ಡ್ಯಾನ್ಸ್ ಟೀಚರ್ ಆಗಿದ್ದವನ ಆಸ್ಕರ್ ವರೆಗೆ ಕೊಂಡೊಯ್ದ ರಾಜಮೌಳಿ: ನಾಟು-ನಾಟು ಕೊರಿಯೋಗ್ರಾಫರ್ ಬಗ್ಗೆ ನಿಮಗೆಷ್ಟು ಗೊತ್ತು?

|

Updated on: Mar 20, 2023 | 5:45 PM

Prem Rakshit: ಡ್ಯಾನ್ಸ್ ಟೀಚರ್ ಆಗಿದ್ದವನ ಆಸ್ಕರ್ ವರೆಗೆ ಕೊಂಡೊಯ್ದ ರಾಜಮೌಳಿ: ನಾಟು-ನಾಟು ಹಾಡಿಗೆ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದ ಪ್ರೇಮ್ ರಕ್ಷಿತ್ ಬಗ್ಗೆ ನಿಮಗೆಷ್ಟು ಗೊತ್ತು?

ಡ್ಯಾನ್ಸ್ ಟೀಚರ್ ಆಗಿದ್ದವನ ಆಸ್ಕರ್ ವರೆಗೆ ಕೊಂಡೊಯ್ದ ರಾಜಮೌಳಿ: ನಾಟು-ನಾಟು ಕೊರಿಯೋಗ್ರಾಫರ್ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರೇಮ್ ರಕ್ಷಿತ್
Follow us on

ರಾಜಮೌಳಿ (Rajamouli) ನಿರ್ದೇಶನದ ಆರ್​ಆರ್​ಆರ್ (RRR) ಸಿನಿಮಾದ ನಾಟು-ನಾಟು (Natu-Natu) ಹಾಡು ಆಸ್ಕರ್ ಗೆದ್ದಿದೆ. ಆ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಮೊತ್ತ ಮೊದಲ ಭಾರತ ನಿರ್ಮಾಣದ ಸಿನಿಮಾ ಎನಿಸಿಕೊಂಡಿದೆ. ನಾಟು-ನಾಟು ಹಾಡಿಗೆ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಬಂದಿದೆ, ಆದರೆ ಈ ಹಾಡು ವಿಶ್ವದಾದ್ಯಂತ ಜನಪ್ರಿಯವಾಗಲು ಹಾಡಿನ ಜೊತೆಗೆ ಹಾಡಿನಲ್ಲಿ ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಹಾಕಿರುವ ಸ್ಟೆಪ್ಪುಗಳು ಸಹ ಕಾರಣ. ನಾಟು-ನಾಟು ಹಾಡಿಗೆ ಇಬ್ಬರು ಸ್ಟಾರ್ ನಟರಿಂದ ಅದ್ಭುತವಾಗಿ ಸ್ಟೆಪ್ಪು ಹಾಕಿಸಿರುವುದು ಕೊರಿಯೋಗ್ರಫರ್ ಪ್ರೇಮ್ ರಕ್ಷಿತ್ (Prem Rakshit). ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದ ಡ್ಯಾನ್ಸ್ ಟೀಚರ್ ಪ್ರೇಮ್ ಅನ್ನು ಆಸ್ಕರ್​ ವರೆಗೆ ಕೊಂಡೊಯ್ದ ಶ್ರೇಯ ರಾಜಮೌಳಿಗೆ ಸಲ್ಲಬೇಕು. ಪ್ರೇಮ್ ರಕ್ಷಿತ್ ಹಿನ್ನೆಲೆ ಏನು? ಜೀವನದಲ್ಲಿ ಪ್ರೇಮ್ ರಕ್ಷಿತ್ ಎದುರಿಸಿದ ಸಂಕಷ್ಟಗಳೇನು? ಇಲ್ಲಿದೆ ಪೂರ್ಣ ಮಾಹಿತಿ.

