
ಇತ್ತೀಚೆಗೆ ‘ಬ್ಯಾನ್’, ‘ಬಾಯ್ಕಾಟ್’ ಪದಗಳು ಹೆಚ್ಚು ಟ್ರೆಂಡ್ನಲ್ಲಿವೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಕ್ಕೂ ‘ಬ್ಯಾನ್’, ‘ಬಾಯ್ಕಾಟ್’ ಪದಗಳು ಕೇಳಿ ಬರುತ್ತಿವೆ. ಅದರಲ್ಲೂ ಸಿನಿಮಾ ವಿಷಯದಲ್ಲಿ ತುಸು ಹೆಚ್ಚಾಗಿಯೇ ಇದೆ. ಬಹುತೇಕ ಸಿನಿಮಾಗಳ ವಿರುದ್ಧ ಬಾಯ್ಕಾಟ್, ಬ್ಯಾನ್ ಘೋಷಣೆಗಳು ಆಗುತ್ತಲೇ ಇರುತ್ತವೆ. ಬಾಲಿವುಡ್ (Bollywood) ಅಂತೂ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಡುವಷ್ಟು ಸಾಮಾನ್ಯ ಆಗಿಬಿಟ್ಟಿದೆ ಈ ಬ್ಯಾನ್ ಮತ್ತು ಬಾಯ್ಕಾಟ್. ಇದೀಗ ತೆಲುಗು ನಾಯಕ ನಟನೊಬ್ಬನ ವಿರುದ್ಧ ಕ್ರಿಶ್ಚಿಯನ್ ಸಮುದಾಯದ ಕೆಲವರು ಬ್ಯಾನ್ ಹೇರಲು ಮುಂದಾಗಿದ್ದಾರೆ.
ಹಾಸ್ಯಮಯ ಕೌಟುಂಬಿಕ ಸಿನಿಮಾಗಳನ್ನು ಮಾಡುತ್ತಾ ತಮ್ಮದೇ ಆದ ಅಭಿಮಾನಿ ವರ್ಗವನ್ನೇ ಸೃಷ್ಟಿಸಿಕೊಂಡಿರುವ ನಟ ಶ್ರೀ ವಿಷ್ಣು. ಪ್ರಚಲಿತದಲ್ಲಿರುವ ಮೀಮ್ಗಳು, ವಿಷಯಗಳನ್ನು ಬಳಸಿಕೊಂಡು ಅವಕ್ಕೆ ಹಾಸ್ಯದ ಲೇಪ ನೀಡಿ ಸಿನಿಮಾಗಳಲ್ಲಿ ಪ್ರಸ್ತುತ ಪಡಿಸುತ್ತಾರೆ. ಭಿನ್ನ ರೀತಿಯ ಹಾಸ್ಯ ಮತ್ತು ಮ್ಯಾನರಿಸಂಗಳ ಮೂಲಕ ಶ್ರೀ ತೇಜ ಯುವಜನತೆಯ ಜೊತೆಗೆ ಕುಟುಂಬ ಪ್ರೇಕ್ಷಕರನ್ನೂ ಸೆಳೆದಿದ್ದಾರೆ. ಇತ್ತೀಚೆಗಷ್ಟೆ ಇವರ ನಟನೆಯ ‘ಸಿಂಗಲ್’ ಸಿನಿಮಾ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ಶ್ರೀ ತೇಜ ವಿರುದ್ಧ ಕ್ರಿಶ್ಚಿಯನ್ ಸಮುದಾಯದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾ ತಂಡದ ಕ್ಷಮೆ ಕೇಳಿದ ನಟ ಶ್ರೀ ವಿಷ್ಣು
ಶ್ರೀ ತೇಜ ನಟನೆಯ ‘ಸಿಂಗಲ್’ ಸಿನಿಮಾನಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ. ಏಸು ಬಗ್ಗೆ ಹಾಸ್ಯ ಮಾಡಲಾಗಿದೆ ಎಂಬ ಕಾರಣ ನೀಡಿ ಸಿನಿಮಾ ಅನ್ನು ನೋಡದಂತೆ ಮನವಿ ಮಾಡಿರುವ ಸಮುದಾಯದ ಮುಖಂಡರು, ಶ್ರೀ ತೇಜ ನಟನೆಯ ಎಲ್ಲ ಸಿನಿಮಾಗಳನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ಶ್ರೀ ತೇಜ ನಟನೆಯ ಈ ಹಿಂದಿನ ಸಿನಿಮಾ ‘ಸ್ವಾಗ್’ನಲ್ಲಿಯೂ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಅವಹೇಳನ ಮಾಡಿದ್ದರು. ಅವರು ಉದ್ದೇಶಪೂರ್ವಕವಾಗಿ ಕ್ರಿಶ್ಚಿಯನ್ ಸಮುದಾಯವನ್ನು ಗುರಿಇಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಶ್ರೀ ತೇಜ ಅವರ ‘ಸಿಂಗಲ್’ ಸಿನಿಮಾನಲ್ಲಿ ನಟ ವೆನ್ನೆಲ ಕಿಶೋರ್ ನನ್ ರೀತಿ ವೇಷ ಧರಿಸುವ ದೃಶ್ಯವೊಂದಿದೆ ಅದು ಕೆಲ ಕ್ರಿಶ್ಚಿಯನ್ ಸಮುದಾಯದವರಿಗೆ ನೋವುಂಟು ಮಾಡಿದೆಯಂತೆ. ಅಂದಹಾಗೆ ಇದೇ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗಲೂ ವಿವಾದವಾಗಿತ್ತು. ಸಿನಿಮಾನಲ್ಲಿ ನಟ ಮಂಚು ವಿಷ್ಣು ಅವರ ‘ಕಣ್ಣಪ್ಪ’ ಸಿನಿಮಾದ ‘ಶಿವಯ್ಯ’ ಡೈಲಾಗ್ ಅನ್ನು ಬಳಸಲಾಗಿತ್ತು. ಅಲ್ಲದೆ ಅವರ ಕುಟುಂಬದ ಜಗಳದ ಸಂದರ್ಭದಲ್ಲಿ ಮೋಹನ್ಬಾಬು ಆಡಿದ್ದ ಮಾತೊಂಡನ್ನು ಸಹ ಬಳಸಿಕೊಳ್ಳಲಾಗಿತ್ತು. ಆದರೆ ಆ ಬಗ್ಗೆ ಮಂಚು ವಿಷ್ಣು ಆಕ್ಷೇಪಣೆ ಎತ್ತುತ್ತಿದ್ದಂತೆ ಶ್ರೀ ವಿಷ್ಣು ಆ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಿದ್ದಲ್ಲದೆ, ತಮ್ಮ ಉದ್ದೇಶ ನೋವುಂಟು ಮಾಡುವುದಲ್ಲವೆಂದು ನಗಿಸುವುದು ಮಾತ್ರವೇ ಆಗಿದೆಯೆಂದು ಸ್ಪಷ್ಟನೆ ನೀಡಿದ್ದರು. ಈಗ ಸಿನಿಮಾ ಹಿಟ್ ಆದ ಮೇಲೆ ಕ್ರಿಶ್ಚಿಯನ್ ಸಮುದಾಯದ ಕೆಲವರು ಸಿನಿಮಾ ಬಗ್ಗೆ ಆಕ್ಷೇಪಣೆ ತೆಗೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