Natu-Natu: ನಾಟು-ನಾಟು ಹಾಡಿಗೆ ಡ್ಯಾನ್ಸ್ ಮಾಡುವುದು ಹೇಗೆ? ಚಿತ್ರ ನೋಡಿ ಕಲಿಯಿರಿ
ನಾಟು-ನಾಟು ಹಾಡಿಗೆ ಡ್ಯಾನ್ಸ್ ಮಾಡುವುದು ಹೇಗೆ? ನಾಟು ನಾಟು ಹಾಡಿಗೆ ಹೇಗೆ ಡ್ಯಾನ್ಸ್ ಮಾಡಬೇಕು ಎಂದು ಕಲಿಸುವ ರೇಖಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನೀವೂ ಕಲಿಯಿರಿ...
ಆರ್ಆರ್ಆರ್ (RRR) ಸಿನಿಮಾದ ನಾಟು ನಾಟು (Natu Natu) ಹಾಡು ಆಸ್ಕರ್ ಗೆದ್ದಾಗಿದೆ. ಒರಿಜಿನಲ್ ಹಾಡು ವಿಭಾಗದಲ್ಲಿ ಆಸ್ಕರ್ಗೆ ನಾಮಿನೇಟ್ (Oscar Nominate) ಆಗಿದ್ದ ಈ ಹಾಡಿಗಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಾಗೂ ಹಾಡು ಬರೆದ ಚಂದ್ರಭೋಸ್ ಜಂಟಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ನಾಟು-ನಾಟು ಹಾಡು ವಿಶ್ವದೆಲ್ಲೆಡೆ ಭಾರಿ ಜನಪ್ರಿಯತೆ ಗಳಿಸಿದೆ. ಇದಕ್ಕೆ ಕಾರಣ ಹಾಡಿನ ದೇಸಿ ತನ ಹಾಗೂ ಹಾಡಿಗೆ ಜೂ ಎನ್ಟಿಆರ್-ರಾಮ್ ಚರಣ್ ಹಾಕಿರುವ ಸ್ಟೆಪ್ಪುಗಳು. ಹಾಡಿನ ಸ್ಟೆಪ್ಪುಗಳನ್ನು ನಕಲು ಮಾಡಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆದರೆ ಈ ಹಾಡಿನ ಸ್ಟೆಪ್ಪುಗಳನ್ನು ನಕಲು ಮಾಡುವುದು ಅಷ್ಟು ಸುಲಭವಲ್ಲ. ಅದೂ ಹಾಡಿನ ವೇಗಕ್ಕೆ ತಕ್ಕಂತೆ ವೇಗವಾಗಿ ಕಾಲು-ಕೈಗಳನ್ನು ಸಂಯೋಜಿತ ರೀತಿಯಲ್ಲಿ ಕುಣಿಸುವುದು ಹರ ಸಾಹಸ. ಹಲವು ನೃತ್ಯ ಪ್ರವೀಣರೆ ಹಾಡಿನ ಸ್ಟೆಪ್ ಅನ್ನು ಕಲಿಯಲು ದಿನ ಗಟ್ಟಲೆ ವ್ಯಯಿಸಿದ್ದಾರೆ. ಅಷ್ಟೆ ಏಕೆ, ಸಿನಿಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ರಾಮ್ ಚರಣ್ ಅವರೇ ತಪ್ಪು ಹೆಜ್ಜೆಗಳನ್ನು ಹಾಕಿದ್ದನ್ನು ಅಭಿಮಾನಿಗಳು ಗುರುತಿಸಿದ್ದರು. ಆದರೆ ಈ ಸ್ಟೆಪ್ಪುಗಳನ್ನು ಸುಲಭವಾಗಿ ಹೇಗೆ ಮಾಡಬಹುದು ಎಂದು ಕಲಿಸುವ ರೇಖಾ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದಲ್ಲಿ ಜನಪ್ರಿಯವಾಗಿರುವ ಮಲಯಾಳಂ ಮನೋರಮಾ ಪತ್ರಿಕೆಯು ನಾಟು-ನಾಟು ಹಾಡಿನ ಸ್ಟೆಪ್ಪುಗಳನ್ನು ಸರಳವಾಗಿ ಕಲಿಸಿಕೊಡುವ ರೇಖಾಚಿತ್ರಗಳನ್ನು ಪತ್ರಿಕೆಯಲ್ಲಿ ಮುದ್ರಿಸಿದೆ. ನಾಟು-ನಾಟು ಹಾಡಿನಲ್ಲಿ ಜೂ ಎನ್ಟಿಆರ್ ಹಾಗೂ ರಾಮ್ ಚರಣ್ ಹಾಕುವ ಹುಕ್ ಸ್ಟೆಪ್ಗಳನ್ನು ಮಾಡುವ ವಿಧಾನ ವಿವರಿಸುವ ಸುಮಾರು 25ಕ್ಕೂ ಹೆಚ್ಚು ರೇಖಾ ಚಿತ್ರಗಳನ್ನು ರಚಿಸಿ ಮುದ್ರಿಸಲಾಗಿದೆ. ಈ ರೇಖಾ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಹೀಗೆ ಹಾಡಿನ ಸ್ಟೆಪ್ಪುಗಳನ್ನು ಮಾಡುವ ವಿಧಾನ ವಿವರಿಸಿರುವ ಪತ್ರಿಕೆಯ ಕ್ರಿಯಾಶೀಲತೆಗೆ ಹಲವು ನೆಟ್ಟಿಗರು ಭೇಷ್ ಎಂದಿದ್ದಾರೆ.