ಪ್ರೇಮ್ ರಕ್ಷಿತ್ ಮೂಲ ಹೆಸರು ಥಾಮಸ್ ಸತೀಶ್. ಜನಿಸಿದ್ದು ತಮಿಳುನಾಡಿನ ಪುದುಚೆರಿಯಲ್ಲಿ. ಪ್ರೇಮ್ ರಕ್ಷಿತ್ ತಂದೆ ಸಹ ಡ್ಯಾನ್ಸರ್ ಆಗಿದ್ದರು. ಕೊರಿಯೋಗ್ರಾಫರ್ ಆಗಬೇಕೆಂಬ ಕನಸು ಕಂಡಿದ್ದ ಅವರು ಡ್ಯಾನ್ಸ್ ಲಿಜೆಂಡ್ ಪ್ರಭುದೇವ ತಂದೆ ಮೈಸೂರಿನವರೇ ಆಗಿರುವ ಸುಂದರಂ ಮಾಸ್ಟರ್ ಬಳಿ ಕೆಲಸ ಮಾಡುತ್ತಿದ್ದರು. ಆದರೆ ಜೀವನ ನಿರ್ವಹಣೆಗೆ ಸೈಡ್ ಡ್ಯಾನ್ಸರ್ ವೃತ್ತಿ ಸರಿಹೋಗುವುದಿಲ್ಲ ಎನಿಸಿ ಆ ವೃತ್ತಿ ಬಿಟ್ಟು ಬಿಸಿನೆಸ್ ಮಾಡಲು ತೆರಳಿದರು. ಇನ್ನು ಪ್ರೇಮ್ ರಕ್ಷಿತ್​ಗೆ ಸಹ ಡ್ಯಾನ್ಸ್ ಬಗ್ಗೆ ಸಾಕಷ್ಟು ಒಲವಿತ್ತು. ಆದರೆ ಕೊರಿಯೋಗ್ರಾಫರ್ ಆಗಬೇಕೆಂಬ ಆಸೆಯೇನು ಇರಲಿಲ್ಲ ಬದಲಿಗೆ ಸಿನಿಮಾ ತಂತ್ರಜ್ಞ ಆಗಬೇಕೆಂಬುದು ಅವರ ಆಸೆಯಾಗಿತ್ತು. ಹಾಗಾಗಿ ಅನಿಮೇಶನ್, ವಿಎಫ್​ಎಕ್ಸ್ , ಎಡಿಟಿಂಗ್ ಇತರೆ ಕೋರ್ಸುಗಳನ್ನು ಮಾಡಿದರು.

ಆರಂಭದಲ್ಲಿ ಅವರಿಗೆ ಸೂಕ್ತವಾದ ಅವಕಾಶ, ಮಾರ್ಗದರ್ಶನ ದೊರೆಯಲಿಲ್ಲ. ಆ ವೇಳೆಯಲ್ಲಿ ಟೈಲರಿಂಗ್ ಶಾಪ್ ಒಂದರಲ್ಲಿ ಪಾರ್ಟ್​ಟೈಮ್ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಕೆಲಸ ಮಾಡಿಕೊಂಡೆ ಅವಕಾಶಗಳನ್ನು ಹುಡುಕಲು ಆರಂಭಿಸಿದರು. ಹಣ ಕಡಿಮೆ ಇದ್ದಾಗ ಹಿನ್ನೆಲೆ ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದರು. ಹಲವು ಸಿನಿಮಾಗಳಿಗೆ ಹಿನ್ನೆಲೆ ಡ್ಯಾನ್ಸರ್ ಆಗಿ ಕೆಲಸ ಮಾಡಿದ ಬಳಿಕ, ಅವರ ನೃತ್ಯ ಪ್ರತಿಭೆ ಗುರುತಿಸಿ ‘ವಿದ್ಯಾರ್ಥಿ’ ಹೆಸರಿನ ತೆಲುಗು ಸಿನಿಮಾಕ್ಕೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡುವ ಅವಕಾಶ ನೀಡಲಾಯ್ತು. ಆದರೆ ಆ ಸಿನಿಮಾ ಬಿಡುಗಡೆಯೇ ಆಗಲಿಲ್ಲ. ಅಷ್ಟರಲ್ಲಿ ಚಿತ್ರರಂಗದಲ್ಲಿ ತುಸು ಪರಿಚಯ ಬೆಳೆಸಿಕೊಂಡಿದ್ದ ಪ್ರೇಮ್ ರಕ್ಷಿತ್. ಮನೆ-ಮನೆಗೆ ತೆರಳಿ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಲು ಆರಂಭಿಸಿದರು. ಇದರಿಂದ ಅವರಿಗೆ ತುಸು ಹೆಚ್ಚು ಹಣ ಸಹ ಸಿಗುತ್ತಿತ್ತು.

