‘ಕಣ್ಣಪ್ಪ’ ಸಿನಿಮಾ ತಂಡದ ಕ್ಷಮೆ ಕೇಳಿದ ನಟ ಶ್ರೀ ವಿಷ್ಣು
Single movie trailer: ತೆಲುಗು ಸಿನಿಮಾ ‘ಸಿಂಗಲ್’ನ ಟ್ರೈಲರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಕೆಲ ತೆಲುಗು ನಟರ ಮೀಮ್ಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ ಇದಕ್ಕೆ ಮಂಚು ವಿಷ್ಣು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಈಗ ‘ಸಿಂಗಲ್’ ಸಿನಿಮಾದಿಂದ ಆ ದೃಶ್ಯಗಳನ್ನು ತೆಗೆದು ಹಾಕಲಾಗಿದೆ.

ತೆಲುಗು (Tollywood) ನಟ ಶ್ರೀವಿಷ್ಣು ತಮ್ಮ ರೊಮ್ಯಾಂಟಿಕ್-ಕಾಮಿಡಿ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿದ್ದಾರೆ. ಜನಪ್ರಿಯ ಮಾದರಿ ಆಗಿರುವ ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್ ಸ್ಟೋರಿ ಸಿನಿಮಾಗಳ ಹಿಂದೆ ಹೋಗದೆ, ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನು ಮಾಡುತ್ತಲೇ ನಾಯಕರಾಗಿ ತಮ್ಮದೇ ಆದ ಸ್ಥಾನವನ್ನು ತೆಲುಗು ಚಿತ್ರರಂಗದಲ್ಲಿ ಮಾಡಿಕೊಂಡಿದ್ದಾರೆ. ಅವರ ನಟನೆಯ ‘ಸಿಂಗಲ್’ (Single) ಹೆಸರಿನ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಆದರೆ ಆ ಟ್ರೈಲರ್ನಲ್ಲಿದ್ದ ಕೆಲ ಸಂಭಾಷಣೆಗಳ ಬಗ್ಗೆ ತೆಲುಗು ಕಲಾವಿದರ ಸಂಘದ ಅಧ್ಯಕ್ಷ, ನಟ ಮಂಚು ವಿಷ್ಣು ಅಸಮಾಧಾನ ಹೊರಹಾಕಿರುವ ಕಾರಣ ಇದೀಗ ಆ ಸನ್ನಿವೇಶಗಳನ್ನು ಚಿತ್ರತಂಡ ತೆಗೆದು ಹಾಕಿದೆ. ಶ್ರೀ ವಿಷ್ಣು ಸಹ ಬಹಿರಂಗ ಕ್ಷಮಾಪಣೆ ಕೇಳಿದ್ದಾರೆ.
ಶ್ರೀ ವಿಷ್ಣು ತಮ್ಮ ಸಿನಿಮಾಗಳಲ್ಲಿ ಪ್ರಚಲಿತದಲ್ಲಿರುವ ಮೀಮ್ಸ್ಗಳನ್ನು, ವೈರಲ್ ವಿಡಿಯೋ ಕಂಟೆಂಟ್ ಅನ್ನು ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ತೆಲುಗು ಸಿನಿಮಾ ಸ್ಟಾರ್ಗಳ ಬಗ್ಗೆ ಇರುವ ಮೀಮ್ಗಳನ್ನು ತೆಗೆದುಕೊಂಡು ಅದನ್ನು ಅಶ್ಲೀಲಗೊಳಿಸದೆ, ಯಾರಿಗೂ ನೋವಾಗದಂತೆ ಹಾಸ್ಯಮಯವಾಗಿ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಾರೆ. ‘ಸಿಂಗಲ್’ ಸಿನಿಮಾದಲ್ಲಿಯೂ ಆ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ಅದನ್ನು ಮಂಚು ವಿಷ್ಣುಗೆ ಸಹಿಸಲಾಗಿಲ್ಲ.