Why local newspapers, not national dailies, win India’s masses pic.twitter.com/F9hWeGh0db
— Nidheesh M K (@mknid) March 14, 2023
ನಾಟು ನಾಟು ಹಾಡಿನ ಸ್ಟೆಪ್ಪುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಹಲವು ಸೆಲೆಬ್ರಿಟಿಗಳು, ವೃತ್ತಿಪರ ಡ್ಯಾನ್ಸರ್ಗಳು ಸಹ ತಮ್ಮದೇ ರೀತಿಯಲ್ಲಿ ಈ ಹಾಡಿಗೆ ಸ್ಟೆಪ್ಪುಗಳನ್ನು ಹಾಕಿದ್ದಾರೆ. ಆದರೆ ಬಹಳ ಕಡಿಮೆ ಮಂದಿಯಷ್ಟೆ ಸಿನಿಮಾದಲ್ಲಿ ಜೂ ಎನ್ಟಿಆರ್-ರಾಮ್ ಚರಣ್ ಹಾಕಿದಂತೆ ಸರಿಯಾಗಿ ಸ್ಟೆಪ್ಪುಗಳನ್ನು ಹಾಕುವಲ್ಲಿ ಸಫಲರಾಗಿದ್ದಾರೆ.
ನಾಟು-ನಾಟು ಹಾಡಿಗೆ ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸ್ವತಃ ರಾಜಮೌಳಿ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿರುವಂತೆ, ನಾಟು ನಾಟು ಹಾಡಿಗಾಗಿ ಸುಮಾರು ನೂರು ಹುಕ್ ಸ್ಟೆಪ್ಗಳನ್ನು ಪ್ರೇಮ್ ರಕ್ಷಿತ್ ನೀಡಿದ್ದರಂತೆ. ಒಂದರ ಹಿಂದೊಂದರಂತೆ ಸ್ಟೆಪ್ಗಳ ವಿಡಿಯೋವನ್ನು ಪ್ರೇಮ್ ರಕ್ಷಿತ್ ಕಳಿಸುತ್ತಲೇ ಇದ್ದರಂತೆ. ಆದರೆ ಕೊನೆಗೆ ನಾಲ್ಕನ್ನಷ್ಟೆ ರಾಜಮೌಳಿ ಆಯ್ದುಕೊಂಡರಂತೆ. ಅದರಲ್ಲಿಯೂ ಒಂದು ಸ್ಟೆಪ್ ಶೂಟಿಂಗ್ ಸಮಯದಲ್ಲಿ ಬದಲಾಯಿತಂತೆ. ಏನೇ ಆಗಲಿ ನಾಟು-ನಾಟು ಹಾಡು ಆಸ್ಕರ್ ಗೆದ್ದಿದೆ, ಹಾಡಿನ ಸ್ಟೆಪ್ಸ್ ವಿಶ್ವವನ್ನೇ ಕುಣಿಸಿದೆ ಎಂಬುದು ಭಾರತೀಯರಿಗೆ ಹೆಮ್ಮೆಯ ವಿಷಯ.
ಇನ್ನಷ್ಟು ಸಿನಿಮಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:21 pm, Thu, 16 March 23