ಅದೇ ಸಮಯದಲ್ಲಿ ಯಾರೊ ಒಬ್ಬರ ಪರಿಚಯದ ಮುಖಾಂತರ ನಿರ್ದೇಶಕ ರಾಜಮೌಳಿಯ ಮಗ ಕಾರ್ತಿಕೇಯ ಹಾಗೂ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಲು ಆರಂಭಿಸಿದರು. ಈ ಸಮಯದಲ್ಲಿ ಪ್ರೇಮ್ ರಕ್ಷಿತ್​ರ ಪ್ರತಿಭೆ ಗುರುತಿಸಿದ ರಾಜಮೌಳಿ ಅವರಿಗೆ ತಮ್ಮದೇ ನಿರ್ದೇಶನದ ‘ಛತ್ರಪತಿ’ ಸಿನಿಮಾಕ್ಕೆ ಕೊರಿಯೋಗ್ರಫಿ ಮಾಡುವ ಅವಕಾಶ ನೀಡಿದರು. ಮೊದಲ ಸಿನಿಮಾದ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಪ್ರೇಮ್ ರಕ್ಷಿತ್ ಛತ್ರಪತಿ ಸಿನಿಮಾದಲ್ಲಿ ಪ್ರಭಾಸ್​ಗೆ ಕೊರಿಯೋಗ್ರಫಿ ಮಾಡಿದರು. ಆದರೆ ಆ ಸಿನಿಮಾದಿಂದ ಅವರಿಗೆ ಹೆಚ್ಚೇನೂ ಲಾಭವಾಗಲಿಲ್ಲ.

ಛತ್ರಪತಿ ಬಿಡುಗಡೆ ಆದ ವರ್ಷದ ಬಳಿಕ ರಾಜಮೌಳಿಯೇ ನಿರ್ದೇಶನ ಮಾಡಿದ ‘ವಿಕ್ರಮಾರ್ಕುಡು’ ಸಿನಿಮಾಕ್ಕೆ ಮತ್ತೆ ಪ್ರೇಮ್ ರಕ್ಷಿತ್​ಗೆ ಅವಕಾಶ ಕೊಟ್ಟರು ರಾಜಮೌಳಿ. ಛತ್ರಪತಿಯಲ್ಲಿ ಡ್ಯಾನ್ಸ್​ಗೆ ಹೆಚ್ಚು ಅವಕಾಶಗಳಿರಲಿಲ್ಲ. ಆದರೆ ವಿಕ್ರಮಾರ್ಕುಡು ಸಿನಿಮಾದಲ್ಲಿ ಇತ್ತು ಅದನ್ನು ಸದುಪಯೋಗ ಪಡಿಸಿಕೊಂಡರು ಪ್ರೇಮ್ ರಕ್ಷಿತ್. ವಿಕ್ರಮಾರ್ಕುಡು ಸಿನಿಮಾದ ಬಳಿಕ ಪ್ರೇಮ್ ರಕ್ಷಿತ್​ ಹೆಸರು ತುಸು ಪರಿಚಿತಗೊಂಡಿತಾದರೂ ಅವರಿಗೆ ದೊರಕಿದ್ದು ಕೇವಲ ಎರಡು ತೆಲುಗು ಸಿನಿಮಾ ಆಫರ್​ ಅಷ್ಟೆ. ಆದರೆ ಪ್ರೇಮ್ ರಕ್ಷಿತ್ ಟ್ಯಾಲೆಂಟ್ ನಿಜಕ್ಕೂ ತೆಲುಗು ಚಿತ್ರರಂಗಕ್ಕೆ ಗೊತ್ತಾಗಿತ್ತು. ರಾಜಮೌಳಿ ನಿರ್ದೇಶನದ ‘ಯಮದೊಂಗ’ ಸಿನಿಮಾಕ್ಕೆ ಕೊರಿಯೋಗ್ರಫಿ ಮಾಡಿದಾಗ. ಆ ಸಿನಿಮಾದ ‘ನಾಚೊ ರೆ ನಾಚೊ ರೆ’ ಹಾಡಿಗೆ ಜೂ ಎನ್​ಟಿಆರ್ ಕೈಯಲ್ಲಿ ಪ್ರೇಮ್ ಹಾಕಿಸಿದ ಸ್ಟೆಪ್ಪುಗಳು ಅತ್ಯದ್ಭುತವಾಗಿದ್ದವು. ‘ಯಮದೊಂಗ’ ಸಿನಿಮಾದ ಬಳಿಕ ಪ್ರೇಮ್ ರಕ್ಷಿತ್ ಹಣೆಬರಹವೇ ಬದಲಾಗಿಬಿಟ್ಟಿತು.

