ಸೆಟ್ಟೇರಿತು ‘A for ಆನಂದ್’, ಕಾಣಸಿಗಲಿದ್ದಾರೆ ಡಿಫರೆಂಟ್ ಶಿವಣ್ಣ
Shiva Rajkumar: ನಟ ಶಿವರಾಜ್ ಕುಮಾರ್ ಸಾಲು-ಸಾಲಾಗಿ ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಶಿವಣ್ಣ ಆಕ್ಷನ್ ಹೀರೋ ಆದರೆ ಅವರು ತಮ್ಮ ದೀರ್ಘ ವೃತ್ತಿ ಜೀವನದಲ್ಲಿ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಶಿವಣ್ಣ ಆಕ್ಷನ್ ಸಿನಿಮಾ ಜಾನರ್ನಿಂದ ತುಸು ಪಕ್ಕಕ್ಕೆ ಸರಿದು ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ಎ ಫಾರ್ ಆನಂದ್’.

ಶಿವರಾಜ್ ಕುಮಾರ್ (Shiva Rajkumar) ಎಂದರೆ ಈಗಿನ ಜನರೇಷನ್ ಪ್ರೇಕ್ಷಕರಿಗೆ ಆಕ್ಷನ್ ಸಿನಿಮಾಗಳೇ ನೆನಪಾಗುತ್ತವೆ. ಕಳೆದ ಕೆಲ ವರ್ಷಗಳಲ್ಲಿ ಶಿವರಾಜ್ ಕುಮಾರ್ ಒಂದರ ಹಿಂದೊಂದು ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಿವಣ್ಣನ ಅರಸಿ ಬರುತ್ತಿರುವ ನಿರ್ದೇಶಕರೆಲ್ಲ ಬಹುತೇಕ ಆಕ್ಷನ್, ಥ್ರಿಲ್ಲರ್ ಕತೆಗಳನ್ನೇ ಅವರಿಗಾಗಿ ತರುತ್ತಿದ್ದಾರೆ. ಆದರೆ ಶಿವಣ್ಣ ತಮ್ಮ ವೃತ್ತಿ ಜೀವನದಲ್ಲಿ ಬಗೆ-ಬಗೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿಯವ, ತುಂಟ, ಅಮಾಯಕ, ಅಮರ ಪ್ರೇಮಿ, ಕ್ರಾಂತಿಕಾರಿ ಹೀಗೆ ಹಲವು ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ಶಿವಣ್ಣ ಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಹೆಸರು ‘ಎ ಫಾರ್ ಆನಂದ್’.
‘ಸುಂದರಕಾಂಡ’, ‘ದ್ರೋಣ’ ಸಿನಿಮಾಗಳಲ್ಲಿ ಶಿಕ್ಷಕರಾಗಿ ನಟಿಸಿದ್ದ ಶಿವಣ್ಣ, ಬಹಳ ವರ್ಷಗಳ ಬಳಿಕ ಈಗ ಮತ್ತೊಮ್ಮೆ ಶಿಕ್ಷಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ ಶಿಕ್ಷಕರಾಗಿ ನಟಿಸುತ್ತಿರುವ ‘A for ಆನಂದ್’ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಶುಕ್ರವಾರವಾದಂದು (ಮೇ 02) ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಿದ್ದು ವಿಶೇಷ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಶಿವಣ್ಣ, ‘ಶ್ರೀನಿ ಜೊತೆ ಇದು ಎರಡನೇ ಸಿನಿಮಾ. ಅವರು ನನಗೆ ಹದಿನೈದು ವರ್ಷದಿಂದ ಸ್ನೇಹಿತರು. ಶಿವ ಸಿನಿಮಾಗಾಗಿ ಫೋಟೋಶೂಟ್ ಮಾಡಿದ್ದರು. ಅಂದಿನಿಂದ ಪರಿಚಯ. ಅಂದಿನಿಂದ ಒಂದು ಕಥೆ ಇದೆ ಎಂದು ಹೇಳುತ್ತಿದ್ದರು. ಮಕ್ಕಳನ್ನು ಯಾವ ರೀತಿ ಓದಿಸಬೇಕು, ಅವರನ್ನು ದಾರಿಗೆ ತರಬೇಕು ಅನ್ನೋದೇ ‘A for ಆನಂದ್’ ಕಥೆ ತಿರುಳು. ಸ್ಕ್ರೀನ್ ಪ್ಲೇಯನ್ನು ಶ್ರೀನಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳಾತ್ಯಂಕ್ಕೆ ಶೂಟಿಂಗ್ ಹೊರಡುತ್ತೇವೆ. ಈ ಚಿತ್ರದಲ್ಲಿ ಆರು ಹಾಡುಗಳು ಬರುತ್ತವೆ. ನನ್ನ ಚಿತ್ರದಲ್ಲಿ ತುಂಬಾ ದಿನಗಳ ಬಳಿಕ ಇಷ್ಟು ಹಾಡು ಇರುತ್ತಿವೆ. ಆನಂದ್ ನಮ್ಮ ತಾಯಿ ಹೆಸರಿಟ್ಟಿದ್ದು, ಈ ಆನಂದ್ ಮಕ್ಕಳ ಮುಖದಲ್ಲಿ ಆನಂದ ತರುತ್ತಾನೆ’ ಎಂದರು.
