
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss) ಮನೆಯಲ್ಲಿ ಕಳೆದ ವಾರ ಎಲಿಮಿನೇಷನ್ ನಡೆದಿಲ್ಲ. ಎಲಿಮಿನೇಷನ್ ಹೆಸರಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಹೊರಗೆ ಕಳಿಸಿದ್ದ ಬಿಗ್ಬಾಸ್ ಅವರಿಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಿ, ಅವರನ್ನೂ ಸಹ ಟಾಸ್ಕ್ನ ಒಂದು ಭಾಗವಾಗಿಸಿದ್ದರು. ನಿನ್ನೆ (ಶನಿವಾರ) ಎಪಿಸೋಡ್ನಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮರಳಿ ಮನೆಗೆ ಕರೆಸಿಕೊಂಡ ಬಿಗ್ಬಾಸ್ ಇದೀಗ ಈ ವಾರವೂ ಯಾವುದೇ ಎಲಿಮಿನೇಷನ್ ಮಾಡಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ.
ಕೆಲ ವಾರಗಳ ಹಿಂದೆ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಂ, ಮೋಕ್ಷಿತಾ ಅವರುಗಳು ಅತಿಥಿಗಳಾಗಿ ಬಂದಿದ್ದರು. ಒಂದು ವಾರಗಳ ನಂತರ ಉಗ್ರಂ ಮಂಜು, ತ್ರಿವಿಕ್ರಂ, ಮೋಕ್ಷಿತಾ ಮನೆಯಿಂದ ಹೊರಗೆ ಹೋದರು. ಆದರೆ ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿಗಳು ಎಂದು ಹೇಳಿ, ಇನ್ನು ಮುಂದೆ ಅವರೂ ಸಹ ನಿಮ್ಮೊಂದಿಗೆ ಸ್ಪರ್ಧೆಯಲ್ಲಿರುತ್ತಾರೆ ಎಂದು ಇತರೆ ಸ್ಪರ್ಧಿಗಳಿಗೆ ಹೇಳಿ ಮನೆಯಲ್ಲಿ ಉಳಿಸಲಾಗಿತ್ತು.
ರಜತ್ ಮತ್ತು ಚೈತ್ರಾ ಅವರುಗಳು ಸುಮಾರು ನಾಲ್ಕು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದರು. ಚೆನ್ನಾಗಿ ಆಟ ಆಡಿದ್ದಾರೆ. ಕೆಲವರ ವಿರೋಧ ಕಟ್ಟಿಕೊಂಡರು. ರಜತ್ ಅಂತೂ ಕಳೆದ ವಾರ, ‘ನಾನು, ಗಿಲ್ಲಿ ಹಾಗೂ ಇನ್ನಿತರರನ್ನು ಮನೆಯಿಂದ ಹೊರಗೆ ಹಾಕಿಯೇ ಈ ಮನೆ ಬಿಟ್ಟು ಹೋಗೋದು ಎಂದು ಅಬ್ಬರಿಸಿದ್ದರು. ಆದರೆ ಈ ವಾರ ಅವರೇ ಮನೆಯಿಂದ ಹೊರಗೆ ಹೋಗಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು
ಸುದೀಪ್ ಅವರು ಈ ವಾರ ರಜತ್ ಮತ್ತು ಚೈತ್ರಾ ಅವರುಗಳನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾರೆ. ರಜತ್ ಮತ್ತು ಚೈತ್ರಾ ಅವರುಗಳು ಸ್ಪರ್ಧಿಗಳಾಗಿರಲಿಲ್ಲ, ಅವರು ಅತಿಥಿಗಳೇ ಆಗಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳಾಗಿರಲಿಲ್ಲ ಎಂದರು ಸುದೀಪ್. ಆ ಇಬ್ಬರೂ ಯಾರ ಪದವಿಯನ್ನೂ ಕಿತ್ತುಕೊಳ್ಳಲು ಬಂದಿಲ್ಲ. ಇಬ್ಬರೂ ಸಹ ನಾವು ಕೇಳಿದ ಕೂಡಲೇ ಸಮಯ ಮಾಡಿಕೊಂಡು, ಕೆಲಸಗಳ್ನು ಬದಿಗೊತ್ತಿ ಮನೆಗೆ ಬಂದರು. ಮಾತ್ರವಲ್ಲದೆ, ಅವರು ಸ್ಪರ್ಧಿಗಳಲ್ಲ ಎಂಬುದು ಗೊತ್ತಿದ್ದರೂ ಸಹ ಅದನ್ನು ಎಲ್ಲಿಯೂ ಬಿಟ್ಟುಕೊಡದೆ ಎಲ್ಲರೊಟ್ಟಿಗೆ ಸೇರಿ ಆಟ ಆಡಿದರು. ನನ್ನಿಂದಲೂ ಸಹ ಪಾಪ ಕೆಲವೊಮ್ಮೆ ಬೈಸಿಕೊಂಡರು’ ಎಂದರು ಸುದೀಪ್.
ಅತಿಥಿಗಳಾಗಿ ಬಂದು ಬಿಗ್ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ, ಮನೆಯ ಸದಸ್ಯರೊಟ್ಟಿಗೆ ಆಟ ಆಡಿದ್ದಕ್ಕೆ ರಜತ್ ಮತ್ತು ಚೈತ್ರಾ ಅವರಿಗೆ ಧನ್ಯವಾದ ಹೇಳಿದರು ಸುದೀಪ್. ಹೋಗುವ ಸಮಯದಲ್ಲಿ ತುಸು ಭಾವುಕರಾದ ಚೈತ್ರಾ, ಸುದೀಪ್ ಎದುರು ಮಾತನಾಡುತ್ತಾ, ‘ಈ ಬಿಗ್ಬಾಸ್ ನನಗೆ ನನ್ನ ಜೀವನ ಮರಳಿ ಕೊಟ್ಟಿದೆ. ನಾನು ಸೋತಿದ್ದಾಗ ನನಗೆ ಮತ್ತೆ ವೇದಿಕೆ ಕೊಟ್ಟಿದೆ. ನಾನು ಮದುವೆ ಆಗಿ ಸುಮಂಗಲಿಯಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ಬಿಗ್ಬಾಸ್ ಕಾರಣ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Sun, 21 December 25