ಮಂಚು ವಿಷ್ಣು ನಟಿಸಿರುವ ‘ಕಣ್ಣಪ್ಪ’ ಸಿನಿಮಾದಲ್ಲಿ ಮಂಚು ವಿಷ್ಣು ‘ಶಿವಯ್ಯ’ ಎಂದು ಕರೆಯುವ ದೃಶ್ಯ ವೈರಲ್ ಆಗಿತ್ತು. ಅದರ ಮೇಲೆ ಮೀಮ್ ಸಹ ಆಗಿದ್ದವು. ಅದನ್ನೇ ಶ್ರೀ ವಿಷ್ಣು ಅವರ ‘ಸಿಂಗಲ್’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಟ್ರೈಲರ್ನ ಕೊನೆಗೆ ‘ಬದುಕು ಮಂಚು ಕುರಿಸಿಪೋಯಿಂದಿ’ (ಬದುಕು ಹಾಳಾಗಿ ಹೋಗಿದೆ ಎಂಬ ಭಾವಾರ್ಥ) ಎಂಬ ಸಾಲು ಸಹ ಇತ್ತು. ಅಸಲಿಗೆ ಈ ಡೈಲಾಗ್ ತೆಲುಗು ಭಾಷೆಯಲ್ಲಿ ಬಹಳ ಜನಪ್ರಿಯ ಆದರೆ ಟ್ರೈಲರ್ನಲ್ಲಿ, ಬಳಕೆಯಲ್ಲಿರುವ ಪದವನ್ನು ‘ಮಂಚು’ ಪದದಿಂದ ರೀಪ್ಲೇಸ್ ಮಾಡಿ ಬದಲಾಯಿಸಲಾಗಿದೆ.
ಇದನ್ನೂ ಓದಿ:ಮತ್ತೊಂದು ಟಾಲಿವುಡ್ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ
ಮಂಚು ಕುಟುಂಬದಲ್ಲಿ ನಡೆಯುತ್ತಿರುವ ವಿವಾದಗಳ ಕಾರಣದಿಂದ ಈ ಸಂಭಾಷಣೆಯನ್ನು ಬಳಸಲಾಗಿತ್ತು. ಇದರ ಬಗ್ಗೆಯೂ ಸಹ ಮಂಚು ವಿಷ್ಣು ಆಕ್ಷೇಪಣೆ ಎತ್ತಿರುವ ಕಾರಣ, ಇದೀಗ ಈ ಸಂಭಾಷಣೆಯನ್ನೂ ಸಹ ತೆಗೆದು ಹಾಕಲಾಗಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಶ್ರೀ ವಿಷ್ಣು, ‘ನಮ್ಮ ಸಿನಿಮಾದಲ್ಲಿ ಚಾಲ್ತಿಯಲ್ಲಿರುವ ಮೀಮ್ಗಳನ್ನು ಬಳಸಲಾಗಿತ್ತು. ಆದರೆ ಅದರಿಂದ ಕೆಲವರಿಗೆ ನೋವಾಗಿದೆ ಹಾಗಾಗಿ ಅದನ್ನು ನಾವು ತೆಗೆದಿದ್ದೇವೆ. ಟ್ರೈಲರ್ನಲ್ಲಿ ಬಾಲಕೃಷ್ಣ, ಚಿರಂಜೀವಿ ಅವರ ಸಂಭಾಷಣೆಗಳು ಸಹ ಇವೆ, ಅದನ್ನೆಲ್ಲ ನಾವು ಗೌರವದಿಂದ ಮಾಡಿದ್ದೇವೆ’ ಎಂದಿದ್ದಾರೆ.
‘ಸಿಂಗಲ್’ ಸಿನಿಮಾದಲ್ಲಿ ಶ್ರೀ ವಿಷ್ಣು ಜೊತೆಗೆ ಕೇತಿಕಾ ಶರ್ಮಾ, ಇವಾನಾ, ವೆನ್ನಿಲ ಕಿಶೋರ್, ವಿವಿಟಿ ಗಣೇಶ್ ಅವರುಗಳು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸಿ ರಾಜು. ಗೀತಾ ಆರ್ಟ್ಸ್ ಈ ಸಿನಿಮಾದ ವಿತರಣೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