ಇದನ್ನೂ ಓದಿ:ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್, ತುಂಬಾ ದಿನದಿಂದ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಮಕ್ಕಳಿಗೆ ಶಿಕ್ಷಣ ಮುಖ್ಯ. ಆದರೆ ಇಂದು ಅವರಿಗೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಒತ್ತಡ ಇಲ್ಲದೇ ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳುತ್ತೇವೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಾರೆ. ಎ ಫಾರ್ ಆನಂದ್ ಚಿತ್ರದ ಟೈಟಲ್ ತುಂಬಾ ಇಷ್ಟವಾಯ್ತು. ಈ ಚಿತ್ರದಿಂದ ತಂದೆ ತಾಯಿ ಮಕ್ಕಳ ಹೇಗೆ ಓದಿಸಬೇಕು ಅಂತಾ ತಿಳಿದುಕೊಳ್ಳುತ್ತಾರೆ. ಜೊತೆಗೆ ಈ ಸಿನಿಮಾದಿಂದ ಜನ ಥಿಯೇಟರ್‌ಗೆ ಬರುವ ರೀತಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದರು.
ನಿರ್ದೇಶಕ ಶ್ರೀನಿ ಮಾತನಾಡಿ, ‘ಘೋಸ್ಟ್’ ಆಕ್ಷನ್ ಥ್ರಿಲ್ಲರ್ ಸಿನಿಮಾ, ಇದು ಸಂಪೂರ್ಣ ಭಿನ್ನವಾದ ಸಿನಿಮಾ, ‘A for ಆನಂದ್’ ಕೌಟುಂಬಿಕ ಸಿನಿಮಾ ಜೊತೆಗೆ ಮಕ್ಕಳಿಗೂ ಕನೆಕ್ಟ್ ಆಗುತ್ತದೆ. ಇದು ನನ್ನ ಪಾಲಿಗೆ ಸವಾಲಿನ ಸಿನಿಮಾ, ಅಕ್ಟೋಬರ್ ತಿಂಗಳಲ್ಲಿ ಶಿವಮೊಗ್ಗದ ಸಾಗರ ಆ ಕಡೆ ಸಿನಿಮಾ ಚಿತ್ರೀಕರಣ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ ಎಂದಿದ್ದಾರೆ.
‘ಎ ಫಾರ್ ಆನಂದ್’ ಸಿನಿಮಾವನ್ನು ಶಿವಣ್ಣನವರ ಹೋಮ್ ಬ್ಯಾನರ್ ಆಗಿರುವ ಗೀತಾ ಪಿಕ್ಚರ್ಸ್ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ‘ವೇದ’, ‘ಭೈರತಿ ರಣಗಲ್’ ಬಳಿಕ ಗೀತಾ ಪಿಕ್ಚರ್ಸ್ಗೆ ಇದು ಮೂರನೇ ಸಿನಿಮಾ. ಶಿವರಾಜ್ ಕುಮಾರ್ ಹಾಗೂ ಶ್ರೀನಿ ಕಾಂಬಿನೇಷನ್ನ ‘ಘೋಸ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ್ದ ಚಿತ್ರ ಹಾಗೂ ತಾಂತ್ರಿಕ ತಂಡವೇ ‘ಎ ಫಾರ್ ಆನಂದ್’ ಸಿನಿಮಾಕ್ಕೂ ಕೆಲಸ ಮಾಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