ಖ್ಯಾತ ಕೊರಿಯೋಗ್ರಾಫರ್​​ ಕೊವಿಡ್​ಗೆ ಬಲಿ; ಮತ್ತೆ ಹೆಚ್ಚಿತು ಆತಂಕ

| Updated By: ರಾಜೇಶ್ ದುಗ್ಗುಮನೆ

Updated on: Nov 28, 2021 | 9:47 PM

ಶಿವಶಂಕರ್​ ಅವರಿಗೆ ಕೊವಿಡ್​ ಕಾಣಿಸಿಕೊಂಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕೊವಿಡ್​ನಿಂದ ಅವರ ಶ್ವಾಸಕೋಶಕ್ಕೆ ಸಾಕಷ್ಟು ಹಾನಿ ಉಂಟಾಗಿತ್ತು. ಅವರ ಆರೋಗ್ಯ ಚೇತರಿಕೆ ಕಾಣಲೇ ಇಲ್ಲ.

ಖ್ಯಾತ ಕೊರಿಯೋಗ್ರಾಫರ್​​ ಕೊವಿಡ್​ಗೆ ಬಲಿ; ಮತ್ತೆ ಹೆಚ್ಚಿತು ಆತಂಕ
ಶಿವಶಂಕರ್
Follow us on

ಕೊರೊನಾ ವೈರಸ್​ ಆತಂಕ ಮತ್ತೆ ಹೆಚ್ಚಿದೆ. ಎಲ್ಲ ಕಡೆಗಳಲ್ಲೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸರ್ಕಾರಗಳು ಸೂಚಿಸಿವೆ. 2020-21ರಲ್ಲಿ ಚಿತ್ರರಂಗದ ಸಾಕಷ್ಟು ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ. 2021 ಪೂರ್ಣಗೊಳ್ಳುವುದಕ್ಕೂ ಮೊದಲು ಮತ್ತೆ ಕೊರೊನಾ ಅಬ್ಬರ ಶುರುವಾಗುವ ಲಕ್ಷಣ ಗೋಚರವಾಗಿದ್ದು, ಸಾಕಷ್ಟು ಆತಂಕ ಮೂಡಿಸಿದೆ. ಈಗ ಟಾಲಿವುಡ್​ನ ಖ್ಯಾತ ಕೊರಿಯೋಗ್ರಾಫರ್​ ಶಿವಶಂಕರ್​ ಅವರು ಕೊವಿಡ್​ನಿಂದ ನಿಧನ ಹೊಂದಿದ್ದಾರೆ. ಇಂದು (ನವೆಂಬರ್​ 28) ರಾತ್ರಿ 8 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಶಿವಶಂಕರ್​ ಅವರಿಗೆ ಕೊವಿಡ್​ ಕಾಣಿಸಿಕೊಂಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕೊವಿಡ್​ನಿಂದ ಅವರ ಶ್ವಾಸಕೋಶಕ್ಕೆ ಸಾಕಷ್ಟು ಹಾನಿ ಉಂಟಾಗಿತ್ತು. ಅವರ ಆರೋಗ್ಯ ಚೇತರಿಕೆ ಕಾಣಲೇ ಇಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆ. ಬೇಸರದ ಸಂಗತಿ ಎಂದರೆ ಶಿವಶಂಕರ್​ ಅವರ ಮಗ ಹಾಗೂ ಪತ್ನಿಗೂ ಕೊವಿಡ್​ ಅಂಟಿದೆ. ಮಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಪತ್ನಿ ಸುಗಣ್ಯಾ ಮನೆಯಲ್ಲಿ ಕ್ವಾರಂಟೈನ್​ ಆಗಿದ್ದಾರೆ.

ಸೋನು ಸೂದ್​, ಧನುಷ್​, ಚಿರಂಜೀವಿ ಮತ್ತು ಇತರರು ಶಿವಶಂಕರ್​ಗೆ ಸಹಾಯ ಮಾಡಲು ಮುಂದೆ ಬಂದಿದ್ದರು. ಶಿವಶಂಕರ್​ ಅವರ ಆಸ್ಪತ್ರೆ ಬಿಲ್​ಅನ್ನು ಸಂಪೂರ್ಣವಾಗಿ ತಾವು ಭರಿಸುವುದಾಗಿ ಸೋನು ಸೂದ್​ ಹೇಳಿದ್ದರು. ಆದರೆ, ಭಾನುವಾರ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ರಾತ್ರಿ ವೇಳೆಗೆ ಅವರು ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

1948ರಲ್ಲಿ ಶಿವಶಂಕರ್​ ಜನಿಸಿದರು. ನಿಧನ ಹೊಂದುವಾಗ ಅವರಿಗೆ 72 ವರ್ಷ ವಯಸ್ಸಾಗಿತ್ತು. ತೆಲುಗು, ತಮಿಳು,  ಮತ್ತು ಇತರ ಭಾಷೆಗಳಲ್ಲಿ ಅವರು ಕೆಲಸ ಮಾಡಿದ್ದರು. ರಿಯಾಲಿಟಿ ಶೋಗಳಲ್ಲೂ ಅವರು ಜಡ್ಜ್​ ಆಗಿದ್ದರು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಅವರಿಗೆ ಒಲಿದಿವೆ.

ಶಿವಶಂಕರ್ ನಿಧನಕ್ಕೆ ಸೋನು ಸೂದ್​ ಸಂತಾಪ ಸೂಚಿಸಿದ್ದಾರೆ. ‘ಶಿವಶಂಕರ್​ ಮಾಸ್ಟರ್​ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ, ದೇವರಿಗೆ ಬೇರೆ ಯೋಜನೆಗಳಿದ್ದವು. ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಮಾಸ್ಟರ್​. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ. ಸಿನಿಮಾ ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಇದು ಮರಳಿ ನಮ್ಮ ಮನೆಗಳನ್ನು ನಿರ್ಮಿಸುವ ಸಮಯ’; ಆಂಧ್ರಕ್ಕೆ ಸೋನು ಸೂದ್​ ಸಹಾಯ ಹಸ್ತ

Published On - 9:44 pm, Sun, 28 November 21