ಯಮದೊಂಗ ಬಳಿಕ ಜೂ ಎನ್​ಟಿಆರ್ ನಟಿಸಿದ ಪ್ರತಿ ಸಿನಿಮಾದಲ್ಲಿಯೂ ಪ್ರೇಮ್ ರಕ್ಷಿತ್ ಒಂದು ಹಾಡನ್ನಾದರೂ ಕೊರಿಯೊಗ್ರಫಿ ಮಾಡಿದ್ದಾರೆ. ತಮಿಳಿನ ವಿಜಯ್, ಅಲ್ಲು ಅರ್ಜುನ್, ರಾಮ್ ಪೋತಿನೇನಿ, ಮಹೇಶ್ ಬಾಬು, ಪ್ರಭಾಸ್, ಬಾಲಕೃಷ್ಣ, ರಾಮ್ ಚರಣ್ ತೇಜ ಇನ್ನೂ ಹಲವು ಅತ್ಯುತ್ತಮ ಡ್ಯಾನ್ಸರ್ ಕಮ್ ನಟರಿಗೆ ಪ್ರೇಮ್ ರಕ್ಷಿತ್ ಕೊರಿಯೊಗ್ರಫಿ ಮಾಡಿದ್ದಲ್ಲದೆ, ಹಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡರು. ಮಗಧೀರ, ಬಾಹುಬಲಿ ಸಿನಿಮಾಕ್ಕೂ ಪ್ರೇಮ್ ರಕ್ಷಿತ್ ಅವರದ್ದೇ ಕೊರಿಯೊಗ್ರಫಿ. ಹಾಡಿನ ಸನ್ನಿವೇಶ, ಸಿನಿಮಾದಲ್ಲಿ ನಾಯಕನ ಪಾತ್ರ, ಪಾತ್ರದ ವ್ಯಕ್ತಿತ್ವ, ಡ್ಯಾನ್ಸ್ ಮಾಡುವ ನಟ-ನಟಿಯರ ದೇಹಭಾಷೆಗಳನ್ನು ಅರಿತು ಕೊರಿಯೋಗ್ರಫಿ ಮಾಡುವುದು ಪ್ರೇಮ್ ರಕ್ಷಿತ್ ಶೈಲಿ. ಹಾಗಾಗಿಯೇ ಅವರು ಪ್ರತಿಬಾರಿಯೂ ಯಶಸ್ವಿಯಾಗುತ್ತಿದ್ದಾರೆ. ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದಾರೆ.

ಇನ್ನು ಆರ್​ಆರ್​ಆರ್ ಸಿನಿಮಾದ ನಾಟು-ನಾಟು ಹಾಡಿಗೆ ಬರುವುದಾದರೆ. ಆ ಸಿನಿಮಾದ ಕೇವಲ ನಾಲ್ಕು ಹುಕ್​ಸ್ಟೆಪ್​ಗಾಗಿ ನೂರಕ್ಕೂ ಹೆಚ್ಚು ಸ್ಟೆಪ್​ಗಳನ್ನು ರಾಜಮೌಳಿಗೆ ಕಳಿಸಿದ್ದರಂತೆ ಪ್ರೇಮ್ ರಕ್ಷಿತ್. ಆ ನೂರು ಸ್ಟೆಪ್ಪುಗಳಲ್ಲಿ ನಾಲ್ಕನ್ನು ರಾಜಮೌಳಿ ಆಯ್ಕೆ ಮಾಡಿದರು. ಅದು ಮಾತ್ರವೇ ಅಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ನಾಟು-ನಾಟು ಹಾಡಿನ ಡ್ಯಾನ್ಸ್​ನಲ್ಲಿಯೇ ಒಂದು ರೀತಿಯ ಕತೆ ಇದೆ. ಬ್ರಟೀಷರನ್ನು ಸೋಲಿಸುವ ಕತೆ, ಹೀರೋಗಳು ಪರಸ್ಪರರ ಮೇಲೆ ಸವಾಲೆಸೆಯುವ ಸನ್ನಿವೇಶವಿದೆ. ಹಾಡು ಕತೆಯ ಹೊರಗೆ ಇರದೆ ಕತೆಯ ಒಳಗೇ ಇರುವುದರಿಂದ ಅದಕ್ಕೆ ತಕ್ಕಂತೆ ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದೀಗ ನಾಟು-ನಾಟು ಬಳಿಕವಂತೂ ಪ್ರೇಮ್ ರಕ್ಷಿತ್​ ಬೇಡಿಕೆ ಇನ್ನಷ್ಟು ಹೆಚ್ಚಾಗಿದ್ದು, ಅವರ ಕೊರಿಯೋಗ್ರಫಿ ವಿಜಯಯಾತ್ರೆ ಹೀಗೆಯೇ ಸಾಗುತ್ತಲಿರಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Mon, 20 March 23