ಲದೆ ಇನ್ನು ಮುಂದೆ ತಾವು ಯಾರ ಜಾತಕ ವಿಶ್ಲೇಷಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡುವುದಿಲ್ಲ ಎಂದಿದ್ದರು. ಆದರೆ ಈಗ ಮತ್ತೆ ನಾಗ ಚೈತನ್ಯ ಹಾಗೂ ಶೋಭಿತಾರ ಜಾತಕ ವಿಶ್ಲೇಷಣೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