ವಿದೇಶದಲ್ಲಿ ಸೈನಿಕ ಸಹೋದರನ ಬಂಧನ, ನಟಿಯ ಏಕಾಂಗಿ ಹೋರಾಟ
Celina Jaitley: ಕನ್ನಡದ ‘ಶ್ರೀಮತಿ’ ಸೇರಿದಂತೆ ಹಿಂದಿ, ತೆಲುಗು ಇನ್ನೂ ಕೆಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ನಟಿ ಸೆಲಿನಾ ಜೇಟ್ಲಿ, ಸೈನಿಕ ಸಹೋದರನಿಗಾಗಿ ವಿದೇಶದಿಂದ ಭಾರತಕ್ಕೆ ಮರಳಿದ್ದಾರೆ. ಸೆಲಿನಾ ಅವರ ಸಹೋದರ ಭಾರತೀಯ ಸೇನೆಯ ನಿವೃತ್ತ ಸೈನ್ಯಾಧಿಕಾರಿ ಆಗಿದ್ದು, ಇದೀಗ ವಿದೇಶದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಸೆಲಿನಾ ಜೇಟ್ಲಿ (Celina Jaitly) 2000ರ ದಶಕದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ಹಿಂದಿ, ತೆಲುಗು ಮತ್ತು ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿದ್ದ ಸೆಲಿನಾ ಜೇಟ್ಲಿ 2012 ರಲ್ಲಿ ತಾಯಿಯಾದ ಬಳಿಕ ನಟನೆಯಿಂದ ದೂರ ಉಳಿದರು. ಕೆಲ ವರ್ಷಗಳ ಹಿಂದೆ ಸೆಲಿನಾ ಜೇಟ್ಲಿ ಭಾರತಕ್ಕೆ ಮರಳಿದ್ದಾರೆ. ಅದೂ ತಮ್ಮ ಸೈನಿಕ ಸಹೋದರನಿಗಾಗಿ. ಇದೀಗ ತಮ್ಮ ಸಹೋದರನಿಗಾಗಿ ಹೋರಾಡುತ್ತಿದ್ದಾರೆ.
ಸೆಲಿನಾ ಜೇಟ್ಲಿಯ ಸಹೋದರ ವಿಕ್ರಾಂತ್ ಜೇಟ್ಲಿ ಭಾರತೀಯ ಸೇನೆಯ ಮೇಜರ್ ಆಗಿದ್ದರು. ಆದರೆ ಈಗ ಅವರು ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ನಿವೃತ್ತ ಮೇಜರ್ ಆಗಿರುವ ವಿಕ್ರಾಂತ್ ಜೇಟ್ಲಿ ಅವರು 2016 ರಲ್ಲಿ ನಿವೃತ್ತರಾದ ಬಳಿಕ ದುಬೈನಲ್ಲಿ ನೆಲೆಸಿ ಅಲ್ಲಿಯೇ ಉದ್ಯೋಗದಲ್ಲಿ ತೊಡಗಿಕೊಂಡಿದ್ದರು. ಆದರೆ 2024 ರಲ್ಲಿ ಯುಎಇ ಪೊಲೀಸರು ವಿಕ್ರಾಂತ್ ಅವರನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ವಿಕ್ರಾಂತ್ ಅವರನ್ನು ಬಂಧಿಸಲಾಗಿದ್ದು, ಅವರ ಭೇಟಿಗೂ ಸಹ ಯಾರಿಗೂ ಅವಕಾಶ ನೀಡಲಾಗಿಲ್ಲ.
ಮದುವೆಯ ಬಳಿಕ ಆಸ್ಟ್ರಿಯಾನಲ್ಲಿ ನೆಲೆಸಿದ್ದ ಸೆಲಿನಾ ಜೇಟ್ಲಿ, ಸಹೋದರನ ಬಂಧನದ ಬಳಿಕ ಭಾರತಕ್ಕೆ ವಾಪಸ್ಸಾಗಿದ್ದರು. ಆಗಲೇ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿ ಸಹೋದರನ ಬಿಡುಗಡೆಗೆ ಹೋರಾಡುತ್ತಿದ್ದಾರೆ ಆದರೆ ಅವರಿಗೆ ಈ ವರೆಗೆ ಯಾವುದೇ ಸಹಾಯ ದೊರೆತಿಲ್ಲ. ನಿನ್ನೆ ಇದೇ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ‘ವಿಕ್ರಾಂತ್ ಮೆಸ್ಸಿಯನ್ನು ಸಂಪರ್ಕಿಸಿ, ಅವರಿಗೆ ಕಾನೂನು ಮತ್ತು ವೈದ್ಯಕೀಯ ನೆರವು ನೀಡಿ’ ಎಂದು ಕೇಂದ್ರಕ್ಕೆ ಸೂಚಿಸಿದೆ.
ಇದನ್ನೂ ಓದಿ:‘ಧುರಂಧರ್’ ನಟ ರಣವೀರ್ ಸಿಂಗ್ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು
ನಿವೃತ್ತ ಸೇನಾಧಿಕಾರಿ ವಿಕ್ರಾಂತ್ ಅವರನ್ನು ಬಂಧಿಸಿರುವ ಯುಎಇ ಅವರ ಸಂಬಂಧಿಕರಿಗೆ ಹಾಗೂ ಇತರರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ‘ರಾಷ್ಟ್ರೀಯ ಭದ್ರತೆ’ ಅಪಾಯ ಒಡ್ಡಿದ ಕಾರಣಕ್ಕೆ ಬಂಧಿಸಲಾಗಿದೆ ಎಂದಷ್ಟೆ ಮಾಹಿತಿ ನೀಡಲಾಗಿದೆ. ತನಗೆ ಪ್ರಾಸಿಕ್ಯೂಷನ್ ಸಂಪರ್ಕ ಸಂಖ್ಯೆ ಮಾತ್ರ ನೀಡಲಾಗಿದೆ ಎಂದು ನಟಿ ಸೆಲಿನಾ ಜೇಟ್ಲಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಆದರೆ ಅವರ ಮೇಲೆ ಏನು ಆರೋಪ ಹೊರಿಸಲಾಗಿದೆ ಎಂಬುದರ ಕುರಿತು ಯಾವುದೇ ಔಪಚಾರಿಕ ವಿವರಣೆಯಿಲ್ಲ ಎಂದಿದ್ದಾರೆ.
ವಿಕ್ರಾಂತ್ ಅವರು ಮಾಜಿ ಸೈನ್ಯಾಧಿಕಾರಿ ಆಗಿರುವುದು, ಇದೀಗ ಯುಎಇ ಸರ್ಕಾರವು ‘ರಾಷ್ಟ್ರೀಯ ಭದ್ರತೆ’ ಹೆಸರಿನಲ್ಲಿ ವಿಕ್ರಾಂತ್ ಅವರನ್ನು ಬಂಧಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿಕ್ರಾಂತ್ ಅವರು ಸೀಕ್ರೆಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರೆ ಎಂಬ ಅನುಮಾನವೂ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Wed, 11 February 26




